ನವದೆಹಲಿ: ದೇಶದ ರಾಜಧಾನಿ ದೆಹಲಿಯಲ್ಲಿ ಮಾಲಿನ್ಯ ನಿಯಂತ್ರಣ ಹಾಗೂ ಇಂಧನ ಉಳಿತಾಯದ ನಿಟ್ಟಿನಲ್ಲಿ ದೆಹಲಿ ಸರ್ಕಾರ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ. ಇಂದಿನಿಂದಲೇ ಜಾರಿಗೆ ಬರುವಂತೆ ಸರ್ಕಾರಿ ಕಚೇರಿಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ವಾರದಲ್ಲಿ ಎರಡು ದಿನ ‘ವರ್ಕ್ ಫ್ರಮ್ ಹೋಮ್’ (ಮನೆಯಿಂದಲೇ ಕೆಲಸ) ವ್ಯವಸ್ಥೆಯನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ.
ಸರ್ಕಾರದ ಹೊಸ ನಿಯಮಾವಳಿಗಳ ಪ್ರಕಾರ, ಇನ್ನು ಮುಂದೆ ಪ್ರತಿ ವಾರ ಇಬ್ಬರು ದಿನಗಳ ಕಾಲ ಸಿಬ್ಬಂದಿ ಕಚೇರಿಗೆ ಬರುವ ಅಗತ್ಯವಿರುವುದಿಲ್ಲ. ವಾರದ ಪ್ರತಿ ಬುಧವಾರ ಮತ್ತು ಶನಿವಾರ ಅಧಿಕಾರಿಗಳು ಹಾಗೂ ನೌಕರರು ಮನೆಯಿಂದಲೇ ತಮ್ಮ ಕಚೇರಿ ಕೆಲಸಗಳನ್ನು ನಿರ್ವಹಿಸಬೇಕಾಗುತ್ತದೆ.
ತುರ್ತು ಸೇವೆಗಳಿಗೆ ವಿನಾಯಿತಿ
ದೆಹಲಿ ಸರ್ಕಾರದ ಈ ಹೊಸ ‘ವರ್ಕ್ ಫ್ರಮ್ ಹೋಮ್’ ಆದೇಶವು ಎಲ್ಲಾ ಇಲಾಖೆಗಳಿಗೂ ಅನ್ವಯಿಸುವುದಿಲ್ಲ. ಸಾರ್ವಜನಿಕರ ಹಿತದೃಷ್ಟಿಯಿಂದ ಅತ್ಯಗತ್ಯ ಹಾಗೂ ತುರ್ತು ಸೇವೆಗಳನ್ನು ಒದಗಿಸುವ ಆರೋಗ್ಯ ಇಲಾಖೆ ಸೇರಿದಂತೆ ಕೆಲವು ಪ್ರಮುಖ ಇಲಾಖೆಗಳಿಗೆ ಈ ನಿಯಮದಿಂದ ವಿನಾಯಿತಿ ನೀಡಲಾಗಿದೆ. ಇವುಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಸರ್ಕಾರಿ ಕಚೇರಿಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಈ ನಿಯಮ ಕಡ್ಡಾಯವಾಗಿರುತ್ತದೆ.
ಕಚೇರಿ ಅವಧಿಯಲ್ಲೂ ಬದಲಾವಣೆ
ವಾರದಲ್ಲಿ ಎರಡು ದಿನ ಮನೆಯಿಂದ ಕೆಲಸ ಮಾಡುವ ಸೌಲಭ್ಯ ನೀಡುವುದರ ಜೊತೆಗೆ, ದೆಹಲಿ ಸರ್ಕಾರವು ಕಚೇರಿ ಸಮಯದಲ್ಲೂ ಕೆಲವು ಪ್ರಮುಖ ಬದಲಾವಣೆಗಳನ್ನು ಮಾಡಿದೆ. ಕಚೇರಿಗಳಿಗೆ ಬರುವ ದಿನಗಳಲ್ಲಿ ವಾಹನ ದಟ್ಟಣೆಯನ್ನು ನಿಯಂತ್ರಿಸುವ ಉದ್ದೇಶದಿಂದ ಈ ಸಮಯದ ಪರಿಷ್ಕರಣೆ ಮಾಡಲಾಗಿದ್ದು, ಸಿಬ್ಬಂದಿಗಳು ಹೊಸ ವೇಳಾಪಟ್ಟಿಯನ್ನೇ ಅನುಸರಿಸಬೇಕಾಗುತ್ತದೆ.
ಪ್ರಧಾನಿ ಮೋದಿ ಸಲಹೆಗೆ ದೆಹಲಿ ಸರ್ಕಾರ ಸಾಥ್
ಪೆಟ್ರೋಲ್ ಮತ್ತು ಡೀಸೆಲ್ ಬಳಕೆಯನ್ನು ಕಡಿಮೆ ಮಾಡಿ, ಇಂಧನ ಉಳಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಕರೆ ನೀಡಿದ್ದರು. ಪ್ರಧಾನಿಯವರ ಈ ಮಹತ್ವದ ಸಲಹೆಯನ್ನು ಸ್ವೀಕರಿಸಿರುವ ದೆಹಲಿ ಸರ್ಕಾರ, ಪರಿಸರ ಸಂರಕ್ಷಣೆ ಹಾಗೂ ಇಂಧನ ಉಳಿತಾಯದ ಹಿತದೃಷ್ಟಿಯಿಂದ ಈ ಕ್ರಾಂತಿಕಾರಿ ಆದೇಶವನ್ನು ಜಾರಿಗೆ ತಂದಿದೆ.
ಪರಿಸರಸ್ನೇಹಿ ವಾಹನಗಳ ಬಳಕೆಗೆ ಕರೆ
ಸರ್ಕಾರದ ಪ್ರಮುಖ ಮನವಿ: ವಾಯು ಮಾಲಿನ್ಯಕ್ಕೆ ಬ್ರೇಕ್ ಹಾಕಲು ಸಾರ್ವಜನಿಕರು ಹಾಗೂ ಸರ್ಕಾರಿ ನೌಕರರು ಇನ್ಮುಂದೆ ಎಲೆಕ್ಟ್ರಿಕ್ ವಾಹನಗಳ (EV) ಬಳಕೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಸಾಧ್ಯವಾದಷ್ಟು ಮಟ್ಟಿಗೆ ಖಾಸಗಿ ವಾಹನಗಳನ್ನು ಬದಿಗಿಟ್ಟು, ಮೆಟ್ರೋ ಮತ್ತು ಬಸ್‌ಗಳಂತಹ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನೇ ಹೆಚ್ಚಾಗಿ ಬಳಸಿಕೊಳ್ಳಬೇಕು ಎಂದು ದೆಹಲಿ ಸರ್ಕಾರ ಜನರಲ್ಲಿ ವಿನಂತಿಸಿದೆ.








