ಬೆಂಗಳೂರು : ಒಂದು ಕಡೆ ರಾಜ್ಯದ ಜನರು ಸಿಲಿಂಡರ್ ಸಿಗದೆ ಪರದಾಡುತ್ತಿದ್ದರೆ, ಮತ್ತೊಂದು ಕಡೆ ದಿನದಿಂದ ದಿನಕ್ಕೆ ಏರುತ್ತಿರುವ ತರಕಾರಿ ಬೆಲೆ ಜನರಿಗೆ ಸಂಕಷ್ಟ ಇನ್ನಷ್ಟು ಹೆಚ್ಚು ಮಾಡಿದೆ. ಕಳೆದ ಹದಿನೈದು ದಿನಕ್ಕೆ ಹೋಲಿಸಿದರೆ ಕೆಲವು ತರಕಾರಿಗಳ ಬೆಲೆ ಎರಡು ಪಟ್ಟು ಹೆಚ್ಚಳವಾಗಿದೆ.
ಬಿಸಿಲಿನ ತಾಪಕ್ಕೆ ತರಕಾರಿಗಳ ಹೂವು ಉದುರುತ್ತಿದ್ದು, ಇತ್ತೀಚೆಗೆ ಕೆಲವೆಡೆ ಸುರಿದ ಭಾರೀಮಳೆಯಿಂದಲೂ ಇಳುವರಿ ಕಡಿಮೆ ಆಗಿರುವುದು ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ. ವಿವಾಹ, ಊರ ಹಬ್ಬ, ಜಾತ್ರೆ, ರಥೋತ್ಸವಗಳ ಹಿನ್ನೆಲೆಯಲ್ಲಿ ತರಕಾರಿಗೆ ಬೇಡಿಕೆ ಹೆಚ್ಚಾಗಿದ್ದು ಪೂರೈಕೆಯ
ಪ್ರಮಾಣ ಕಡಿಮೆ ಇರುವುದೂ ಸಹ ದರ ಹೆಚ್ಚಳಕ್ಕೆ ಕಾರಣವಾಗಿದೆ. 10 ದಿನದ ಹಿಂದೆ ಕೆಜಿ ಬೀನ್ಸ್‌ಗೆ 80 ರುಪಾಯಿ ಇದ್ದದ್ದು ಈಗ 200 ರು ತಲುಪಿದೆ. ಬೀನ್ಸ್‌ಗೆ ಡಿಮ್ಯಾಂಡ್ ಹೆಚ್ಚಾಗಿರುವುದರಿಂದ ಬೆಲೆ ಅಧಿಕವಾಗಿದೆ. ವಾರದ ಹಿಂದೆ ಕೆಜಿ ಕ್ಯಾರೆಟ್‌ಗೆ 30 ರು. ಇದ್ದದ್ದು ಈಗ 60 ರು. ಆಗಿದೆ. 120 ರು. ಇದ್ದ ಬಟಾಣಿ 360 ರು. ಆಗಿದೆ. 120 ರು. ಇದ್ದ ಡಬಲ್ ಬೀನ್ಸ್ 260 ಕೈ, 30 ರು. ಇದ್ದ ಸೌತೆ ಕಾಯಿ 60 ರುಪಾಯಿಗೆ, ಒಂದು ಕೆಜಿ ಟೊಮೆಟೋ 30 ರು. ಇದ್ದದ್ದು ಈಗ 60 ರುಪಾಯಿ ಆಗಿದೆ. ಹಸಿ ಮೆಣಸಿನ ಕಾಯಿ 70 ರು.ನಿಂದ 95 ರು.ಗೆ, ಬೀಟ್ ರೂಟ್ 45 ರುಪಾಯಿಯಿಂದ 70 ರುಪಾಯಿಗೆ, ಕ್ಯಾಪ್ಟಿಕಮ್ 65 ರಿಂದ 90, ಎಲೆಕೋಸು 30 ರಿಂದ 50, ಹೂ ಕೋಸು 40 ರಿಂದ 65 ರುಪಾಯಿಗೆ ಹೆಚ್ಚಳವಾಗಿದೆ.








