ಬೆಂಗಳೂರು : ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಜಾಗತಿಕ ಪರಿಣಾಮಗಳು ಇದೀಗ ನೇರವಾಗಿ ಭಾರತದ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕುತ್ತಿವೆ. ಇಂಧನ ಮತ್ತು ಆಹಾರ ಪದಾರ್ಥಗಳ ಬೆಲೆ ಏರಿಕೆಯ ಬೆನ್ನಲ್ಲೇ, ಇದೀಗ ಜೀವ ರಕ್ಷಕ ಔಷಧಗಳ ಬೆಲೆಯೂ ಗಗನಕ್ಕೇರುತ್ತಿರುವುದು ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿದೆ. ಕರ್ನಾಟಕ ಫಾರ್ಮಾ ಮೆಡಿಕಲ್ ಅಸೋಸಿಯೇಷನ್ ನೀಡಿರುವ ಮಾಹಿತಿಯ ಪ್ರಕಾರ, ಮಾರುಕಟ್ಟೆಗೆ ಬರುತ್ತಿರುವ ಹೊಸ ಬ್ಯಾಚ್‌ನ ಔಷಧಗಳ ಬೆಲೆಯಲ್ಲಿ ಸರಾಸರಿ ಶೇಕಡಾ 15 ರಿಂದ 20 ರಷ್ಟು ಹೆಚ್ಚಳವಾಗಿದೆ.
ಯುದ್ಧದ ಹಿನ್ನೆಲೆಯಲ್ಲಿ ಜಾಗತಿಕ ಪೂರೈಕೆ ಸರಪಳಿ (Supply Chain) ಸಂಪೂರ್ಣವಾಗಿ ಏರುಪೇರಾಗಿರುವುದು ಈ ಬೆಲೆ ಏರಿಕೆಗೆ ಮುಖ್ಯ ಕಾರಣವಾಗಿದೆ. ಮಾತ್ರೆಗಳು ಮತ್ತು ಸಿರಪ್‌ಗಳ ತಯಾರಿಕೆಗೆ ಪೆಟ್ರೋ ಕೆಮಿಕಲ್ಸ್ ಅತ್ಯಗತ್ಯ ಕಚ್ಚಾವಸ್ತುವಾಗಿದೆ. ಆದರೆ ಮಧ್ಯಪ್ರಾಚ್ಯದ ಬಿಕ್ಕಟ್ಟಿನಿಂದಾಗಿ ಕಚ್ಚಾ ತೈಲ ಮತ್ತು ಪೆಟ್ರೋ ಕೆಮಿಕಲ್ಸ್ ಆಮದು ವೆಚ್ಚ ದುಬಾರಿಯಾಗಿದೆ. ಸಾಗಣೆ ಸಮಯ ಹಾಗೂ ವೆಚ್ಚ ಎರಡೂ ಹೆಚ್ಚಾಗಿರುವುದರಿಂದ, ಫಾರ್ಮಾ ಕಂಪನಿಗಳು ಅನಿವಾರ್ಯವಾಗಿ ಹೊಸ ಬ್ಯಾಚ್‌ನ ಮೆಡಿಸಿನ್‌ಗಳ ದರವನ್ನು ಹಂತ ಹಂತವಾಗಿ ಏರಿಕೆ ಮಾಡುತ್ತಿವೆ.
ಈ ದರ ಏರಿಕೆಯ ಬಿಸಿ ಕೇವಲ ಸಾಮಾನ್ಯ ಕಾಯಿಲೆಗಳಿಗಷ್ಟೇ ಸೀಮಿತವಾಗಿಲ್ಲ. ನಿತ್ಯವೂ ಬಳಸುವ ಬಿಪಿ (ರಕ್ತದೊತ್ತಡ), ಶುಗರ್ (ಮಧುಮೇಹ), ಕಾರ್ಡಿಯಾಕ್ ಡ್ರಗ್ಸ್ (ಹೃದ್ರೋಗದ ಔಷಧಗಳು), ಗ್ಯಾಸ್ಟ್ರಿಕ್ ಟ್ಯಾಬ್ಲೆಟ್, ಕಾಫ್ ಸಿರಪ್, ಐರನ್ ಟಾನಿಕ್ ಹಾಗೂ ಜ್ವರಕ್ಕೆ ಬಳಸುವ ಪ್ಯಾರಾಸಿಟಮಾಲ್ ಸೇರಿದಂತೆ ಸುಮಾರು 600ಕ್ಕೂ ಹೆಚ್ಚು ಅಗತ್ಯ ಔಷಧಗಳ ಬೆಲೆ ಸದ್ದಿಲ್ಲದೆ ಹೆಚ್ಚಾಗುತ್ತಿದೆ. ದಿನನಿತ್ಯ ಮಾತ್ರೆಗಳನ್ನೇ ನಂಬಿ ಬದುಕುವ ವೃದ್ಧರು ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಇದು ಅರಗಿಸಿಕೊಳ್ಳಲಾಗದ ತರಹದ ದೊಡ್ಡ ಹೊಡೆತವಾಗಿದೆ.
ಔಷಧಗಳ ಜೊತೆಗೆ ದೈನಂದಿನ ಬಳಕೆಯ ಕಾಸ್ಮೆಟಿಕ್ಸ್ (ಸೌಂದರ್ಯವರ್ಧಕಗಳು) ಮತ್ತು ಬೇಬಿ ಪ್ರಾಡಕ್ಟ್ಸ್ (ಮಕ್ಕಳ ಆರೈಕೆಯ ಉತ್ಪನ್ನಗಳು) ಬೆಲೆಯಲ್ಲೂ ಗಣನೀಯ ಏರಿಕೆ ಕಂಡುಬಂದಿದೆ. ಮಕ್ಕಳ ಪೌಡರ್, ಸೋಪ್, ಲೋಷನ್ ಹಾಗೂ ಕ್ರೀಮ್‌ಗಳ ದರಗಳು ಕೂಡ ಗ್ರಾಹಕರಿಗೆ ಶಾಕ್ ನೀಡುತ್ತಿವೆ. ಅತ್ಯಗತ್ಯ ವಸ್ತುಗಳ ಪಟ್ಟಿಯಲ್ಲಿರುವ ಇವುಗಳ ಬೆಲೆ ಏರಿಕೆಯು ಪ್ರತಿಯೊಂದು ಕುಟುಂಬದ ಮಾಸಿಕ ಬಜೆಟ್ ಅನ್ನು ಏರುಪೇರು ಮಾಡಿದೆ.
ಅತಿ ಮುಖ್ಯವಾದ ವಿಷಯವೆಂದರೆ, ಈ ಬೆಲೆ ಏರಿಕೆಯ ಆಟ ಸದ್ಯಕ್ಕಂತೂ ನಿಲ್ಲುವ ಲಕ್ಷಣಗಳು ಕಾಣಿಸುತ್ತಿಲ್ಲ. ಮಧ್ಯಪ್ರಾಚ್ಯದಲ್ಲಿ ಯುದ್ಧದ ಪರಿಸ್ಥಿತಿ ತಿಳಿಗೊಂಡು, ಜಾಗತಿಕ ಮಾರುಕಟ್ಟೆ ಮತ್ತು ಪೂರೈಕೆ ವ್ಯವಸ್ಥೆ ಯಥಾಸ್ಥಿತಿಗೆ ಬರುವವರೆಗೂ ಈ ದರ ಏರಿಕೆಯ ಪ್ರಕ್ರಿಯೆ ನಿರಂತರವಾಗಿ ಮುಂದುವರಿಯಲಿದೆ ಎಂದು ಕರ್ನಾಟಕ ಫಾರ್ಮಾ ಮೆಡಿಕಲ್ ಅಸೋಸಿಯೇಷನ್ ಸ್ಪಷ್ಟಪಡಿಸಿದೆ. ಇದು ಸಾರ್ವಜನಿಕ ವಲಯದಲ್ಲಿ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.








