ಬಾಗಲಕೋಟೆ : ದಾವಣಗೆರೆ ಉಪಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಈಗಾಗಲೇ ದೊಡ್ಡ ದೊಡ್ಡ ಕಾಂಗ್ರೆಸ್ ಮುಖಂಡರನ್ನು ಅಮಾನತುಗೊಳಿಸಲಾಗಿದೆ. ಅದರ ಬೆನ್ನಲ್ಲೆ ಬಾಗಲಕೋಟೆಯಲ್ಲೂ ಕೂಡ ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ, ಮೂವರು ಕಾಂಗ್ರೆಸ್ ಮುಖಂಡರನ್ನು ಅಮಾನತುಗೊಳಿಸಲಾಗಿದೆ.
ಹೌದು ದಾವಣಗೆರೆ ಆಯ್ತು ಇದೀಗ ಬಾಗಲಕೋಟೆಯಲ್ಲಿ ಅಮಾನತು ಶಿಕ್ಷೆ ಮುಂದುವರೆದಿದ್ದು, ಉಪಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ಆರೋಪ ಹಿನ್ನೆಲೆಯಲ್ಲಿ ಕಮತಗಿ ಪಟ್ಟಣದ ಮೂರು ಕಾಂಗ್ರೆಸ್ ಮುಖಂಡರನ್ನು ಅಮಾನತುಗೊಳಿಸಲಾಗಿದೆ. ಬಾಗಲಕೋಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿ ಕಮತಗಿ ಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ಚರಂತಿಮಠ ಅವರಿಗೆ ಬೆಂಬಲ ನೀಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
ಈ ಆರೋಪದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡ ಮತ್ತು ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಮುರುಗೇಶ್, ಕಮತಗಿ ಪಟ್ಟಣ ಪಂಚಾಯತ್ ಸದಸ್ಯರಾದ ರಮೇಶ್ ಜಮಖಂಡಿ ಹಾಗೂ ಗುರುಲಿಂಗ ಪಾಟೀಲ್ ಸೇರಿದಂತೆ ಮೂವರು ಮುಖಂಡರನ್ನು ಅಮಾನತುಗೊಳಿಸಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ನಂಜಯ್ಯಮಠ ಅವರು ಈ ಕ್ರಮ ಕೈಗೊಂಡಿದ್ದಾರೆ.
ಕಾರಣ ಕೇಳಿ ಮೂವರಿಗೂ ನಂಜಯ್ಯನ ಮಠ ಅವರು ನೋಟೀಸ್ ನೀಡಿದ್ದರು. ಮೂವರ ವಿರುದ್ಧ ಸ್ಥಳೀಯ ಮುಖಂಡರು ಗಂಭೀರವಾದ ಆರೋಪ ಮಾಡಿದ್ದರು. ಉಚ್ಚಾಟನೆ ಮಾಡಲು ನಂಜಯ್ಯನಮಠ ಅವರಿಗೆ ಕಾಂಗ್ರೆಸ್ ಗ್ರಾಮೀಣ ಘಟಕದ ಅಧ್ಯಕ್ಷ ಎಸ್ ಎನ್ ರಾಂಪುರ ಪತ್ರ ಬರೆದಿದ್ದರು. ಅಲ್ಲದೆ ಮೂವರು ಮುಖಂಡರಿಂದ ಸಮರ್ಪಕವಾದ ಉತ್ತರ ಬಾರದ ಹಿನ್ನೆಲೆಯಲ್ಲಿ ಅಮಾನತು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.








