ಕಲಬುರ್ಗಿ : ಕಲಬುರ್ಗಿಯ ಜಿಮ್ಸ್ ಆಸ್ಪತ್ರೆಯಲ್ಲಿ ಮತ್ತೊಂದು ಯಡವಟ್ಟು ಆಗಿದ್ದು, ಆಸ್ಪತ್ರೆಯ ಮೂರನೇ ಮಹಡಿಯಲ್ಲಿ ಇಂದು ಬೆಳಿಗ್ಗೆ ಲಿಫ್ಟ್ ನಲ್ಲಿ ತೆರಳುವಾಗ ತಾಂತ್ರಿಕ ದೋಷದಿಂದ ಲಿಫ್ಟ್ ಮಧ್ಯದಲ್ಲೇ ಲಾಕ್ ಆಗಿದೆ. ಈ ವೇಳೆ ಲಿಫ್ಟ್ ನಲ್ಲಿದ್ದ 8 ಜನ ಸಿಬ್ಬಂದಿಗಳು ಪರದಾಟ ನಡೆಸಿದ್ದಾರೆ.
ಹೌದು ಇಂದು ಕಲಬುರಗಿ ಜಿಮ್ಸ್ ಆಸ್ಪತ್ರೆಯಲ್ಲಿ ಲಿಫ್ಟ್ ತಾಂತ್ರಿಕ ದೋಷದಿಂದ 8 ಸಿಬ್ಬಂದಿ ಸಿಲುಕಿ ಒಂದು ಗಂಟೆಗೂ ಹೆಚ್ಚು ಕಾಲ ಆತಂಕ ಅನುಭವಿಸಿದ್ದಾರೆ. ಮೂರನೇ ಮಹಡಿಯಲ್ಲಿ ಸ್ಥಗಿತಗೊಂಡ ಲಿಫ್ಟ್‌ನಿಂದ ಸಿಬ್ಬಂದಿಯನ್ನು ರಕ್ಷಿಸಲು ಗೋಡೆ ಒಡೆಯಬೇಕಾಯಿತು.ಬೆಳಿಗ್ಗೆ 10 ಗಂಟೆ ಸುಮಾರಿಗೆ, ಗ್ರೌಂಡ್ ಫ್ಲೋರ್‌ನಿಂದ 6ನೇ ಮಹಡಿಗೆ ತೆರಳಲು 8 ಜನ ಸಿಬ್ಬಂದಿ ಲಿಫ್ಟ್ ಹತ್ತಿದ್ದಾರೆ.
ಆದರೆ ಕೊಂಡೊಯ್ಯುತ್ತಿದ್ದ ಲಿಫ್ಟ್, ಮೂರನೇ ಮಹಡಿಯಲ್ಲಿ ತಾಂತ್ರಿಕ ದೋಷದಿಂದ ಸ್ಥಗಿತಗೊಂಡಿದೆ. ಈ ಲಿಫ್ಟ್ ಮೂರನೇ ಮಹಡಿಗೆ ಸಂಪರ್ಕವಿಲ್ಲದ ಕಾರಣ, ಆ ಮಹಡಿಯ ಬಾಗಿಲಿಗೆ ಗೋಡೆ ನಿರ್ಮಿಸಲಾಗಿತ್ತು. ಇದರಿಂದ ಲಿಫ್ಟ್‌ನ ದ್ವಾರ ತೆರೆಯಲು ಸಾಧ್ಯವಾಗದೆ, ಸಿಬ್ಬಂದಿ ಗಾಳಿ ಮತ್ತು ಬೆಳಕಿಲ್ಲದ ವಾತಾವರಣದಲ್ಲಿ ತಾಸುಗಟ್ಟಲೇ ನಿಂತಲ್ಲೇ ನಿಂತು ಆತಂಕಪಡುವಂತಾಯಿತು.
ತಕ್ಷಣ ಗೋಡೆ ಒಡೆದು ಎಲ್ಲ ಸಿಬ್ಬಂದಿಗಳನ್ನ ರಕ್ಷಣೆ ಮಾಡಲಾಯಿತು.ಹೊರಬಂದ ಬಳಿಕ ಎಲ್ಲರಿಗೂ ತಕ್ಷಣವೇ ವೈದ್ಯಕೀಯ ಉಪಚಾರ ನೀಡಲಾಯಿತು. ಆರೋಗ್ಯ ತಪಾಸಣೆಯ ನಂತರ, ಸಿಬ್ಬಂದಿಯನ್ನು ಕರ್ತವ್ಯಕ್ಕೆ ಮರಳಿ ಕಳುಹಿಸಲಾಗಿದೆ ಎಂದು ಜಿಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ