ಬೆಂಗಳೂರು: ಎಸ್ಸಿ, ಎಸ್ಟಿ ಮೀಸಲಾತಿ ( SC, ST Reservation ) ಹೆಚ್ಚಳದ ಕುರಿತಂತೆ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಈ ಮೂಲಕ ಬಿಜೆಪಿ ತನ್ನ ರಾಜಕೀಯ ಇಚ್ಛಾಶಕ್ತಿಯನ್ನು ಪ್ರದರ್ಶಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ( BJP State President Nalin Kumar Kateel ) ಅವರು ತಿಳಿಸಿದ್ದಾರೆ.
ಈ ನಿರ್ಧಾರಕ್ಕಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ( Chief Minister Basavaraj Bommai ) ಮತ್ತು ಸಚಿವ ಸಂಪುಟದ ( Karnataka Cabinet Meeting ) ಸದಸ್ಯರನ್ನು ಅವರು ಅಭಿನಂದಿಸಿದ್ದಾರೆ. ಬೇರೆ ರಾಜಕೀಯ ಪಕ್ಷಗಳಿಗೆ ರಾಜಕೀಯ ಇಚ್ಛಾಶಕ್ತಿಯ ಕೊರತೆ ಇತ್ತು. ಅವರೆಲ್ಲರೂ ಇದನ್ನು ಮುಂದಕ್ಕೆ ಹಾಕುತ್ತ ಬಂದಿದ್ದರು. ಪ್ರಸ್ತುತ ಜನಸಂಖ್ಯೆ ಆಧಾರದಡಿ ಮೀಸಲಾತಿ ನಿರ್ಧಾರ ಆಗಬೇಕಿದೆ. 1950ರಲ್ಲಿ ಮಾಡಿದ ಜನಗಣತಿ ಆಧಾರದಲ್ಲಿ ಮೀಸಲಾತಿ ಪ್ರಮಾಣ ನಿಗದಿಪಡಿಸಲಾಗಿತ್ತು. ಅದರ ಸ್ಥೂಲ ಮಾರ್ಪಾಡಿನೊಂದಿಗೆ ಪ್ರಸ್ತುತ ಇರುವ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡುವ ಕ್ರಾಂತಿಕಾರಿ ನಿರ್ಧಾರವನ್ನು ಕರ್ನಾಟಕ ಬಿಜೆಪಿ ಸರಕಾರ ತೆಗೆದುಕೊಂಡಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದು ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದ ಜ್ವಲಂತ ಸಮಸ್ಯೆ. ಇದಕ್ಕಾಗಿ ಅನೇಕ ಆಯೋಗಗಳ ರಚನೆ ಮಾಡಲಾಗಿತ್ತು. ನ್ಯಾ. ನಾಗಮೋಹನ್ ದಾಸ್ ಆಯೋಗದ ಶಿಫಾರಸಿನ ಅನ್ವಯ ರಾಜ್ಯ ಸರಕಾರವು ಇದಕ್ಕೆ ಒಪ್ಪಿಗೆ ಕೊಟ್ಟು ಜಾರಿಗೆ ತರುವ ಪ್ರಯತ್ನದಲ್ಲಿದೆ. ಹಿಂದೆ ಕುಲದೀಪ್ ಸಿಂಗ್ ಆಯೋಗದ ಶಿಫಾರಸಿನಡಿ ಬಿಜೆಪಿ, ಸರ್ವವ್ಯಾಪಿ, ಸರ್ವಸ್ಪರ್ಶಿಯಾಗಿ ಪ್ರತಿಯೊಂದು ಸಮಾಜವನ್ನು ಮೇಲಕ್ಕೆ ತರುವುದರಲ್ಲಿ ನಂಬಿಕೆ ಇಟ್ಟ ಪಕ್ಷ. ಬಡವರು, ಶೋಷಿತರಿಗೆ ಬೇಕಾದ ಎಲ್ಲ ಅಗತ್ಯ ಮೀಸಲಾತಿಯ ಸವಲತ್ತನ್ನು ಕೊಡುವ ದಿಟ್ಟ ಮತ್ತು ದೃಢ ನಿರ್ಧಾರವನ್ನು ಬಿಜೆಪಿ ತೆಗೆದುಕೊಂಡಿದೆ ಎಂದು ತಿಳಿಸಿದ್ದಾರೆ.
ಬೇರೆ ಬೇರೆ ರಾಜ್ಯಗಳಲ್ಲಿ ಇಂಥ ಸಮಸ್ಯೆ ಕಾಣಿಸಿಕೊಂಡಾಗ ಇದಕ್ಕೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರವು ಜಸ್ಟಿಸ್ ರೋಹಿಣಿ ಆಯೋಗವನ್ನು ನೇಮಿಸಿದೆ. ಈ ಆಯೋಗದ ಶಿಫಾರಸು ಲಭಿಸಿದ ಬಳಿಕ ಮಿಕ್ಕ ಎಲ್ಲ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಆದರಣೀಯ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಹುದಿನಗಳ ಬೇಡಿಕೆ, ಆಗ್ರಹ ಈಡೇರಿಸುವ ವಿಜಯದಶಮಿಯ ದೊಡ್ಡದಾದ ಉಡುಗೊರೆ ಇದಾಗಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಇದರಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಬದುಕಿನ ಒಳಿತಿಗೆ ಅನುಕೂಲ ಆಗಲಿದೆ. ಅವರ ಅಂತಸ್ಸತ್ವದ ಪುನರ್ ಜಾಗೃತಿಗೆ ಇದು ಪೂರಕ ಎಂದು ಆಶಿಸಿದ್ದಾರೆ.