ದಕ್ಷಿಣಕನ್ನಡ : ಅನುಮತಿ ಪಡೆಯದೆ ಠಾಣೆಯ ಆವರಣದಲ್ಲಿ ಪ್ರತಿಭಟನೆ ನಡೆಸಿದ್ದು, ಹಾಗೂ ಪಿ ಎಸ್ ಐ ಗೆ ಧಮ್ಕಿ ಹಾಕಿದ ಆರೋಪದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಬಿಜೆಪಿ ಶಾಸಕ ಹರೀಶ್ ಪೂಂಜಾ ಅವರನ್ನು ಬಂಧಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಶಾಸಕ ಹರೀಶ್ ಪೂಂಜಾ ಅವರನ್ನು ಬಂಧಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಇದೀಗ ಹರೀಶ್ ಪೂಂಜಾ ನಿವಾಸದಲ್ಲಿ ಬಿಜೆಪಿ ನಾಯಕರ ಸಭೆ ಮುಂದುವರೆದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗುರ್ಡಡಿ ಗ್ರಾಮದಲ್ಲಿ ಹರೀಶ್ ಪೂಂಜಾ ನಿವಾಸದಲ್ಲಿ ಸಭೆ ಮುಂದುವರೆದಿದೆ.ಸಂಸದ ನಳಿನ್ ಕುಮಾರ್ ಕಟೀಲು ನೇತೃತ್ವದಲ್ಲಿ ನಾಯಕರ ಸಭೆ ನಡೆಯುತ್ತಿದೆ.
ಜಿಲ್ಲೆಯ ಶಾಸಕರು ಬಿಜೆಪಿ ನಾಯಕರು ಶಾಸಕ ಹರೀಶ್ ಪೂಂಜಾ ಭಾಗಿಯಾಗಿದ್ದಾರೆ. ಒಂದು ವೇಳೆ ಶಾಸಕ ಹರೀಶ್ ಪೂಂಜಾರನ್ನು ಬಂಧಿಸಿದರೆ ದಕ್ಷಿಣಕನ್ನಡ ಜಿಲ್ಲಾ ಬಂದ್ ಗೆ ಕರೆ ನೀಡಲು ತೀರ್ಮಾನಿಸಲಾಗಿದೆ. ಸದ್ಯ ಪೊಲೀಸರ ಮುಂದಿನ ನಡೆಗಾಗಿ ಬಿಜೆಪಿ ನಾಯಕರು ಕಾಯುತ್ತಿದ್ದಾರೆ ಎಂದು ತಿಳಿದುಬಂದಿದೆ.