ಚಿತ್ರದುರ್ಗ : ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೂರ್ತಿ ಮುರುಘಾ ಶರಣರನ್ನು ಬಂಧಿಸಿದ ನಂತರ ದಾವಣಗೆರೆಯ ವಿರಕ್ತ ಮಠದ ಶ್ರೀ ಬಸವಪ್ರಭು ಅವರನ್ನು ಮುರುಘಾ ಮಠದ ಉಸ್ತುವಾರಿ ಪೀಠಾಧಿಪತಿಯಾಗಿ ನೇಮಿಸಲಾಗಿದೆ.
ಶಿವಮೂರ್ತಿ ಶರಣರಿಂದ ಲಿಂಗದೀಕ್ಷೆಯನ್ನು ಸ್ವೀಕರಿಸಿದ ವಿರಕ್ತ ಮಠದ ಶ್ರೀ ಬಸವಪ್ರಭು ಮಾತನಾಡಿ, ‘ಮಠದ ಧಾರ್ಮಿಕ ಆಚರಣೆಗಳು ಮತ್ತು ಇತರ ವ್ಯವಹಾರಗಳನ್ನು ಪ್ರತಿದಿನವೂ ನಿರ್ವಹಿಸುವಂತೆ ಮಠಾಧೀಶರು ನನಗೆ ಆದೇಶಿಸಿದ್ದಾರೆ. ನಾನು ನನ್ನ ಗುರುವಿನ ಆಜ್ಞೆಯನ್ನು ಅನುಸರಿಸಲು ನಿರ್ಧರಿಸಿದ್ದೇನೆ. ಮಠದ ಎಲ್ಲಾ ಚಟುವಟಿಕೆಗಳು ಸುಸೂತ್ರವಾಗಿ ನಡೆಯುವಂತೆ ನೋಡಿಕೊಳ್ಳಲು ನಾನು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತೇನೆ ಎಂದಿದ್ದಾರೆ.
ಇದಕ್ಕೂ ಮುನ್ನ ಮಾಜಿ ಸಚಿವ ಎಚ್.ಏಕಾಂತಯ್ಯ ನೇತೃತ್ವದ ಮಠದ ಅನುಯಾಯಿಗಳ ನಿಯೋಗವು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ ಶಿವಮೂರ್ತಿ ಶರಣರು ನ್ಯಾಯಾಂಗ ಬಂಧನದಲ್ಲಿರುವುದರಿಂದ ಮಠಕ್ಕೆ ಮುಂದಿನ ಪೀಠಾಧಿಪತಿಯನ್ನು ನೇಮಿಸುವಂತೆ ಮನವಿ ಮಾಡಿತ್ತು.