ಬೆಂಗಳೂರು: ರಾಜ್ಯದಲ್ಲಿ ಇತ್ತೀಚೆಗಷ್ಟೇ ಬೀಯರ್ ದರ ಗಣನೀಯವಾಗಿ ಇಳಿಕೆಯಾಗಿದ್ದರಿಂದ ಮದ್ಯಪ್ರಿಯರು ಖುಷಿಯಾಗಿದ್ದರು. ಆದರೆ ಆ ಸಂತಸದ ಬೆನ್ನಲ್ಲೇ ಈಗ ಮತ್ತೊಂದು ಶಾಕ್ ಎದುರಾಗಿದೆ. ಬೆಲೆ ಕಡಿಮೆಯಾದ ಕಾರಣ ಬೀಯರ್‌ಗೆ ಎಲ್ಲಿಲ್ಲದ ಬೇಡಿಕೆ ಸೃಷ್ಟಿಯಾಗಿದ್ದು, ಮಾರುಕಟ್ಟೆಯಲ್ಲಿ ಸದ್ಯ ಸ್ಟಾಕ್ ಕೊರತೆ (ಬರ) ಎದುರಾಗಿದೆ. ಗ್ರಾಹಕರು ಕೇಳಿದಷ್ಟು ಬೀಯರ್ ಪೂರೈಸಲು ಮದ್ಯದಂಗಡಿಗಳಿಗೆ ಸಾಧ್ಯವಾಗುತ್ತಿಲ್ಲ.
ಏನಿದು ಹೊಸ ತೆರಿಗೆ ನೀತಿ?
ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕ ಸರ್ಕಾರವು ‘ಆಲ್ಕೋಹಾಲ್ ಇನ್ ಬೇವರೆಜ್’ (AIB) ಎಂಬ ಹೊಸ ತೆರಿಗೆ ಪದ್ಧತಿಯನ್ನು ಜಾರಿಗೆ ತಂದಿದೆ. ಮೇ 11 ರಿಂದ ಜಾರಿಗೆ ಬಂದಿರುವ ಈ ವಿನೂತನ ನಿಯಮದ ಪ್ರಕಾರ, ಮದ್ಯದಲ್ಲಿರುವ ಆಲ್ಕೋಹಾಲ್ ಪ್ರಮಾಣದ ಆಧಾರದ ಮೇಲೆ ತೆರಿಗೆಯನ್ನು ನಿಗದಿಪಡಿಸಲಾಗುತ್ತಿದೆ. ಈ ಹೊಸ ವ್ಯವಸ್ಥೆಯಿಂದಾಗಿ ಬೀಯರ್ ಮೇಲಿನ ತೆರಿಗೆ ಹೊರೆ ಕಡಿಮೆಯಾಗಿ, ಅದರ ಮಾರಾಟದ ಬೆಲೆ ಭಾರಿ ಪ್ರಮಾಣದಲ್ಲಿ ಕುಸಿದಿದೆ.
ಬೆಲೆ ಇಳಿದರೂ ಸಿಗುತ್ತಿಲ್ಲ ಹೊಸ ದರದ ಬೀಯರ್!
ಹೊಸ ಎಐಬಿ ಪದ್ಧತಿ ಜಾರಿಗೆ ಬಂದು ಸುಮಾರು 20 ದಿನಗಳು ಕಳೆದಿದ್ದರೂ, ಮಾರುಕಟ್ಟೆಯಲ್ಲಿ ಇನ್ನೂ ಹಳೆಯ ದುಬಾರಿ ಬೆಲೆಯ ಸ್ಟಾಕ್‌ಗಳೇ ಹೆಚ್ಚಾಗಿ ಮಾರಾಟವಾಗುತ್ತಿವೆ ಎಂಬ ಆರೋಪ ಕೇಳಿಬರುತ್ತಿದೆ. ಕೆಲವು ಬಾರ್, ರೆಸ್ಟೋರೆಂಟ್‌ಗಳು ಹಾಗೂ ವೈನ್ ಶಾಪ್‌ಗಳ ಮಾಲೀಕರು ಹಳೆಯ ಲೇಬಲ್ ತೋರಿಸಿ ಗ್ರಾಹಕರಿಂದ ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದಾರೆ ಎನ್ನಲಾಗಿದೆ. ಇದಕ್ಕೆ ಕಾರಣ ಕೇಳಿದರೆ, “ನಮ್ಮಲ್ಲಿ ಇನ್ನೂ ಹಳೆಯ ದಾಸ್ತಾನು ಖಾಲಿಯಾಗಿಲ್ಲ, ಎಲ್ಲಾ ಬ್ರ್ಯಾಂಡ್‌ಗಳ ಹೊಸ ಬೆಲೆಯ ಲೇಬಲ್‌ಗಳು ಸಂಪೂರ್ಣವಾಗಿ ಲಭ್ಯವಾಗಿಲ್ಲ” ಎಂದು ಸಬೂಬು ನೀಡುತ್ತಿದ್ದಾರೆ.
ಕಿಂಗ್ ಫಿಷರ್ ಗೆ ಭಾರಿ ಡಿಮ್ಯಾಂಡ್: ಬೆಲೆ ಎಷ್ಟು ಕಡಿಮೆಯಾಗಿದೆ?
ವಿಶೇಷವಾಗಿ ಕಿಂಗ್‌ಫಿಷರ್ ಬೀಯರ್ ಬೆಲೆಯಲ್ಲಿ ದೊಡ್ಡ ಮಟ್ಟದ ಕುಸಿತ ಕಂಡಿರುವುದರಿಂದ ಇದಕ್ಕೆ ಭಾರಿ ಬೇಡಿಕೆ ಬಂದಿದೆ.
650 ಎಂಎಲ್ ಪ್ರೀಮಿಯಂ ಬೀಯರ್: ₹185 ಇದ್ದದ್ದು ಈಗ ₹110 ಕ್ಕೆ ಇಳಿದಿದೆ.
ಪಿಂಟ್ ಬೀಯರ್: ₹125 ರಿಂದ ಕೇವಲ ₹60 ಕ್ಕೆ ಕುಸಿದಿದೆ.
ಅರ್ಧ ಲೀಟರ್ ಟಿನ್: ₹145 ರ ಬದಲಿಗೆ ₹80 ಆಗಿದೆ.
350 ಎಂಎಲ್ ಟಿನ್: ₹100 ರಿಂದ ₹60 ಕ್ಕೆ ಇಳಿಕೆಯಾಗಿದೆ.
ಈ ಭಾರಿ ದರ ಕಡಿತದಿಂದಾಗಿ ಎಂದಿಗಿಂತ ಎರಡು ಪಟ್ಟು ಹೆಚ್ಚು ಬೇಡಿಕೆ ಸೃಷ್ಟಿಯಾಗಿದೆ. ಆದರೆ ಕರ್ನಾಟಕ ರಾಜ್ಯ ಪಾನೀಯ ನಿಗಮದಿಂದ (KSBCL) ಮದ್ಯದಂಗಡಿಗಳಿಗೆ ನಿರೀಕ್ಷಿತ ಪ್ರಮಾಣದಲ್ಲಿ ಹೊಸ ಸ್ಟಾಕ್ ಪೂರೈಕೆಯಾಗುತ್ತಿಲ್ಲ.








