ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಿದ್ದು, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮೊದಲ ಬಾರಿಗೆ ಅಧಿಕಾರ ಹಿಡಿಯಲಿದೆ. ಈ ಮೂಲಕ ಕಳೆದ 15 ವರ್ಷಗಳಿಂದ ರಾಜ್ಯವಾಳುತ್ತಿದ್ದ ಟಿಎಂಸಿ ಮತ್ತು ಮಮತಾ ಬ್ಯಾನರ್ಜಿ ಅವರ ಆಡಳಿತಕ್ಕೆ ತೆರೆ ಬೀಳಲಿದೆ. ಈಗ ಎಲ್ಲರ ಕುತೂಹಲ ಇರುವುದು “ಬಂಗಾಳದ ಮುಂದಿನ ಮುಖ್ಯಮಂತ್ರಿ ಯಾರು?” ಎಂಬ ಪ್ರಶ್ನೆಯ ಮೇಲೆ.
ಮುಖ್ಯಮಂತ್ರಿ ಸ್ಥಾನಕ್ಕೆ ರೇಸ್ನಲ್ಲಿರುವ ಪ್ರಮುಖ ನಾಯಕರು ಇವರು:
1. ಸುವೇಂದು ಅಧಿಕಾರಿ
ಬಿಜೆಪಿಯ ಫೈರ್ ಬ್ರಾಂಡ್ ನಾಯಕ ಎಂದೇ ಗುರುತಿಸಿಕೊಂಡಿರುವ ಸುವೇಂದು ಅಧಿಕಾರಿ ಪ್ರಸ್ತುತ ಸಿಎಂ ರೇಸ್ನಲ್ಲಿ ಮುಂಚೂಣಿಯಲ್ಲಿದ್ದಾರೆ. ನಂದಿಗ್ರಾಮದ ಹಾಲಿ ಶಾಸಕರಾಗಿರುವ ಇವರು, ಈ ಬಾರಿ ನಂದಿಗ್ರಾಮ ಮತ್ತು ಭವಾನಿಪುರ ಎರಡೂ ಕ್ಷೇತ್ರಗಳಿಂದ ಸ್ಪರ್ಧಿಸಿದ್ದಾರೆ. 2021ರಲ್ಲಿ ಮಮತಾ ಬ್ಯಾನರ್ಜಿ ಅವರನ್ನೇ ಸೋಲಿಸಿದ್ದ ಇವರು, ಈ ಬಾರಿಯೂ ಭವಾನಿಪುರದಲ್ಲಿ ಮಮತಾ ವಿರುದ್ಧ ನೇರ ಹಣಾಹಣಿ ನಡೆಸುತ್ತಿದ್ದಾರೆ. ವಿಧಾನಸಭೆಯ ಪ್ರತಿಪಕ್ಷ ನಾಯಕರಾಗಿರುವ ಇವರಿಗೆ ಪಕ್ಷದೊಳಗೆ ಹೆಚ್ಚಿನ ಬೆಂಬಲವಿದೆ.
2. ದಿಲೀಪ್ ಘೋಷ್
ಪಶ್ಚಿಮ ಬಂಗಾಳ ಬಿಜೆಪಿಯ ಹಿರಿಯ ನಾಯಕ ಹಾಗೂ ಮಾಜಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್ ಸಿಎಂ ಸ್ಥಾನದ ಪ್ರಬಲ ಆಕಾಂಕ್ಷಿ. ಆರ್ಎಸ್ಎಸ್ ಪ್ರಚಾರಕರಾಗಿ ವೃತ್ತಿ ಆರಂಭಿಸಿದ್ದ ಇವರು, 2014ರಲ್ಲಿ ಬಿಜೆಪಿ ಸೇರಿದ್ದರು. ಖರಗ್ಪುರ ಸದರ್ ಕ್ಷೇತ್ರದ ಅಭ್ಯರ್ಥಿಯಾಗಿರುವ ಇವರು, ಈ ಹಿಂದೆ ಸಂಸದರಾಗಿಯೂ ಸೇವೆ ಸಲ್ಲಿಸಿದ್ದಾರೆ. ರಾಜ್ಯದಲ್ಲಿ ಸಂಘಟನೆಯನ್ನು ಬಲಪಡಿಸುವಲ್ಲಿ ಇವರ ಪಾತ್ರ ಮಹತ್ವದ್ದಾಗಿದೆ.
3. ಸುಕಾಂತ ಮಜುಂದಾರ್
ಬಾಲುರ್ಘಾಟ್ ಲೋಕಸಭಾ ಕ್ಷೇತ್ರದ ಸಂಸದರಾಗಿರುವ ಡಾ. ಸುಕಾಂತ ಮಜುಂದಾರ್ ಪ್ರಸ್ತುತ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಂಗಾಳ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಕೆಲಸ ಮಾಡಿರುವ ಇವರು ಕೇಂದ್ರ ನಾಯಕತ್ವಕ್ಕೆ ಅತ್ಯಂತ ಆಪ್ತರು. ಉತ್ತರ ಬಂಗಾಳ ವಿಶ್ವವಿದ್ಯಾಲಯದಿಂದ ಪಿಎಚ್ಡಿ ಪದವಿ ಪಡೆದಿರುವ ಇವರು ಸುಶಿಕ್ಷಿತ ನಾಯಕರಾಗಿದ್ದು, ಪಕ್ಷದ ಹೈಕಮಾಂಡ್ ಇವರ ಹೆಸರನ್ನೂ ಪರಿಗಣಿಸುವ ಸಾಧ್ಯತೆಯಿದೆ.
4. ಅಗ್ನಿಮಿತ್ರ ಪಾಲ್
ಫ್ಯಾಷನ್ ಡಿಸೈನರ್ ವೃತ್ತಿ ಬಿಟ್ಟು ರಾಜಕೀಯಕ್ಕೆ ಬಂದ ಅಗ್ನಿಮಿತ್ರ ಪಾಲ್, ಬಿಜೆಪಿಯ ಪ್ರಮುಖ ಮಹಿಳಾ ನಾಯಕಿ. ಪ್ರಸ್ತುತ ಅಸನ್ಸೋಲ್ ದಕ್ಷಿಣ ಕ್ಷೇತ್ರದ ಶಾಸಕಿಯಾಗಿರುವ ಇವರು, ಮಹಿಳಾ ಮೋರ್ಚಾದ ಜವಾಬ್ದಾರಿಯನ್ನೂ ನಿಭಾಯಿಸಿದ್ದಾರೆ. ರಾಜ್ಯದಲ್ಲಿ ಮಹಿಳಾ ಮತದಾರರನ್ನು ಸೆಳೆಯುವಲ್ಲಿ ಇವರು ಯಶಸ್ವಿಯಾಗಿದ್ದು, ಒಂದು ವೇಳೆ ಬಿಜೆಪಿ ಮಹಿಳಾ ಸಿಎಂಗೆ ಮಣೆ ಹಾಕಿದರೆ ಇವರ ಹೆಸರು ಮುನ್ನೆಲೆಗೆ ಬರಲಿದೆ.
5. ರೂಪಾ ಗಾಂಗುಲಿ
ಮಹಾಭಾರತ ಧಾರಾವಾಹಿಯ ‘ದ್ರೌಪದಿ’ ಪಾತ್ರದ ಮೂಲಕ ದೇಶಾದ್ಯಂತ ಪರಿಚಿತರಾಗಿರುವ ನಟಿ ರೂಪಾ ಗಾಂಗುಲಿ ಸದ್ಯ ಸೋನಾರ್ಪುರ ದಕ್ಷಿಣ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ರಾಜ್ಯಸಭಾ ಸಂಸದೆಯಾಗಿ ಮತ್ತು ಮಹಿಳಾ ಮೋರ್ಚಾ ಅಧ್ಯಕ್ಷೆಯಾಗಿ ಕೆಲಸ ಮಾಡಿದ ಅನುಭವ ಹೊಂದಿರುವ ರೂಪಾ ಅವರು ಸಿಎಂ ರೇಸ್ನಲ್ಲಿರುವ ಮತ್ತೊಂದು ಪ್ರಮುಖ ಮಹಿಳಾ ಮುಖ.








