ನವದೆಹಲಿ: ಶ್ವಾಸಕೋಶದ ಕ್ಯಾನ್ಸರ್ (Lung Cancer) ಜಗತ್ತಿನ ಅತ್ಯಂತ ಭೀಕರ ಕಾಯಿಲೆಗಳಲ್ಲಿ ಒಂದಾಗಿದೆ. ಬಹುತೇಕ ಪ್ರಕರಣಗಳಲ್ಲಿ ಇದು ಕೊನೆಯ ಹಂತದಲ್ಲಿ ಪತ್ತೆಯಾಗುವುದರಿಂದ ಚಿಕಿತ್ಸೆ ನೀಡುವುದು ಕಷ್ಟಸಾಧ್ಯವಾಗುತ್ತದೆ. ಆದರೆ, ಇದೀಗ ವೈದ್ಯಕೀಯ ಲೋಕದಲ್ಲಿ ಮಹತ್ವದ ಮೈಲಿಗಲ್ಲೊಂದು ದಾಖಲಾಗಿದ್ದು, ಶ್ವಾಸಕೋಶದ ಕ್ಯಾನ್ಸರ್ ಬರುವ ಐದು ವರ್ಷಗಳ ಮುಂಚಿತವಾಗಿಯೇ ಅದನ್ನು ರಕ್ತ ಪರೀಕ್ಷೆಯ ಮೂಲಕ ಮುನ್ಸೂಚನೆ ಪಡೆಯಬಹುದು ಎಂದು ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ.
ಖ್ಯಾತ ‘ಸೆಲ್’ (Cell) ನಿಯತಕಾಲಿಕೆಯಲ್ಲಿ ಪ್ರಕಟವಾದ ಸಂಶೋಧನೆಯ ಪ್ರಕಾರ, ರಕ್ತದಲ್ಲಿನ 14-ಪ್ರೊಟೀನ್ ಸಂಯೋಜನೆಯು (14-protein blood signature) ವ್ಯಕ್ತಿಯೊಬ್ಬನಿಗೆ ಮುಂದಿನ 5.6 ವರ್ಷಗಳಲ್ಲಿ ಶ್ವಾಸಕೋಶದ ಕ್ಯಾನ್ಸರ್ ಬರುವ ಸಾಧ್ಯತೆ ಇದೆಯೇ ಎಂಬುದನ್ನು ನಿಖರವಾಗಿ ಗುರುತಿಸಬಲ್ಲದು. ಇದು ಆರಂಭಿಕ ಹಂತದಲ್ಲೇ ತಪಾಸಣೆ ನಡೆಸಿ, ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ತಜ್ಞರಿಗೆ ಸಹಕಾರಿಯಾಗಲಿದೆ.
‘ಇದು ವಿಜ್ಞಾನ ಲೋಕದ ಮಹತ್ವದ ಮುನ್ನಡೆ’
ಏಮ್ಸ್ (AIIMS) ದೆಹಲಿಯ ವಿಕಿರಣ ದ್ರವ್ಯಶಾಸ್ತ್ರಜ್ಞ (Radiation Oncologist) ಡಾ. ಅಭಿಷೇಕ್ ಶಂಕರ್ ಅವರ ಪ್ರಕಾರ, “ಇದು ವಿಜ್ಞಾನ ಲೋಕದ ಅತ್ಯಂತ ಪ್ರಮುಖ ಮುನ್ನಡೆಯಾಗಿದೆ. ಈ ರಕ್ತ ಪರೀಕ್ಷೆಯು ನೇರವಾಗಿ ಗಡ್ಡೆಯನ್ನು (Tumour) ಪತ್ತೆಹಚ್ಚುವುದಿಲ್ಲ. ಬದಲಿಗೆ, ಭವಿಷ್ಯದಲ್ಲಿ ಶ್ವಾಸಕೋಶದ ಕ್ಯಾನ್ಸರ್ ತುತ್ತಾಗಬಹುದಾದ ‘ಹೆಚ್ಚಿನ ಅಪಾಯದಲ್ಲಿರುವ ವ್ಯಕ್ತಿಗಳನ್ನು’ ಗುರುತಿಸುತ್ತದೆ. ಇಂತಹ ವ್ಯಕ್ತಿಗಳನ್ನು ನಂತರದ ದಿನಗಳಲ್ಲಿ ಸೂಕ್ತ ತಪಾಸಣೆಗೆ ಒಳಪಡಿಸಿ ರೋಗ ಬರದಂತೆ ತಡೆಯಬಹುದು,” ಎಂದು ತಿಳಿಸಿದ್ದಾರೆ.
ಯುಕೆ ಬಯೋಬ್ಯಾಂಕ್ನ (UK Biobank) 48,000 ಕ್ಕೂ ಹೆಚ್ಚು ಭಾಗಿಗಳ ರಕ್ತದ ಮಾದರಿಗಳು ಮತ್ತು ಆರೋಗ್ಯದ ಡೇಟಾವನ್ನು ಸಂಶೋಧಕರು ಅಧ್ಯಯನ ಮಾಡಿದ್ದಾರೆ. ಇದರಲ್ಲಿ ಪ್ರೊಟೀನ್ಗಳ ಜೊತೆಗೆ ವಯಸ್ಸು, ಧೂಮಪಾನದ ಇತಿಹಾಸ ಮತ್ತು ದೀರ್ಘಕಾಲದ ಶ್ವಾಸಕೋಶದ ಕಾಯಿಲೆಗಳಂತಹ ಅಂಶಗಳನ್ನು ಒಟ್ಟುಗೂಡಿಸಿ ಪ್ರಸ್ತುತ ಇರುವ ವಿಧಾನಗಳಿಗಿಂತ ಹೆಚ್ಚು ನಿಖರವಾಗಿ ಕ್ಯಾನ್ಸರ್ ಅನ್ನು ಮುನ್ಸೂಚನೆ ನೀಡಲಾಗಿದೆ. ಈ ಸಂಶೋಧನೆಯನ್ನು ಜಾಗತಿಕವಾಗಿ 2,000 ಕ್ಕೂ ಹೆಚ್ಚು ಶ್ವಾಸಕೋಶದ ಕ್ಯಾನ್ಸರ್ ಪ್ರಕರಣಗಳಿರುವ ಎಂಟು ಅಂತರರಾಷ್ಟ್ರೀಯ ತಂಡಗಳಲ್ಲಿ ಪರೀಕ್ಷಿಸಿ ಧೃಡೀಕರಿಸಲಾಗಿದೆ.
ವಾಯು ಮಾಲಿನ್ಯವೂ ಪ್ರಮುಖ ಕಾರಣ
ಈ ಸಂಶೋಧನೆಯಲ್ಲಿ ಕಂಡುಬಂದ ಮತ್ತೊಂದು ಆಘಾತಕಾರಿ ವಿಷಯವೆಂದರೆ, ಧೂಮಪಾನಿಗಳಲ್ಲಿ ಮಾತ್ರವಲ್ಲದೆ ತೀವ್ರ ವಾಯು ಮಾಲಿನ್ಯಕ್ಕೆ (Air Pollution) ಒಡ್ಡಿಕೊಳ್ಳುವ ಜನರಲ್ಲಿಯೂ ಈ ಪ್ರೊಟೀನ್ ಮಟ್ಟವು ಹೆಚ್ಚಾಗಿರುವುದು ಕಂಡುಬಂದಿದೆ.
ಭಾರತಕ್ಕೆ ಇದು ಏಕೆ ಮುಖ್ಯ?
ಭಾರತದಲ್ಲಿ ವಾಯು ಮಾಲಿನ್ಯವು ದಿನದಿಂದ ದಿನಕ್ಕೆ ದೊಡ್ಡ ಸಮಸ್ಯೆಯಾಗುತ್ತಿದ್ದು, ಶ್ವಾಸಕೋಶದ ಕ್ಯಾನ್ಸರ್ ಪ್ರಕರಣಗಳು ಗಣನೀಯವಾಗಿ ಹೆಚ್ಚುತ್ತಿವೆ. ವರದಿಗಳ ಪ್ರಕಾರ, ದೇಶದಲ್ಲಿ 2015 ರಲ್ಲಿ ಸುಮಾರು 63,700 ರಷ್ಟಿದ್ದ ಶ್ವಾಸಕೋಶದ ಕ್ಯಾನ್ಸರ್ ಪ್ರಕರಣಗಳ ಸಂಖ್ಯೆ 2025 ರ ವೇಳೆಗೆ 81,000 ಕ್ಕೆ ಏರಿಕೆಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಈ ಹೊಸ ರಕ್ತ ಪರೀಕ್ಷೆಯು ಭಾರತದ ಜನರಿಗೆ ವರವಾಗುವ ಸಾಧ್ಯತೆಯಿದೆ.








