ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳ ಲಾಭವನ್ನು ಪಡೆಯಲು ಇನ್ಮುಂದೆ ಮತದಾರರ ಗುರುತಿನ ಚೀಟಿ (Voter ID) ಕಡ್ಡಾಯವಾಗಲಿದೆ. ಹೊರ ರಾಜ್ಯದವರಿಗೆ ಉಚಿತ ಬಸ್ ಪ್ರಯಾಣವಾಗಲಿ ಅಥವಾ ಉಚಿತ ವಿದ್ಯುತ್ ಆಗಲಿ ಸಿಗುವುದಿಲ್ಲ. ಕೇವಲ ಕರ್ನಾಟಕದಲ್ಲಿ ಮತದಾನದ ಹಕ್ಕು ಹೊಂದಿರುವ ಅರ್ಹ ಫಲಾನುಭವಿಗಳಿಗೆ ಮಾತ್ರ ಈ ಯೋಜನೆಗಳು ಸೀಮಿತ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆ (ಎಸ್ಎಸ್ಆರ್) ವೇಳೆ ಒಂದು ವೇಳೆ ಯಾರಾದರೂ ಮತದಾನದ ಹಕ್ಕನ್ನು ಕಳೆದುಕೊಂಡರೆ, ಅವರಿಗೆ ಗ್ಯಾರಂಟಿ ಯೋಜನೆಗಳ ಲಾಭವೂ ಕೈತಪ್ಪಲಿದೆ ಎಂದು ಅವರು ತಿಳಿಸಿದ್ದಾರೆ.
ನಮ್ಮ ಸರ್ಕಾರ ಕರ್ನಾಟಕದ ಜನರಿಗಾಗಿ ಈ ಯೋಜನೆಗಳನ್ನು ನೀಡುತ್ತಿದೆಯೇ ಹೊರತು ಅನ್ಯ ರಾಜ್ಯದವರಿಗಲ್ಲ. ಉಚಿತ ವಿದ್ಯುತ್ ಅನ್ನು ನಮ್ಮ ರಾಜ್ಯದ ಮತದಾರರಿಗೆ ನೀಡಬೇಕೇ ವಿನಃ ಬೇರೆ ರಾಜ್ಯದವರಿಗೆ ಏಕೆ ಕೊಡಬೇಕು?” ಎಂದು ಡಿ.ಕೆ. ಶಿವಕುಮಾರ್ ಪ್ರಶ್ನಿಸಿದ್ದಾರೆ. ಬಸ್ಸುಗಳಲ್ಲಿ ಮಹಿಳೆಯರ ಉಚಿತ ಪ್ರಯಾಣಕ್ಕಾಗಿ ಕೇವಲ ರಾಜ್ಯದ ಮತದಾನದ ಹಕ್ಕು ಇರುವವರಿಗೆ ಮಾತ್ರ ‘ಸ್ಮಾರ್ಟ್ ಕಾರ್ಡ್’ ವಿತರಣೆ ಮಾಡುವ ಬಗ್ಗೆ ಮುಂದಿನ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.
ಗೃಹಲಕ್ಷ್ಮಿ ಯೋಜನೆಗೆ ವಾರ್ಷಿಕ 72,000 ಕೋಟಿ ರೂ. ಹಾಗೂ ಗೃಹಜ್ಯೋತಿ ಯೋಜನೆಗೆ 26,000 ಕೋಟಿ ರೂ. ವೆಚ್ಚವಾಗುತ್ತಿದೆ. ಆದರೆ ಇತ್ತೀಚೆಗೆ ಗೃಹಲಕ್ಷ್ಮಿ ಮತ್ತು ಗೃಹಜ್ಯೋತಿ ಯೋಜನೆಗಳು ದುರ್ಬಳಕೆಯಾಗುತ್ತಿವೆ ಎಂಬ ದೂರುಗಳು ಕೇಳಿಬಂದಿವೆ.ಗೃಹಲಕ್ಷ್ಮಿ ಯೋಜನೆಯ ಹಣವನ್ನು ಕೆಲವು ಫಲಾನುಭವಿಗಳು ನಕಲಿ ಫೈನಾನ್ಸ್ ವ್ಯವಹಾರಗಳಿಗೆ ಮತ್ತು ಬೇರೆ ಸ್ಕೀಂಗಳಿಗೆ 30-35% ಭಾರಿ ಬಡ್ಡಿಗೆ ಹಾಕುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಬೆಳಗಾವಿಯಲ್ಲಿ ಇಂತಹ ಪ್ರಕರಣಗಳು ಬೆಳಕಿಗೆ ಬಂದಿದ್ದು, ಗ್ರಾಮ ಪಂಚಾಯಿತಿಯಿಂದ ತಾಲೂಕು ಪಂಚಾಯಿತಿವರೆಗೆ ಇಂತಹ ದಂಧೆಗಳಿಗೆ ಕಡಿವಾಣ ಹಾಕಲು ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ.
ಮೃತರ ಹೆಸರಿನಲ್ಲಿ ಇನ್ನೂ ಗೃಹಲಕ್ಷ್ಮಿ ಹಣ ಪಡೆಯುತ್ತಿರುವುದು ಹಾಗೂ ಗೃಹ ಜ್ಯೋತಿಯಡಿ ವಾಣಿಜ್ಯ ಬಳಕೆಗೆ ವಿದ್ಯುತ್ ಉಪಯೋಗಿಸುತ್ತಿರುವ ಆರೋಪಗಳೂ ಕೇಳಿಬಂದಿವೆ. ಹೀಗಾಗಿ ಅರ್ಹರಿಗಷ್ಟೇ ಯೋಜನೆ ತಲುಪಿಸಲು ಈ ಪರಿಷ್ಕರಣೆ ಅನಿವಾರ್ಯವಾಗಿದೆ.








