ಬೆಂಗಳೂರು: ರಾಜ್ಯ ಸರ್ಕಾರಿ ಶಿಕ್ಷಕರ ವರ್ಗಾವಣೆಗೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯಾಗಿದ್ದು, ‘ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ (ಶಿಕ್ಷಕರ ವರ್ಗಾವಣೆ ನಿಯಂತ್ರಣ) (ತಿದ್ದುಪಡಿ) ವಿಧೇಯಕ-2026’ಕ್ಕೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ. ಇದರೊಂದಿಗೆ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯಲ್ಲಿ ಹೊಸ ನಿಯಮಗಳು ಜಾರಿಗೆ ಬಂದಿವೆ.
12 ವರ್ಷಗಳ ಕಡ್ಡಾಯ ಸೇವೆ
ಶಿಕ್ಷಕರು ವರ್ಗಾವಣೆ ಪಡೆಯಲು ಒಂದೇ ಸ್ಥಳದಲ್ಲಿ ಕನಿಷ್ಠ 12 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿರಬೇಕು. ಅಂತಹ ಶಿಕ್ಷಕರಿಗೆ ಮಾತ್ರ ಕೌನ್ಸೆಲಿಂಗ್ ಮೂಲಕ ವರ್ಗಾವಣೆಗೆ ಅವಕಾಶ ನೀಡಲಾಗುತ್ತದೆ. ರಾಜ್ಯದ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳು, ಆದರ್ಶ ವಿದ್ಯಾಲಯಗಳು ಮತ್ತು ಪಿಎಂಶ್ರೀಗಳು ಎಂದು ಮೂರು ವರ್ಗಗಳಾಗಿ ವಿಂಗಡಿಸಲಾಗಿದೆ.
ಆದ್ಯತೆ ಯಾರಿಗೆ?
ಗರ್ಭಿಣಿಯರು ಅಥವಾ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಗುವನ್ನು ಹೊಂದಿರುವ ಶಿಕ್ಷಕಿಯರು ಬಯಸಿದ ಸ್ಥಳಕ್ಕೆ ವರ್ಗಾವಣೆ ಪಡೆಯಲು ಮೊದಲ ಆದ್ಯತೆ ನೀಡಲಾಗುತ್ತದೆ.
ಕಲ್ಯಾಣ ಕರ್ನಾಟಕದ ನಿಯಮ
ಕಲ್ಯಾಣ ಕರ್ನಾಟಕ ಭಾಗದಲ್ಲಿ ಸೇವೆ ಸಲ್ಲಿಸುತ್ತಿರುವವರು ಆ ಭಾಗದಿಂದ ಹೊರಗೆ ವರ್ಗಾವಣೆ ಬಯಸಿದರೆ, ಅವರು ಕನಿಷ್ಠ 10 ವರ್ಷಗಳ ಸೇವೆ ಸಲ್ಲಿಸಿರಬೇಕು ಎಂಬ ಷರತ್ತನ್ನು ವಿಧಿಸಲಾಗಿದೆ. ಬೋಧಕ ಹುದ್ದೆಯಲ್ಲಿರುವವರನ್ನು ಶಿಕ್ಷಣ ಇಲಾಖೆಯ ಬೋಧಕೇತರ ಹುದ್ದೆಗಳಿಗೆ ಅಥವಾ ಇತರ ಸರ್ಕಾರಿ ಮಂಡಳಿ/ನಿಗಮಗಳಿಗೆ ನೇಮಕ ಮಾಡುವುದರ ಮೇಲೆ ನಿರ್ಬಂಧ ಹೇರಲಾಗಿದೆ.
ಯಾರಿಗೆ ಅನ್ವಯ?:
ಈ ಹೊಸ ನಿಯಮವು ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರು ಮಾತ್ರವಲ್ಲದೆ, ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರು ಹಾಗೂ ವಿವಿಧ ವಿಭಾಗಗಳ (ಚಿತ್ರಕಲೆ, ದೈಹಿಕ ಶಿಕ್ಷಣ, ವೃತ್ತಿ ಶಿಕ್ಷಣ) ಬೋಧಕರಿಗೂ ಅನ್ವಯವಾಗಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮಂಡಿಸಿದ್ದ ಈ ವಿಧೇಯಕಕ್ಕೆ ಈಗ ರಾಜ್ಯಪಾಲರ ಅಂತಿಮ ಅನುಮೋದನೆ ದೊರೆತಿದ್ದು, ವರ್ಗಾವಣೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರುವ ಉದ್ದೇಶವನ್ನು ಸರ್ಕಾರ ಹೊಂದಿದೆ.










