ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಸಚಿವ ಸಂಪುಟ ಕಸರತ್ತು ತೀವ್ರಗೊಂಡಿದ್ದು, ಇಂದು ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರು ಜಂಟಿಯಾಗಿ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ಮಧ್ಯಾಹ್ನ 12:30ರ ಸುಮಾರಿಗೆ ಇಬ್ಬರೂ ನಾಯಕರು ರಾಷ್ಟ್ರ ರಾಜಧಾನಿಗೆ ತಲುಪಲಿದ್ದು, ಕಾಂಗ್ರೆಸ್ ಹೈಕಮಾಂಡ್ ನಾಯಕರೊಂದಿಗೆ ಮಹತ್ವದ ಸಭೆ ನಡೆಸಲಿದ್ದಾರೆ.
ನೂತನ ಸಂಪುಟ ರಚನೆ ಹಾಗೂ ಪ್ರಮುಖ ರಾಜಕೀಯ ವಿಚಾರಗಳ ಕುರಿತು ಈ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಲಿದೆ. ಮುಖ್ಯಮಂತ್ರಿಗಳೊಂದಿಗೆ ಮೊದಲ ಹಂತದಲ್ಲಿ ಎಷ್ಟು ಸಚಿವರು ಪ್ರಮಾಣವಚನ ಸ್ವೀಕರಿಸಬೇಕು ಎಂಬ ಗೊಂದಲಕ್ಕೆ ಈ ಭೇಟಿಯ ಮೂಲಕ ತೆರೆ ಬೀಳುವ ಸಾಧ್ಯತೆಯಿದೆ. ಹೈಕಮಾಂಡ್ ಈಗಾಗಲೇ ಜಿಲ್ಲಾವಾರು ಮತ್ತು ಸಮುದಾಯವಾರು ಆಕಾಂಕ್ಷಿಗಳ ಸಂಪೂರ್ಣ ಪಟ್ಟಿಯನ್ನು ಸಿದ್ಧಪಡಿಸಿಕೊಂಡು ಕಾಯುತ್ತಿದೆ.
ಎಲ್ಲಾ ಸಮುದಾಯಗಳಿಗೂ ಸಮಾನ ಪ್ರಾತಿನಿಧ್ಯ ನೀಡುವ ನಿಟ್ಟಿನಲ್ಲಿ ಹೈಕಮಾಂಡ್ ನಾಯಕರು ತೀವ್ರ ಕಸರತ್ತು ನಡೆಸುತ್ತಿದ್ದಾರೆ. ಜಾತಿ ಸಮೀಕರಣದ ಜೊತೆಗೆ ಪ್ರಾದೇಶಿಕ ಸಮತೋಲನವನ್ನು ಕಾಯ್ದುಕೊಳ್ಳುವುದು ಹೈಕಮಾಂಡ್‌ಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಹೀಗಾಗಿ, ಪ್ರಾದೇಶಿಕವಾರು ಸಚಿವ ಸ್ಥಾನ ಹಂಚಿಕೆ ಮಾಡಲು ನಾಯಕರು ಸೂಕ್ಷ್ಮವಾಗಿ ಪರಿಶೀಲನೆ ನಡೆಸುತ್ತಿದ್ದಾರೆ.
ಇತ್ತ ದೆಹಲಿಯಲ್ಲಿ ಹೈಕಮಾಂಡ್ ಸಭೆ ನಡೆಯುತ್ತಿರುವ ಬೆನ್ನಲ್ಲೇ, ಸಚಿವ ಸ್ಥಾನದ ಆಕಾಂಕ್ಷಿಗಳಾಗಿರುವ ಹತ್ತಾರು ಹಿರಿಯ ಹಾಗೂ ಕಿರಿಯ ನಾಯಕರು ಈಗಾಗಲೇ ದೆಹಲಿ ತಲುಪಿದ್ದಾರೆ. ಹೈಕಮಾಂಡ್ ನಾಯಕರನ್ನು ವೈಯಕ್ತಿಕವಾಗಿ ಭೇಟಿ ಮಾಡಿ ತಮಗೆ ಸಚಿವ ಸ್ಥಾನ ನೀಡುವಂತೆ ಒತ್ತಡ ಹೇರಲು ಈ ನಾಯಕರು ಕಸರತ್ತು ನಡೆಸುತ್ತಿದ್ದಾರೆ. ಇದರಿಂದಾಗಿ ದೆಹಲಿಯ ಕರ್ನಾಟಕ ಭವನದಲ್ಲಿ ರಾಜಕೀಯ ಚಟುವಟಿಕೆಗಳು ರಂಗೇರಿವೆ.
ಇಂದಿನ ಮಧ್ಯಾಹ್ನದ ವೇಳೆಗೆ ಸಂಭಾವ್ಯ ಸಚಿವರ ಮೊದಲ ಪಟ್ಟಿ ಬಹುತೇಕ ಅಂತಿಮಗೊಳ್ಳುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಸಂಪುಟ ರಚನೆಯಲ್ಲಿ ಸಿದ್ದರಾಮಯ್ಯ ಅವರ ಅಭಿಪ್ರಾಯ ಮತ್ತು ಸಲಹೆಗಳಿಗೆ ಹೈಕಮಾಂಡ್ ಹೆಚ್ಚಿನ ಮನ್ನಣೆ ಹಾಗೂ ಪ್ರಾಮುಖ್ಯತೆ ನೀಡುವ ಸಾಧ್ಯತೆ ದಟ್ಟವಾಗಿದೆ.








