ನವದೆಹಲಿ: ಸಾಮಾನ್ಯವಾಗಿ ಯಾವುದೇ ದೇಶದಲ್ಲಾದರೂ ಜನರು ತಮಗೆ ಬರುವ ಆದಾಯದ ಮೇಲೆ ಸರ್ಕಾರಕ್ಕೆ ತೆರಿಗೆ (Tax) ಪಾವತಿಸಬೇಕಾಗುತ್ತದೆ. ಭಾರತದಲ್ಲೂ ಇದೇ ನಿಯಮ ಜಾರಿಯಲ್ಲಿದ್ದು, ಆದಾಯ ತೇರಿಗೆ ಇಲಾಖೆಯು ನಿಯಮಾನುಸಾರ ತೆರಿಗೆಯನ್ನು ವಸೂಲಿ ಮಾಡುತ್ತದೆ. ಹೆಚ್ಚಿನ ಸಂಬಳ ಪಡೆಯುವವರು, ದೊಡ್ಡ ಉದ್ಯಮಿಗಳು ಹಾಗೂ ವಿವಿಧ ಮೂಲಗಳಿಂದ ಭಾರಿ ಆದಾಯ ಗಳಿಸುವವರು ಆದಾಯ ತೆರಿಗೆ ಸ್ಲ್ಯಾಬ್ಗಳ ಪ್ರಕಾರ ಟ್ಯಾಕ್ಸ್ ಕಟ್ಟಬೇಕಾಗುತ್ತದೆ.
ಆದರೆ, ಭಾರತೀಯ ತೆರಿಗೆ ಕಾನೂನಿನಲ್ಲಿ ಕೆಲವು ನಿರ್ದಿಷ್ಟ ಆದಾಯಗಳು, ಆಸ್ತಿಗಳು ಮತ್ತು ವಹಿವಾಟುಗಳಿಗೆ ಸಂಪೂರ್ಣ ವಿನಾಯಿತಿ ನೀಡಲಾಗಿದೆ. ಅಂದರೆ ಇವುಗಳ ಮೇಲೆ ನೀವು ಒಂದು ರೂಪಾಯಿ ಕೂಡ ತೆರಿಗೆ ಪಾವತಿಸಬೇಕಾಗಿಲ್ಲ. ಆ ‘ಜೀರೋ ಟ್ಯಾಕ್ಸ್’ (Zero Tax) ವ್ಯಾಪ್ತಿಗೆ ಬರುವ ಪ್ರಮುಖ ಅಂಶಗಳು ಇಲ್ಲಿವೆ.
1. ಕೃಷಿ ಮೂಲದ ಆದಾಯಕ್ಕೆ ಸಂಪೂರ್ಣ ವಿನಾಯಿತಿ
ಭಾರತದಲ್ಲಿ ಕೃಷಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಸರ್ಕಾರವು ಕೃಷಿ ಆದಾಯಕ್ಕೆ ತೆರಿಗೆಯಿಂದ ಸಂಪೂರ್ಣ ವಿನಾಯಿತಿ ನೀಡಿದೆ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 10(1) ರ ಪ್ರಕಾರ, ಕೃಷಿ ಮಾಡುವುದರಿಂದ ಬರುವ ಆದಾಯ, ಕೃಷಿ ಭೂಮಿಯಿಂದ ಬರುವ ಬಾಡಿಗೆ, ಕೃಷಿ ಉತ್ಪನ್ನಗಳ ಮಾರಾಟ ಹಾಗೂ ಇತರೆ ಕೃಷಿ ಸಂಬಂಧಿತ ಚಟುವಟಿಕೆಗಳಿಂದ ಗಳಿಸುವ ಆದಾಯಕ್ಕೆ ಯಾವುದೇ ತೆರಿಗೆ ಇರುವುದಿಲ್ಲ.
2. ಪರಂಪರೆ ಅಥವಾ ವಂಶಪಾರಂಪರ್ಯವಾಗಿ ಬರುವ ಆಸ್ತಿ
ಒಬ್ಬ ವ್ಯಕ್ತಿಯ ಮರಣದ ನಂತರ ಆತನ ವಾರಸುದಾರರಿಗೆ ಸಿಗುವ ಆಸ್ತಿಯ ಮೇಲೆ ಯಾವುದೇ ತೆರಿಗೆ ವಿಧಿಸಲಾಗುವುದಿಲ್ಲ. ಉಯಿಲು (ವೀಲುನಾಮಾ), ಆಸ್ತಿ ವರ್ಗಾವಣೆ ಅಥವಾ ವಂಶಪಾರಂಪರ್ಯವಾಗಿ ಬರುವ ಆಸ್ತಿಗಳು ತೆರಿಗೆ ವ್ಯಾಪ್ತಿಗೆ ಬರುವುದಿಲ್ಲ. ಕುಟುಂಬದ ಸದಸ್ಯರು ಅಥವಾ ಹತ್ತಿರದ ಸಂಬಂಧಿಕರಿಂದ ಬರುವ ಉಡುಗೊರೆಗಳು (Gifts), ಮದುವೆ ಮತ್ತು ಶುಭ ಸಮಾರಂಭಗಳಲ್ಲಿ ಬರುವ ಗಿಫ್ಟ್ಗಳಿಗೂ ತೆರಿಗೆ ವಿನಾಯಿತಿ ಇರುತ್ತದೆ.
(ಗಮನಿಸಿ: ಸಂಬಂಧಿಕರಲ್ಲದ ವ್ಯಕ್ತಿಯಿಂದ ನಗದು ಅಥವಾ ಸ್ಥಿರ-ಚರಾಸ್ತಿ ರೂಪದಲ್ಲಿ ದೊಡ್ಡ ಮೊತ್ತದ ಉಡುಗೊರೆ ಪಡೆದರೆ ಅದು ತೆರಿಗೆ ವ್ಯಾಪ್ತಿಗೆ ಬರಬಹುದು. ಹಾಗೆಯೇ, ಪರಂಪರೆಯಾಗಿ ಬಂದ ಆಸ್ತಿಯನ್ನು ಬಾಡಿಗೆಗೆ ನೀಡಿದರೆ, ಆ ಬಾಡಿಗೆ ಆದಾಯದ ಮೇಲೆ ತೆರಿಗೆ ಕಟ್ಟಬೇಕಾಗುತ್ತದೆ).
3. ಸರ್ಕಾರಿ ಉಳಿತಾಯ ಯೋಜನೆಗಳು ಮತ್ತು ವಿಮೆ ಮೆಚ್ಯೂರಿಟಿ
ಸರ್ಕಾರದ ವಿವಿಧ ಉಳಿತಾಯ ಯೋಜನೆಗಳಾದ ಸುಕನ್ಯಾ ಸಮೃದ್ಧಿ ಯೋಜನೆ (SSY), ಪಬ್ಲಿಕ್ ಪ್ರಾವಿಡೆಂಟ್ ಫಂಡ್ (PPF), ಇಪಿಎಫ್ (EPF), ಸ್ವಯಂಪ್ರೇರಿತ ಭವಿಷ್ಯ ನಿಧಿ ಹಾಗೂ ಹಿರಿಯ ನಾಗರಿಕರ ಉಳಿತಾಯ ಯೋಜನೆಗಳ ಮೆಚ್ಯೂರಿಟಿ ಮೊತ್ತಕ್ಕೆ ಯಾವುದೇ ತೆರಿಗೆ ಇರುವುದಿಲ್ಲ. ಇದರೊಂದಿಗೆ ಜೀವ ವಿಮೆ (Life Insurance) ಮೆಚ್ಯೂರಿಟಿ ಅವಧಿ ಮುಗಿದ ನಂತರ ಕೈಗೆ ಬರುವ ಹಣವೂ ಸಂಪೂರ್ಣ ತೆರಿಗೆ ಮುಕ್ತವಾಗಿರುತ್ತದೆ. ಆದರೆ, ಈ ಯೋಜನೆಗಳ ಅವಧಿ ಮುಗಿಯುವ ಮುನ್ನವೇ (Premature withdrawal) ಹಣವನ್ನು ಹಿಂಪಡೆದರೆ ನಿಯಮಾನುಸಾರ ತೆರಿಗೆ ಅನ್ವಯವಾಗಬಹುದು.
4. ಸಾಮಾಜಿಕ ದೇಣಿಗೆಗಳು
ಸಮಾಜ ಕಲ್ಯಾಣಕ್ಕಾಗಿ ಶ್ರಮಿಸುವ ವಿವಿಧ ನೋಂದಾಯಿತ ಸ್ವಯಂಸೇವಾ ಸಂಸ್ಥೆಗಳಿಗೆ (NGO) ಅಥವಾ ಚಾರಿಟೇಬಲ್ ಟ್ರಸ್ಟ್ಗಳಿಗೆ ನೀಡುವ ದೇಣಿಗೆಗಳಿಗೂ ಆದಾಯ ತೆರಿಗೆ ಕಾಯ್ದೆಯಡಿ ವಿನಾಯಿತಿ ಸಿಗುತ್ತದೆ.
ದೇಶದಲ್ಲಿ ತೆರಿಗೆ ಉಳಿಸಲು ಮತ್ತು ಕಾನೂನುಬದ್ಧವಾಗಿ ಹೂಡಿಕೆ ಮಾಡಲು ಇಂತಹ ವಿನಾಯಿತಿಗಳ ಬಗ್ಗೆ ತಿಳಿದುಕೊಳ್ಳುವುದು ಪ್ರತಿಯೊಬ್ಬ ನಾಗರಿಕನಿಗೂ ಸಹಕಾರಿಯಾಗಿದೆ.








