ನವದೆಹಲಿ: ದೀರ್ಘಕಾಲದಿಂದ ತಾತ್ಕಾಲಿಕ ಅಥವಾ ದಿನಗೂಲಿ ಆಧಾರದ ಮೇಲೆ ದುಡಿಯುತ್ತಿರುವ ನೌಕರರಿಗೆ ಸುಪ್ರೀಂ ಕೋರ್ಟ್ ಭರ್ಜರಿ ಸಿಹಿ ಸುದ್ದಿ ನೀಡಿದೆ. ಖಾಯಂ ನೌಕರರಷ್ಟೇ ಜವಾಬ್ದಾರಿಯಿಂದ ಕೆಲಸ ಮಾಡುವ ತಾತ್ಕಾಲಿಕ ಸಿಬ್ಬಂದಿಗೆ ಸಮಾನ ಸೌಲಭ್ಯಗಳನ್ನು ನಿರಾಕರಿಸುವುದು ತಪ್ಪು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
ನ್ಯಾಯಮೂರ್ತಿಗಳಾದ ಸಂಜಯ್ ಕರೋಲ್ ಮತ್ತು ಎ.ಜೆ. ಮಸಿಹ್ ಅವರನ್ನೊಳಗೊಂಡ ಪೀಠವು ಈ ಮಹತ್ವದ ಆದೇಶ ಹೊರಡಿಸಿದೆ. ಅಂಚೆ ಇಲಾಖೆಯಲ್ಲಿ ದಶಕಗಳ ಕಾಲ ಸೇವೆ ಸಲ್ಲಿಸಿದ ತಾತ್ಕಾಲಿಕ ನೌಕರರಿಗೆ ನಿವೃತ್ತಿ ವೇತನ (ಪಿಂಚಣಿ) ನಿರಾಕರಿಸಿದ್ದ ಪಟ್ನಾ ಹೈಕೋರ್ಟ್‌ನ ಹಳೆಯ ತೀರ್ಪನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ.
ನ್ಯಾಯಾಲಯ ಹೇಳಿದ್ದೇನು?
ಕಾಯಂ ಮತ್ತು ತಾತ್ಕಾಲಿಕ ನೌಕರರ ನಿವೃತ್ತಿ ಪ್ರಯೋಜನಗಳಲ್ಲಿ ಭಾರಿ ತಾರತಮ್ಯ ಮಾಡುವುದು ಸರಿಯಲ್ಲ. ಒಂದೇ ರೀತಿಯ ಕರ್ತವ್ಯ ನಿರ್ವಹಿಸುವಾಗ ಸೌಲಭ್ಯ ನಿರಾಕರಿಸುವುದು ಸಂವಿಧಾನದ ನಿಯಮಗಳಿಗೆ ವಿರುದ್ಧವಾಗಿದೆ.ಮಾನ್ಯತೆ ಪಡೆದ ಸ್ಥಾನಮಾನ ಹೊಂದಿರುವವರಿಗೆ ಪಿಂಚಣಿ ಸೇರಿದಂತೆ ಇತರೆ ಸಾಮಾಜಿಕ ಭದ್ರತೆಗಳನ್ನು ನೀಡಲೇಬೇಕು. ಸರ್ಕಾರಗಳು ನೌಕರರನ್ನು ಸದಾ ಆತಂಕದ ಸ್ಥಿತಿಯಲ್ಲೇ ಇಟ್ಟುಕೊಳ್ಳಬಾರದು.
ಅಂಚೆ ಇಲಾಖೆಯ ಮಾಜಿ ದಿನಗೂಲಿ ನೌಕರರು ಅಥವಾ ಅವರ ಕುಟುಂಬಸ್ಥರಿಗೆ ಸೇರಬೇಕಾದ ಪಿಂಚಣಿ ಮತ್ತು ನಿವೃತ್ತಿ ಹಣವನ್ನು ಮೂರು ತಿಂಗಳ ಒಳಗಾಗಿ ಲೆಕ್ಕ ಹಾಕಿ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಕೋರ್ಟ್ ಸೂಚಿಸಿದೆ.








