ಬೆಂಗಳೂರು : ಆರ್ಸಿಬಿ ಪಂದ್ಯವನ್ನು ಅಹಮದಾಬಾದ್‌ಗೆ ಸ್ಥಳಾಂತರಿಸಿದ ವಿಚಾರದಲ್ಲಿ ರಾಜ್ಯ ಸರ್ಕಾರದ ಯಾವುದೇ ಪಾತ್ರವಿಲ್ಲ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ. ಇದು ಸಂಪೂರ್ಣವಾಗಿ ಬಿಸಿಸಿಐ ಮತ್ತು ಫ್ರಾಂಚೈಸಿಯ ವಾಣಿಜ್ಯ ನಿರ್ಧಾರವಾಗಿದ್ದು, ಭದ್ರತಾ ಕೊರತೆಯ ಆರೋಪಗಳನ್ನು ಅವರು ತಳ್ಳಿಹಾಕಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆರ್ಸಿಬಿ ಮತ್ತು ಬಿಸಿಸಿಐ ನಡುವಿನ ಒಪ್ಪಂದಗಳ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ. ಪಂದ್ಯವನ್ನು ಸ್ಥಳಾಂತರಿಸುವುದು ಸಂಪೂರ್ಣವಾಗಿ ಅವರ ನಿರ್ಧಾರ. ಟಿಕೆಟ್ ಹಾಗೂ ವಾಣಿಜ್ಯ ಉದ್ದೇಶಗಳಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕಾಣುತ್ತದೆ ಎಂದು ಹೇಳಿದರು.
ಪಂದ್ಯವನ್ನು ಭದ್ರತಾ ಕಾರಣಗಳಿಂದ ಶಿಫ್ಟ್ ಮಾಡಲಾಗಿದೆ ಎಂಬ ಆರೋಪಗಳನ್ನು ತಳ್ಳಿಹಾಕಿದ ಸಚಿವ ಡಾ.ಜಿ. ಪರಮೇಶ್ವರ , ಭದ್ರತೆಯ ಯಾವುದೇ ಕೊರತೆ ಇಲ್ಲ. ಕಳೆದ ವರ್ಷ ನಡೆದ ಘಟನೆಗಳನ್ನು ಗಮನದಲ್ಲಿಟ್ಟುಕೊಂಡು ಈ ಬಾರಿ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದೇವೆ. ಕುನ್ಹಾ ವರದಿ ಆಧಾರವಾಗಿ ಹಲವು ಬದಲಾವಣೆಗಳನ್ನು ಮಾಡಿದ್ದೇವೆ. ಕಡಿಮೆ ಸಮಯದಲ್ಲಿಯೇ ಉನ್ನತ ಮಟ್ಟದ ಭದ್ರತಾ ವ್ಯವಸ್ಥೆ ಒದಗಿಸಲಾಗಿದೆ ಎಂದರು.








