ಬೆಂಗಳೂರು: ಪೆಟ್ರೋಲ್, ಡೀಸೆಲ್, ತರಕಾರಿ ಸೇರಿದಂತೆ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಈಗಾಗಲೇ ಸಂಕಷ್ಟ ಅನುಭವಿಸುತ್ತಿರುವ ಜನರಿಗೆ ಮತ್ತೊಂದು ಆಘಾತ ಎದುರಾಗಿದೆ. ರಾಜ್ಯದಲ್ಲಿ ಅಕ್ಕಿ ದರದಲ್ಲೂ ಗಮನಾರ್ಹ ಏರಿಕೆಯಾಗಿದ್ದು, ಕುಟುಂಬಗಳ ಅಡುಗೆ ಬಜೆಟ್ ಮತ್ತಷ್ಟು ಹೆಚ್ಚುವ ಸಾಧ್ಯತೆ ಮೂಡಿದೆ.
ಮಾರುಕಟ್ಟೆಯಲ್ಲಿ ವಿವಿಧ ಮಾದರಿಯ ಅಕ್ಕಿಗಳ ಬೆಲೆ ಏರಿಕೆಯಾಗಿದ್ದು, ಪ್ರತಿ ಕೆಜಿ ಅಕ್ಕಿಗೆ ₹6ರಿಂದ ₹10ರವರೆಗೆ ಹೆಚ್ಚುವರಿ ಹಣ ಪಾವತಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. 25ರಿಂದ 26 ಕೆಜಿ ತೂಕದ ಅಕ್ಕಿ ಚೀಲಗಳ ದರದಲ್ಲಿ ಸುಮಾರು ₹150ರವರೆಗೆ ಏರಿಕೆ ದಾಖಲಾಗಿದೆ.
ಅಕ್ಕಿಗೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪೂರೈಕೆ ಪ್ರಮಾಣ ಕಡಿಮೆಯಾಗಿರುವುದು ಬೆಲೆ ಏರಿಕೆಗೆ ಪ್ರಮುಖ ಕಾರಣವೆಂದು ವ್ಯಾಪಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಕೇಂದ್ರ ಸರ್ಕಾರ ವಿವಿಧ ದೇಶಗಳಿಗೆ ಅಕ್ಕಿ ರಫ್ತಿಗೆ ಅವಕಾಶ ನೀಡಿರುವ ಪರಿಣಾಮ ಸ್ಥಳೀಯ ಮಾರುಕಟ್ಟೆಯಲ್ಲಿ ಅಕ್ಕಿಯ ಲಭ್ಯತೆ ಕುಂಠಿತಗೊಂಡಿದ್ದು, ಇದರ ನೇರ ಪರಿಣಾಮವಾಗಿ ದರಗಳು ಏರಿಕೆಯಾಗಿವೆ.
ಮಾರುಕಟ್ಟೆ ಮೂಲಗಳ ಪ್ರಕಾರ, ಅಕ್ಕಿಯ ಕೊರತೆಯ ಪರಿಸ್ಥಿತಿ ಮುಂದಿನ ನವೆಂಬರ್ ತಿಂಗಳವರೆಗೂ ಮುಂದುವರಿಯುವ ಸಾಧ್ಯತೆ ಇದೆ. ಈಗಾಗಲೇ ಸುಮಾರು ಹತ್ತು ದಿನಗಳ ಹಿಂದೆಯೇ ದರ ಪರಿಷ್ಕರಣೆ ನಡೆದಿದ್ದು, ಗ್ರಾಹಕರು ಹೆಚ್ಚುವರಿ ವೆಚ್ಚವನ್ನು ಭರಿಸಬೇಕಾಗಿದೆ.
ಜಾಗತಿಕ ಬೆಳವಣಿಗೆಗಳ ಪ್ರಭಾವ
ಸಾಮಾನ್ಯವಾಗಿ ಬೇಸಿಗೆ ಅವಧಿಯಲ್ಲಿ ಅಕ್ಕಿ ದರದಲ್ಲಿ ಕೆಜಿಗೆ ಒಂದು ಅಥವಾ ಎರಡು ರೂಪಾಯಿ ಏರಿಕೆ ಕಂಡುಬರುತ್ತಿತ್ತು. ಆದರೆ ಈ ಬಾರಿ ಮಧ್ಯಪ್ರಾಚ್ಯದ ಸಂಘರ್ಷ ಸೇರಿದಂತೆ ಜಾಗತಿಕ ಮಟ್ಟದ ಬೆಳವಣಿಗೆಗಳು ಸರಕು ಸಾಗಣೆ ಹಾಗೂ ಪೂರೈಕೆ ವ್ಯವಸ್ಥೆಯ ಮೇಲೆ ಪರಿಣಾಮ ಬೀರಿದ್ದು, ಅಕ್ಕಿ ದರವೂ ಇಂಧನದ ಮಾದರಿಯಲ್ಲೇ ಏರಿಕೆಯ ಹಾದಿ ಹಿಡಿದಿದೆ.
ಯಾವ ಅಕ್ಕಿಗೆ ಎಷ್ಟು ದರ ಹೆಚ್ಚಳ?
ಸೋನಾ ಸ್ಟೀಮ್ ರೈಸ್: ಕೆಜಿಗೆ ₹43ರಿಂದ ₹49ಕ್ಕೆ ಏರಿಕೆ
ಸೋನಾ ರಾ ರೈಸ್: ಕೆಜಿಗೆ ₹52ರಿಂದ ₹59ಕ್ಕೆ ಏರಿಕೆ
ಇತರೆ ಹಲವು ಜನಪ್ರಿಯ ಅಕ್ಕಿ ತಳಿಗಳ ಬೆಲೆಯಲ್ಲೂ ಹೆಚ್ಚಳ ದಾಖಲಾಗಿದೆ.








