ಬೆಂಗಳೂರು : ರೈಲ್ವೆ ಇಲಾಖೆಯಲ್ಲಿ ಟಿಸಿ ಕೆಲಸ ಕೊಡಿಸುವುದಾಗಿ ಉದ್ಯೋಗಾಕಾಂಕ್ಷಿಗಳಿಂದ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚಿಸಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಬೆಂಗಳೂರು ಸಿಸಿಬಿ ಪೊಲೀಸರು ಮೂವರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.
ಬಂಧಿತ ಆರೋಪಿಗಳನ್ನು ಕಲಬುರಗಿ ವಿದ್ಯಾನಗರದ ಲಕ್ಷ್ಮಿಕಾಂತ ಹೊಸಮನಿ (41), ಅಫಜಲಪುರ ತಾಲೂಕಿನ ಉಡಚಣ ಗ್ರಾಮದ ಕುಲಪ್ಪಸಿಂಗೆ, ಉತ್ತರಹಳ್ಳಿಯ ಮುರಳಿ ಎಂದು ತಿಳಿದುಬಂದಿದೆ.ವಂಚನೆಗೊಳಗಾದ ಆಲಮೇಲದ ಹುಸೇನಪ್ಪ ಮಾಡ್ಯಾಳ ಸಿಸಿಬಿ ಠಾಣೆಗೆ ದೂರು ನೀಡಿದ್ದ ಎಂದು ಹೇಳಲಾಗುತ್ತಿದೆ.
ಡಿಸೆಂಬರ್ 9 ರಂದು ಸಿಸಿಬಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಉಳಿದ ಐವರು ಆರೋಪಿಗಳಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸಿಸಿಬಿ ಇನ್ಸ್ಪೆಕ್ಟರ್ ದೇವೇಂದ್ರಪ್ಪ ನೇತೃತ್ವದ ತಂಡ ತನಿಖೆ ನಡೆಸಿ ತಾಂತ್ರಿಕ ಮಾಹಿತಿ ಆಧರಿಸಿ ಮೌರ್ಯ ಹೋಟೆಲ್ ಜಂಕ್ಷನ್ ಮತ್ತು ಹೊಸಕೆರೆಹಳ್ಳಿ ಬಸ್ ನಿಲ್ದಾಣದ ಸಮೀಪ ಆರೋಪಿಗಳನ್ನು ಬಂಧಿಸಿದೆ.