ಬೆಂಗಳೂರು: ರಾಜ್ಯದ ಪಡಿತರ ಚೀಟಿದಾರರಿಗೆ (Ration Card Holders) ಆಹಾರ ಇಲಾಖೆಯು ಭರ್ಜರಿ ಸಿಹಿ ಸುದ್ದಿಯೊಂದನ್ನು ನೀಡಿದೆ. ಇನ್ಮುಂದೆ ರೇಷನ್ ಕಾರ್ಡ್ ತಿದ್ದುಪಡಿ, ಹೆಸರು ಸೇರ್ಪಡೆ ಅಥವಾ ನ್ಯಾಯಬೆಲೆ ಅಂಗಡಿಗಳ ಅಕ್ರಮದ ವಿರುದ್ಧ ದೂರು ನೀಡಲು ದಿನಗಟ್ಟಲೆ ಕಾಯಬೇಕಾಗಿಲ್ಲ ಸಾರ್ವಜನಿಕರ ದೂರುಗಳನ್ನು ಅತ್ಯಂತ ವೇಗವಾಗಿ ಪರಿಹರಿಸಲು ಆಹಾರ ಇಲಾಖೆಯು ಕೃತಕ ಬುದ್ಧಿಮತ್ತೆ (Artificial Intelligence – AI) ತಂತ್ರಜ್ಞಾನ ಆಧಾರಿತ ‘ಸ್ಮಾರ್ಟ್ ಅನ್ನವಾಣಿ’ ಯೋಜನೆಯನ್ನು ಜಾರಿಗೆ ತರಲು ಸಜ್ಜಾಗಿದೆ. ಮುಂದಿನ ಎರಡರಿಂದ ಮೂರು ತಿಂಗಳಲ್ಲಿ ಈ ಹೊಸ ಡಿಜಿಟಲ್ ವ್ಯವಸ್ಥೆ ಅಧಿಕೃತವಾಗಿ ಲಭ್ಯವಾಗಲಿದೆ.
ಪ್ರಸ್ತುತ ಅನ್ನಭಾಗ್ಯ, ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ ಹಾಗೂ ರೇಷನ್ ಕಾರ್ಡ್‌ಗೆ ಸಂಬಂಧಿಸಿದ ದೂರುಗಳಿಗಾಗಿ ಆಹಾರ ಇಲಾಖೆಯು ‘1967’ ಸಹಾಯವಾಣಿಯನ್ನು ನಡೆಸುತ್ತಿದೆ. ಪ್ರತಿದಿನ ಸರಾಸರಿ 200 ರಿಂದ 300 ದೂರುಗಳು ಇಲ್ಲಿ ದಾಖಲಾಗುತ್ತಿದ್ದು, ಸದ್ಯ ಚಾಲ್ತಿಯಲ್ಲಿರುವ ಮ್ಯಾನುಯಲ್ ವ್ಯವಸ್ಥೆಯಿಂದಾಗಿ ಗ್ರಾಹಕರ ಸಮಸ್ಯೆಗಳಿಗೆ ತಕ್ಷಣ ಪರಿಹಾರ ಸಿಗುತ್ತಿರಲಿಲ್ಲ. ಈ ಸಮಸ್ಯೆಯನ್ನು ಮುಕ್ತಾಯಗೊಳಿಸಲು ಇಡೀ ಸಹಾಯವಾಣಿಯನ್ನು ಸಂಪೂರ್ಣ ಸ್ವಯಂಚಾಲಿತ (Automated) ವ್ಯವಸ್ಥೆಯಾಗಿ ಪರಿವರ್ತಿಸಲಾಗುತ್ತಿದೆ.
ವಾಟ್ಸಾಪ್‌ನಲ್ಲೇ ಸಿಗಲಿದೆ ರೇಷನ್ ಮಾಹಿತಿ! ಧ್ವನಿ ಚಾಟ್ ಬಾಟ್ ಕಮಾಲ್
ಈ ಯೋಜನೆಯಡಿ ಅತ್ಯಾಧುನಿಕ ‘ಧ್ವನಿ ಚಾಟ್‌ಬಾಟ್’ (Voice Chatbot) ಬರಲಿದ್ದು, ಸಾರ್ವಜನಿಕರು ತಮ್ಮ ರೇಷನ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿದರೆ ಸಾಕುನಿಮ್ಮ ಕುಟುಂಬದ ಸದಸ್ಯರ ಇ-ಕೆವೈಸಿ (e-KYC) ವಿವರಗಳು, ನಿಮಗೆ ನಿಯೋಜಿಸಲಾದ ನ್ಯಾಯಬೆಲೆ ಅಂಗಡಿ ಯಾವುದು?ಕಳೆದ 6 ತಿಂಗಳಲ್ಲಿ ನೀವು ಪಡೆದ ಪಡಿತರ ಪ್ರಮಾಣ ಎಷ್ಟು?ಎಂಬ ಸಂಪೂರ್ಣ ಮಾಹಿತಿಯನ್ನು ನಿಮ್ಮ ಬೆರಳ ತುದಿಯಲ್ಲೇ ಪಡೆದುಕೊಳ್ಳಬಹುದು.
ಒಂದು ವೇಳೆ ಚಾಟ್‌ಬಾಟ್‌ನಲ್ಲಿ ನಿಮ್ಮ ಸಮಸ್ಯೆಗೆ ಪರಿಹಾರ ಸಿಗದಿದ್ದರೆ, ತಕ್ಷಣವೇ ‘ಲೈವ್ ಕರೆ’ (Live Call Transfer) ಮೂಲಕ ನಿಮ್ಮ ಕರೆಯನ್ನು ನೇರವಾಗಿ ಇಲಾಖೆಯ ಉನ್ನತ ಅಧಿಕಾರಿಗಳಿಗೆ ವರ್ಗಾಯಿಸಲಾಗುತ್ತದೆ. ಸುಮಾರು 1.5 ಕೋಟಿ ರೂ. ವೆಚ್ಚದಲ್ಲಿ ಈ ಮಾದರಿಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ.
ಪಡಿತರ ವಿತರಣೆಯಲ್ಲಿ ಮತ್ತಷ್ಟು ಪಾರದರ್ಶಕತೆ ತರಲು ಇಲಾಖೆಯು ಗ್ರಾಹಕರಿಗೆ ‘ಮೇರಾ ರೇಷನ್ ಆಪ್’ ಬಳಸಲು ಪ್ರೋತ್ಸಾಹಿಸುತ್ತಿದೆ. ಸಾರ್ವಜನಿಕರು ಈ ಆಪ್ ಡೌನ್‌ಲೋಡ್ ಮಾಡಿಕೊಳ್ಳುವ ಮೂಲಕ ತಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಯ ವಿವರಗಳು ಮತ್ತು ಪೋರ್ಟಬಿಲಿಟಿ ವ್ಯವಸ್ಥೆಯಡಿ ಬೇರೆ ರಾಜ್ಯದವರು ಎಷ್ಟು ಪಡಿತರ ಪಡೆದಿದ್ದಾರೆ ಎನ್ನುವ ನಿಖರ ಅಂಕಿ-ಅಂಶಗಳನ್ನು ಸುಲಭವಾಗಿ ತಿಳಿದುಕೊಳ್ಳಬಹುದು.








