ಬೆಂಗಳೂರು: ರಾಜ್ಯದ ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಕರ್ನಾಟಕ ಸರ್ಕಾರ ಮಹತ್ವದ ಇತಿಹಾಸ ಬರೆದಿದೆ. “ಒಂದು ಕರೆ ನಮಗೆ, ತುರ್ತು ಸೇವೆ ನಿಮಗೆ” ಎಂಬ ಆಕರ್ಷಕ ಘೋಷವಾಕ್ಯದಡಿಯಲ್ಲಿ ಇನ್ಮುಂದೆ ‘108 ಆರೋಗ್ಯ ಕವಚ’ ಆಂಬುಲೆನ್ಸ್ ಸೇವೆ ಸಂಪೂರ್ಣವಾಗಿ ಸರ್ಕಾರದ ಸುಪರ್ದಿಯಲ್ಲಿ ಕಾರ್ಯನಿರ್ವಹಿಸಲಿದೆ. ದೇಶದಲ್ಲೇ ಮೊದಲ ಬಾರಿಗೆ ಇಂತಹದೊಂದು ಕ್ರಾಂತಿಕಾರಿ ನಿರ್ಧಾರವನ್ನು ಕರ್ನಾಟಕ ಸರ್ಕಾರದ ಆರೋಗ್ಯ ಇಲಾಖೆ ಕೈಗೊಂಡಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಪ್ರಕಟಿಸಿದ್ದಾರೆ.
ಇತ್ತೀಚೆಗೆ ನಡೆದ ‘108 ಆರೋಗ್ಯ ಕವಚ ಆಂಬುಲೆನ್ಸ್ ಕಮಾಂಡ್ ಕಂಟ್ರೋಲ್ ಸೆಂಟರ್’ ಲೋಕಾರ್ಪಣಾ ಕಾರ್ಯಕ್ರಮದಲ್ಲಿ ಸಚಿವರು ಈ ವಿಷಯ ಹಂಚಿಕೊಂಡಿದ್ದಾರೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಬೆಂಬಲ ಮತ್ತು ಪ್ರೋತ್ಸಾಹದಿಂದ ಈ ಯೋಜನೆ ಜಾರಿಗೆ ಬಂದಿದೆ. ಕಳೆದ 2008 ರಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಆರಂಭವಾಗಿದ್ದ ಈ 108 ಆಂಬುಲೆನ್ಸ್ ಸೇವೆಯನ್ನು ಈವರೆಗೆ ಖಾಸಗಿ ಸಂಸ್ಥೆಯೊಂದು ನಿರ್ವಹಿಸುತ್ತಿತ್ತು. ಆದರೆ, 2025-26ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಮುಖ್ಯಮಂತ್ರಿಗಳು ಭರವಸೆ ನೀಡಿದಂತೆ, ಈಗ ವ್ಯವಸ್ಥೆಯನ್ನು ಸಂಪೂರ್ಣ ಉನ್ನತೀಕರಿಸಿ ಸರ್ಕಾರವೇ ಮುನ್ನಡೆಸಲು ತೀರ್ಮಾನಿಸಿದೆ.
ವಿದೇಶಿ ಮಾದರಿ ಹಾಗೂ ಸಿ-ಡಾಕ್ ಸಾಫ್ಟ್‌ವೇರ್
ಈ ನೂತನ ವ್ಯವಸ್ಥೆಯನ್ನು ಅತ್ಯಾಧುನಿಕಗೊಳಿಸಲು ಸರ್ಕಾರವು ಸಿಂಗಪೂರ್ ಸೇರಿದಂತೆ ವಿಶ್ವದ ವಿವಿಧ ದೇಶಗಳ ಆಂಬುಲೆನ್ಸ್ ನಿರ್ವಹಣಾ ಮಾದರಿಗಳನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿದೆ. ಆರಂಭದಲ್ಲಿ ಚಾಮರಾಜನಗರ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದ್ದ ಈ ಯೋಜನೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಈಗ ರಾಜ್ಯಾದ್ಯಂತ ವಿಸ್ತರಿಸಲಾಗುತ್ತಿದೆ. ಈ ವ್ಯವಸ್ಥೆಗೆ ಅಗತ್ಯವಿರುವ ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಸಾಫ್ಟ್‌ವೇರ್ ಅನ್ನು ಸರ್ಕಾರಿ ಸ್ವಾಮ್ಯದ ಪ್ರಸಿದ್ಧ ‘ಸಿ-ಡಾಕ್’ (C-DAC) ಸಂಸ್ಥೆ ಸಿದ್ಧಪಡಿಸಿಕೊಟ್ಟಿದ್ದು, ಇನ್ಮುಂದೆ 24/7 ಸುಸಜ್ಜಿತ ಕಮಾಂಡ್ ಕಂಟ್ರೋಲ್ ರೂಂ ಕಾರ್ಯನಿರ್ವಹಿಸಲಿದೆ.
ತಂತ್ರಜ್ಞಾನ ಆಧಾರಿತ ಆಧುನಿಕ ಸೌಲಭ್ಯಗಳು
ಹೊಸದಾಗಿ ಮೇಲ್ದರ್ಜೆಗೇರಿಸಲಾಗಿರುವ ಈ ಆಂಬುಲೆನ್ಸ್‌ಗಳಲ್ಲಿ ಲೈವ್ ಟ್ರಾಕಿಂಗ್ ವ್ಯವಸ್ಥೆ ಇರಲಿದ್ದು, ನಿಯಂತ್ರಣ ಕೊಠಡಿಯಿಂದಲೇ ನಿಗಾ ಇಡಬಹುದು. ತುರ್ತು ಸಂದರ್ಭಗಳಲ್ಲಿ ಆಂಬುಲೆನ್ಸ್‌ನಲ್ಲಿರುವ ‘MDT’ ಸಾಧನದ ಮೂಲಕ ರೋಗಿಯ ಬಳಿಯಿರುವ ಸಿಬ್ಬಂದಿ ನೇರವಾಗಿ ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆಯಬಹುದು. ಅಷ್ಟೇ ಅಲ್ಲದೆ, ರೋಗಿಯನ್ನು ಕರೆತರುವ ಮುನ್ನವೇ ಸಂಬಂಧಪಟ್ಟ ಆಸ್ಪತ್ರೆಗೆ ಸಂದೇಶ ರವಾನಿಸಿ ಅಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲು ಇದು ನೆರವಾಗಲಿದೆ. ರೋಗಿಯ ಗಂಭೀರತೆಯನ್ನು ಆಧರಿಸಿ ಯಾವ ಆಸ್ಪತ್ರೆ ಸೂಕ್ತ ಎಂಬುದನ್ನು ನಿರ್ಧರಿಸಿ ಅಲ್ಲಿಗೇ ರವಾನಿಸುವ ಸ್ಮಾರ್ಟ್ ವ್ಯವಸ್ಥೆ ಹಾಗೂ ಇಂಧನ ಪೋಲಾಗುವುದನ್ನು ತಡೆಯಲು ‘ಫ್ಯೂಯಲ್ ಗೇಜ್’ ತಂತ್ರಜ್ಞಾನವನ್ನೂ ಅಳವಡಿಸಲಾಗಿದೆ.
ಬಹುಪಯೋಗಿ ಸಹಾಯವಾಣಿಗಳ ಜೋಡಣೆ
ರಾಜ್ಯದ ಎಲ್ಲ ಆಂಬುಲೆನ್ಸ್‌ಗಳು ಇನ್ಮುಂದೆ ಇದೇ ಕೇಂದ್ರೀಕೃತ ಕಮಾಂಡ್ ಕಂಟ್ರೋಲ್ ರೂಂ ಅಡಿಯಲ್ಲಿ ಕೆಲಸ ಮಾಡಲಿವೆ. ವಿಶೇಷವೆಂದರೆ, ಕೇಂದ್ರ ಸರ್ಕಾರದ ‘ಟೆಲಿ ಮನಸ್’ (ರಾಷ್ಟ್ರೀಯ ಟೆಲಿ ಮಾನಸಿಕ ಆರೋಗ್ಯ ಸಹಾಯ ಕಾರ್ಯಕ್ರಮ), ‘ಇ-ಸಂಜೀವಿನಿ’ ಹಾಗೂ ‘ಮಹಿಳಾ ಮತ್ತು ಮಕ್ಕಳ ಸಹಾಯವಾಣಿ’ಗಳನ್ನು ಸಹ ಈ ಒಂದೇ ಸೂರಿನಡಿ ಜೋಡಿಸಲಾಗಿದೆ. ಈ ಮೂಲಕ ಸಾರ್ವಜನಿಕರಿಗೆ ಒಂದೇ ವೇದಿಕೆಯಲ್ಲಿ ಸಮಗ್ರ ತುರ್ತು ಆರೋಗ್ಯ ಸೇವೆ ಸಿಗುವಂತಾಗಿದ್ದು, ಇದು ಆರೋಗ್ಯ ಕ್ಷೇತ್ರದಲ್ಲಿ ಕರ್ನಾಟಕದ ಹೆಮ್ಮೆಯ ಹೆಜ್ಜೆಯಾಗಿದೆ.








