ಬೆಳಗಾವಿ : ಆರ್ಥಿಕ ಇಲಾಖೆ ಅನುಮೋದನೆ ದೊರೆತ ನಂತರ ಅರಸೀಕೆರೆ ತರಕಾರಿ ಮಾರುಕಟ್ಟೆಯಲ್ಲಿ ಶೀತಲಗೃಹ ನಿರ್ಮಾಣ ಮಾಡಲಾಗುವುದು ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.
ವಿಧಾನಸಭೆಯಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ ಕೆ.ಎಂ. ಶಿವಲಿಂಗೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ತೋಟಗಾರಿಕೆ ಬೆಳೆ, ಪುಷ್ಪೋದ್ಯಮ, ಮೆಣಸಿನಕಾಯಿ ಆವಕ ಹೆಚ್ಚು ಇರುವ ಮಾರುಕಟ್ಟೆಗಳಲ್ಲಿ ಶೀತಲಗೃಹ ನಿರ್ಮಾಣ ಮಾಡಬೇಕು ಎಂಬುದು ಸರ್ಕಾರದ ಆಶಯವಾಗಿದೆ.
೨೦೨೪-೨೫ನೇ ಸಾಲಿನ ಆರ್ ಐಡಿಎಫ್ -೩೦ ಯೋಜನೆ ಅಡಿಯಲ್ಲಿ ೨೫೪.೫೦ ಕೋಟಿ ರೂ. ಅನುದಾನ ಮಂಜೂರು ಮಾಡಲು ಆರ್ಥಿಕ ಇಲಾಖೆಗೆ ಕೋರಿಕೆ ಸಲ್ಲಿಸಲಾಗಿದ್ದು, ೧೪೪.೭೫ ಕೋಟಿ ರೂ. ವೆಚ್ಚದಲ್ಲಿ ಶೀತಲ ಗೃಹ ಮತ್ತಿತರ ಸೌಕರ್ಯ ನಿರ್ಮಾಣಕ್ಕೆ ಅನುಮೋದನೆ ನೀಡಿತ್ತು.
ಆದರೆ ಬಹುತೇಕ ಸಚಿವರು ಮತ್ತು ಶಾಸಕರಿಂದ ಶೀತಲಗೃಹ ನಿರ್ಮಾಣದ ಕೋರಿಕೆಗಳು ಬಂದಿರುವ ಹಿನ್ನೆಲೆಯಲ್ಲಿ ೩೫೪.೭೫ ಕೋಟಿ ರೂ. ಹೆಚ್ಚುವರಿ ಅನುದಾನ ಕೋರಿ ಆರ್ಥಿಕ ಇಲಾಖೆಗೆ ಪುನಃ ಕೋರಿಕೆ ಸಲ್ಲಿಸಲಾಗಿದೆ. ಅನುಮೋದನೆ ದೊರೆತ ನಂತರ ಕಾಮಗಾರಿ ಆರಂಭಿಸಲಾಗುವುದು ಎಂದು ತಿಳಿಸಿದರು.
ನಷ್ಟದ ಸಹಕಾರಿ ಸಕ್ಕರೆ ಕಾರ್ಖಾನೆ ಖಾಸಗಿ ಗುತ್ತಿಗೆಗೆ, ಕೃಷಿ ಮಾರುಕಟ್ಟೆ
ಆರ್ಥಿಕ ಸಂಕಷ್ಟ ಹಾಗೂ ಇತರ ಆಡಳಿತಾತ್ಮಕ ಕಾರಣಗಳಿಂದ ಸ್ಥಗಿತಗೊಂಡಿರುವ ಸಹಕಾರಿ ಸಕ್ಕರೆ ಕಾರ್ಖಾನೆಗಳನ್ನು ಖಾಸಗಿಯವರಿಗೆ ಗುತ್ತಿಗೆ ಆಧಾರದ ಮೇಲೆ ನೀಡುವ ಮೂಲಕ ಪುನಶ್ಚೇತನಗೊಳಿಸುವುದು ಸರ್ಕಾರ ಉದ್ದೇಶವಾಗಿದೆ ಎಂದು ಕಬ್ಬು ಅಭಿವೃದ್ಧಿ, ಸಕ್ಕರೆ ಸಚಿವ ಶಿವಾನಂದ ಪಾಟೀಲ ಹೇಳಿದರು.
ವಿಧಾನಸಭೆಯಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಬಾಬಾ ಸಾಹೇಬ್ ಪಾಟೀಲ್ (ಕಿತ್ತೂರು) ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಆರ್ಥಿಕ ಸಂಕಷ್ಟದಲ್ಲಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಈ ಕಾರ್ಖಾನೆಗೆ ಸರ್ಕಾರದಿಂದ ಬಂಡವಾಳ ಅಥವಾ ಅನುದಾನ ನೀಡುವ ನೀತಿ ಸರ್ಕಾರದ ಮುಂದೆ ಇಲ್ಲ. ಸಾಲ ಪಡೆದು ಪುನಶ್ಚೇತನಗೊಳಿಸುವ ಪ್ರಯತ್ನ ಮಾಡಿದರೆ ಸರ್ಕಾರ ನೆರವಿಗೆ ಬರಲಿದೆ ಎಂದು ತಿಳಿಸಿದರು.
ಕಾರ್ಖಾನೆಯ ಕಾರ್ಯನಿರ್ವಹಣೆಗೆ ಅಗತ್ಯ ಸಂಪನ್ಮೂಲ ಕ್ರೋಢೀಕರಣ ಮಾಡುವುದು ಆಡಳಿತ ಮಂಡಳಿಯ ಜವಾಬ್ದಾರಿಯಾಗಿದ್ದು, ಸಾಮಾನ್ಯ ಸಭೆ ಮತ್ತು ಆಡಳಿತ ಮಂಡಳಿ ಸಭೆಗಳಲ್ಲಿ ಸೂಕ್ತ ತೀರ್ಮಾನ ಕೈಗೊಂಡು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದರೆ ನಿಯಮಾನುಸಾರ ಪರಿಶೀಲನೆ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು.