ಬೆಂಗಳೂರು: ರಾಜ್ಯದ ರೈತರಿಗೆ ನಬಾರ್ಡ್ ಬಿಗ್ ಶಾಕ್ ನೀಡಿದ್ದು, ಅಲ್ಪಾವಧಿ ಕೃಷಿ ಸಾಲದ ಪುನರ್ಧನ ಮಿತಿಯನ್ನು ಭಾರೀ ಪ್ರಮಾಣದಲ್ಲಿ ಕಡಿತಗೊಳಿಸಿದೆ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ, ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ರಾಜ್ಯಕ್ಕೆ ನಬಾರ್ಡ್ ನಿಂದ 92,000 ಕೋಟಿ ರೂ. ಬರುವ ನಿರೀಕ್ಷೆ ಇತ್ತು. ಆದರೆ, 2340 ಕೋಟಿ ರೂ/ ಹಂಚಿಕೆ ಮಾಡಲಾಗಿದೆ. ಕಳೆದ ವರ್ಷದ 5,600 ಕೋಟಿ ರೂ.ಗೆ ಹೋಲಿಸಿದರೆ ಶೇಕಡ 58ರಷ್ಟು ಕಡಿಮೆಯಾಗಿದೆ ಎಂದರು.
ಇದರಿಂದಾಗಿ ರಾಜ್ಯದಲ್ಲಿ ಸಹಕಾರಿ ಸಂಸ್ಥೆಗಳಿಂದ ರೈತರಿಗೆ ಬಡ್ಡಿ ರಹಿತ ಅಲ್ಪಾವಧಿ ಬೆಳೆ ಸಾಲ ನೀಡುವುದು ಕಷ್ಟವಾಗಲಿದ್ದು, ಕೃಷಿ ಮೇಲೆ ಅಡ್ಡ ಪರಿಣಾಮ ಉಂಟಾಗುತ್ತದೆ. ಆಹಾರಧಾನ್ಯ ಉತ್ಪಾದನೆ ಕುಸಿತವಾಗಲಿದೆ. ಹೊಸ ರೈತರು ಸಾಲ ವಂಚಿತರಾಗಿ ಖಾಸಗಿ ಸಾಲದ ಮೊರೆ ಹೋಗಬೇಕಾಗುತ್ತದೆ. ರೈತರಿಗೆ ಶಕ್ತಿ ತುಂಬುವುದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜವಾಬ್ದಾರಿಯಾಗಿದೆ ಎಂದು ಹೇಳಿದ್ದಾರೆ.