ಬೆಂಗಳೂರು: ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ 2026-27ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳು ಮೇ 29 ರಿಂದ ಅಧಿಕೃತವಾಗಿ ಪ್ರಾರಂಭವಾಗಲಿವೆ. ಶೈಕ್ಷಣಿಕ ವರ್ಷದ ಆರಂಭದಲ್ಲೇ ವಿದ್ಯಾರ್ಥಿಗಳ ಕಲಿಕಾ ನ್ಯೂನತೆಗಳನ್ನು ಸರಿಪಡಿಸಲು 1 ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ‘ಸೇತುಬಂಧ’ ಉಪಕ್ರಮವನ್ನು ಅನುಷ್ಠಾನಗೊಳಿಸಲು ಶಾಲಾ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (DSERT) ಕಡ್ಡಾಯ ಆದೇಶ ಹೊರಡಿಸಿದೆ.
ಮಕ್ಕಳ ವಯೋಮಾನ ಮತ್ತು ತರಗತಿಗನುಗುಣವಾಗಿ ಕಲಿಕಾ ಮಟ್ಟವನ್ನು ಗುರುತಿಸಿ, ಹಿಂದಿನ ವರ್ಷದ ಹಾಗೂ ಪ್ರಸ್ತುತ ವರ್ಷದ ಕಲಿಕೆಯ ನಡುವೆ ಇರುವ ಅಂತರವನ್ನು ಸರಿದೂಗಿಸುವುದು ಈ ಉಪಕ್ರಮದ ಮುಖ್ಯ ಉದ್ದೇಶವಾಗಿದೆ.
ತರಗತಿವಾರು ದಿನಗಳ ನಿಗದಿ:
ನಲಿ-ಕಲಿ 1ನೇ ತರಗತಿ: ಶಾಲೆ ಪ್ರಾರಂಭವಾದ ಮೊದಲ 30 ದಿನಗಳ ಕಾಲ ‘ವಿದ್ಯಾಪ್ರವೇಶ’ ಕಾರ್ಯಕ್ರಮ ಜಾರಿಯಲ್ಲಿರುತ್ತದೆ.
2 ರಿಂದ 10ನೇ ತರಗತಿ: ಶಾಲಾ ಆರಂಭದ ಮೊದಲ 15 ದಿನಗಳ ಕಾಲ ಕಡ್ಡಾಯವಾಗಿ ಸೇತುಬಂಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು.
ದ್ವಿಭಾಷಾ ಶಾಲೆಗಳು: 1 ರಿಂದ 5ನೇ ತರಗತಿಗಳಿಗೆ 30 ದಿನಗಳ ಕಾಲ ‘ಟ್ರಾನ್ಸಿಷನ್ ಪಿರಿಯಡ್’ (Transition Period) ಚಟುವಟಿಕೆಗಳು ನಡೆಯಲಿವೆ.
ಡಯಾಗ್ನೋಸ್ಟಿಕ್ ಟೆಸ್ಟ್ ಮತ್ತು ಮೌಲ್ಯಮಾಪನ ವಿಧಾನ:
ವಿದ್ಯಾರ್ಥಿಗಳ ಕಲಿಕಾ ಮಟ್ಟವನ್ನು ಪರೀಕ್ಷಿಸಲು ಶಿಕ್ಷಕರು ಪೂರ್ವ ಪರೀಕ್ಷೆ (Diagnostic Test) ಹಾಗೂ ಸೇತುಬಂಧದ ನಂತರ ಸಾಫಲ್ಯ ಪರೀಕ್ಷೆ ನಡೆಸಬೇಕಾಗುತ್ತದೆ.
ಪ್ರಶ್ನೆ ಪತ್ರಿಕೆಯಲ್ಲಿ ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾಜ್ಞಾನಕ್ಕೆ (FLN) ಸಂಬಂಧಿಸಿದಂತೆ 4 ಪ್ರಶ್ನೆಗಳು ಹಾಗೂ ತರಗತಿವಾರು ಅಪೇಕ್ಷಿತ ಕಲಿಕಾ ಫಲಗಳಿಗೆ ಸಂಬಂಧಿಸಿದಂತೆ 6 ಪ್ರಶ್ನೆಗಳು ಸೇರಿದಂತೆ ಒಟ್ಟು 10 ಪ್ರಶ್ನೆಗಳಿರಬೇಕು.
ವಿದ್ಯಾರ್ಥಿ ಪೂರ್ಣಪ್ರಮಾಣದಲ್ಲಿ ಉತ್ತರಿಸಿದರೆ ‘A’ ಗ್ರೇಡ್ ಎಂದೂ, ಅಪೂರ್ಣ ಅಥವಾ ಉತ್ತರಿಸದಿದ್ದರೆ ‘B’ ಗ್ರೇಡ್ ಎಂದೂ ಗುರುತಿಸಿ ಶಾಲಾ ಶೈಕ್ಷಣಿಕ ಯೋಜನೆಯಲ್ಲಿ (SAP) ದಾಖಲಿಸಬೇಕು.
‘B’ ಗ್ರೇಡ್ ಪಡೆದ ವಿದ್ಯಾರ್ಥಿಗಳನ್ನು ವಿಶೇಷವಾಗಿ ಗುರುತಿಸಿ, ಅವರಿಗೆ ಪರಿಹಾರ ಬೋಧನೆ (Remedial Teaching) ನೀಡಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
‘ಸ್ಯಾಟ್ಸ್’ (SATS) ನಲ್ಲಿ ಮಾಹಿತಿ ಸಲ್ಲಿಕೆ ಕಡ್ಡಾಯ:
ಶಿಕ್ಷಕರು ಪ್ರತಿ ವಿದ್ಯಾರ್ಥಿಯ ಪೂರ್ವ ಪರೀಕ್ಷೆ ಮತ್ತು ಸಾಫಲ್ಯ ಪರೀಕ್ಷೆಯ ಅಂಕಗಳು ಹಾಗೂ ಪ್ರಗತಿಯನ್ನು SAP ನಮೂನೆಗಳಲ್ಲಿ ಮತ್ತು SATS (Student Achievement Tracking System) ತಂತ್ರಾಂಶದಲ್ಲಿ ಪ್ರತಿ ತಿಂಗಳು ಕಡ್ಡಾಯವಾಗಿ ಇಂದೀಕರಿಸಬೇಕು. ಅಪೇಕ್ಷಿತ ಕಲಿಕಾ ಫಲಗಳನ್ನು ಸಾಧಿಸದ ವಿದ್ಯಾರ್ಥಿಗಳಿಗೆ ಸೆಪ್ಟೆಂಬರ್ ಮತ್ತು ಡಿಸೆಂಬರ್ ಅಂತ್ಯಕ್ಕೆ ಮತ್ತೊಮ್ಮೆ ಮೌಲ್ಯಮಾಪನ ನಡೆಸಿ ಪ್ರಗತಿಯನ್ನು ದಾಖಲಿಸಬೇಕಾಗುತ್ತದೆ.
ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಮೇಲ್ವಿಚಾರಣೆ ಜವಾಬ್ದಾರಿ:
ಸೇತುಬಂಧ ಕಾರ್ಯಕ್ರಮದ ಯಶಸ್ವಿ ಅನುಷ್ಠಾನಕ್ಕಾಗಿ ಜಿಲ್ಲಾ, ತಾಲೂಕು ಮತ್ತು ಕ್ಲಸ್ಟರ್ ಹಂತದ ಅಧಿಕಾರಿಗಳಿಗೆ ಹೊಣೆಗಾರಿಕೆ ವಹಿಸಲಾಗಿದೆ.
ಉಪನಿರ್ದೇಶಕರು (DDPI) ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು (BEO) ಶಾಲೆಗಳಿಗೆ ಭೇಟಿ ನೀಡಿ ಪ್ರಗತಿ ಪರಿಶೀಲಿಸಬೇಕು.
ಕ್ಲಸ್ಟರ್ ಹಂತದಲ್ಲಿ ಸಿ.ಆರ್.ಪಿ (CRP) ಅವರು ತಮ್ಮ ವ್ಯಾಪ್ತಿಯ ಶಾಲೆಗಳಲ್ಲಿ ಸೇತುಬಂಧ ಪ್ರಕ್ರಿಯೆ ಸರಿಯಾಗಿ ನಡೆಯುತ್ತಿರುವುದನ್ನು ಖಾತರಿಪಡಿಸಿಕೊಳ್ಳಬೇಕು.
ಯೋಜನೆಯ ಪ್ರಗತಿ ವರದಿಯನ್ನು ಸಿದ್ಧಪಡಿಸಿ ನಿಯಮಿತವಾಗಿ DSERT ಕಚೇರಿಗೆ ಸಲ್ಲಿಸುವಂತೆ ಇಲಾಖೆಯ ನಿರ್ದೇಶಕರು ಆದೇಶದಲ್ಲಿ ತಿಳಿಸಿದ್ದಾರೆ.









