ಹುಬ್ಬಳ್ಳಿ : ಇತ್ತೀಚಿಗೆ ರಾಜ್ಯದ ಹಿರಿಯ ಕಾಂಗ್ರೆಸ್ ಶಾಸಕರು ಸಚಿವ ಸಂಪುಟ ವಿಸ್ತರಣೆ ಮಾಡಿ ಎಂದು ದೆಹಲಿಗೆ ಭೇಟಿ ನೀಡಿ ಕಾಂಗ್ರೆಸ್ ಹೈಕಮಾಂಡ್ ಅವರಿಗೆ ಮನವಿ ಮಾಡಿದ್ದರು. ಈ ಒಂದು ಬೆಳವಣಿಗೆಯ ಮಧ್ಯೆ ಹುಬ್ಬಳ್ಳಿಯಲ್ಲಿ ಪರಿಷತ್ ಸದಸ್ಯ ಸಲೀಂ ಅಹ್ಮದ್ ಸ್ಪೋಟಕ ಹೇಳಿಕೆ ನೀಡಿದ್ದು, ಮೇ 20ರ ಒಳಗೆ ಸಚಿವ ಸಂಪುಟ ವಿಸ್ತರಣೆ ಆಗಬಹುದು ಎಂದು ಹೇಳಿಕೆ ನೀಡಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಪರಿಷತ್ ಕಾಂಗ್ರೆಸ್ ಮುಖ್ಯ ಸಚೇತಕ ಸಲೀಂ ಅಹ್ಮದ್, ಮೇ 4ರ ಫಲಿತಾಂಶದ ನಂತರ ಈ ವಿಷಯ ಚರ್ಚೆಗೆ ಬರಲಿದೆ. ಶೇಕಡ 50ರಷ್ಟು ಸಚಿವರನ್ನು ಪಕ್ಷದ ಕೆಲಸಕ್ಕೆ ನಿಯೋಜಿಸಬೇಕು. ಉಳಿದವರಿಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದೇವೆ ಆದರೆ ಹೈಕಮಾಂಡ್ ಕೈಗೊಳ್ಳುವ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ. ನಾಯಕತ್ವ ಬದಲಾವಣೆಯ ಬಗ್ಗೆ ಮಾತನಾಡದಂತೆ ಹೈಕಮಾಂಡ್ ಸೂಚನೆ ನೀಡಿದೆ. ಹೀಗಾಗಿ ನಾಯಕತ್ವ ಬದಲಾವಣೆಯ ಬಗ್ಗೆ ಮಾತನಾಡುವುದಿಲ್ಲ ಎಂದು ಪರಿಷತ್ ಸದಸ್ಯ ಸಲೀಂ ಅಹಮದ್ ಹೇಳಿಕೆ ನೀಡಿದರು.








