ಬೆಂಗಳೂರು: ಅರವತ್ತೆಳನೇ ಕನ್ನಡ ರಾಜ್ಯೋತ್ಸವದ ( Kannada Rajyotsava ) ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಕೋಟಿ ಕಂಠ ಗಾಯನ ಕಾರ್ಯಕ್ರಮವನ್ನು ಬೆಸ್ಕಾಂ ( BESCOM ) ಬಹಳ ಅರ್ಥಪೂರ್ಣವಾಗಿ ಶುಕ್ರವಾರ ಆಚರಿಸಿತ್ತು.
ಬೆಸ್ಕಾಂನ ನಿಗಮ ಕಛೇರಿ ಮತ್ತು ಎಲ್ಲಾ ವೃತ್ತ ಕಛೇರಿಗಳಲ್ಲಿ ಕೋಟಿ ಕಂಠ ಗಾಯನ ಕಾರ್ಯಕ್ರಮವನ್ನು ಏಕಕಾಲದಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಬೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ಅವರು ಈ ಬಾರಿಯ ಕನ್ನಡ ರಾಜ್ಯೋತ್ಸವವನ್ನು ಬೆಸ್ಕಾಂ ನಿಗಮ ಕಛೇರಿಯಲ್ಲಿ ಬಹಳ ಅದ್ಧುರಿಯಾಗಿ ಆಚರಿಸಲಾಗುವುದು ಹಾಗೆಯೇ ಸಿಬ್ಬಂದಿಗಳ ಪ್ರತಿಭೆಯನ್ನು ಪ್ರೋತ್ಸಾಹಿಸಲು ವಿವಿಧ ಸ್ಫರ್ಧೆಗಳನ್ನು ಏರ್ಪಡಿಸಲಾಗುವುದು ಎಂದು ತಿಳಿಸಿದರು.
ಕನ್ನಡದಲ್ಲೇ ವ್ಯವಹರಿಸುತ್ತೇವೆ, ಕನ್ನಡದಲ್ಲೇ ಮಾತನಾಡುತ್ತೆವೆ, ಮತ್ತು ಅನ್ಯ ಭಾಷಿಕ ಸ್ನೇಹಿತರಿಗೆ ಕನ್ನಡ ಕಲಿಸುತ್ತೆವೆ, ಎಂಬ ಪ್ರತಿಜ್ಞಾ ವಿಧಿಯನ್ನು ಬೆಸ್ಕಾಂನ ಸಿಬ್ಬಂದಿ ವರ್ಗಕ್ಕೆ ವ್ಯವಸ್ಥಾಪಕ ನಿರ್ದೇಶಕರು ಈ ಸಂದರ್ಭದಲ್ಲಿ ಬೋಧಿಸಿದರು ಬೆಸ್ಕಾಂ ಹಿರಿಯ ಅಧಿಕಾರಿಗಳು, ಕಿರಿಯ ಅಧಿಕಾರಿಗಳು, ಸಿಬ್ಬಂದಿಗಳು, ಲೈನ್ ಮೆನ್ ಗಳು , ಚಾಲಕರು ಕೋಟಿ ಕಂಠ ಗಾಯನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.