ಬೆಂಗಳೂರು : ಇತ್ತೀಚಿಗೆ ಪತ್ನಿಯರ ಕಾಟಕ್ಕೆ ಬೇಸತ್ತು, ಅದೆಷ್ಟೋ ಗಂಡಂದಿರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇತ್ತೀಚಿಗೆ ಬೆಂಗಳೂರಿನಲ್ಲಿ ಟೆಕ್ಕಿ ಸುಭಾಷ್ ಆತ್ಮಹತ್ಯೆ ಇಡೀ ದೇಶದಾದ್ಯಂತ ಭಾರಿ ಚರ್ಚೆಯಾಗಿತ್ತು. ಇದೀಗ ಬೆಂಗಳೂರಿನಲ್ಲಿ ಮತ್ತೊರ್ವ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದು, ಪತ್ನಿಯ ಕಿರುಕುಳಕ್ಕೆ ಮನನೊಂದು ಅಪಾರ್ಟ್ಮೆಂಟ್ ನಲ್ಲಿ ನೇಣು ಬಿಗಿದುಕೊಂಡು ಪತಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಹೌದು ಬೆಂಗಳೂರು ನಗರದಲ್ಲಿ ಮತ್ತೊಂದು ದಾರುಣ ಘಟನೆ ಬೆಳಕಿಗೆ ಬಂದಿದೆ. ಲಿನೋವೋ ಕಂಪನಿಯ ಹಿರಿಯ ಉದ್ಯೋಗಿಯಾಗಿದ್ದ ಪ್ರಶಾಂತ್ ನಾಯರ್ (40) ಅವರು ಪತ್ನಿಯ ಕಿರುಕುಳದಿಂದ ಮನನೊಂದು ಚಿಕ್ಕಬಾಣಾವರದ ಡಿ.ಎಕ್ಸ್ ಸ್ಮಾರ್ಟ್ ನೆಸ್ಟ್ ಅಪಾರ್ಟ್‌ಮೆಂಟ್‌ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪ್ರಶಾಂತ್ ಅವರು ಮನೆಯ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು,ತಂದೆ ಎಮ್ ಎನ್ ಕುಟ್ಟಿ ಮಗನಿಗೆ ಕರೆ ಮಾಡಿದ್ರು ಎಷ್ಟು ಬಾರಿ ಕರೆ ಸ್ವೀಕರಿಸಿದ ಹಿನ್ನೆಲೆಯಲ್ಲಿ ಮನೆಗೆ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ,ಸದ್ಯ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಪ್ರಶಾಂತ್ ಅವರು 12 ವರ್ಷದ ಹಿಂದೆ ಪೂಜಾ ನಾಯರ್ ಅವರೊಂದಿಗೆ ವಿವಾಹವಾಗಿದ್ದರು. ದಂಪತಿಗೆ 8 ವರ್ಷದ ಮಗಳು ರಶೀಕಾ ನಾಯರ್ ಇದ್ದಾಳೆ. ಪೂಜಾ ನಾಯರ್ ಡೆಲ್ ಕಂಪನಿಯಲ್ಲಿ ಉದ್ಯೋಗಿಯಾಗಿದ್ದಾರೆ. ಇವರಿಬ್ಬರ ನಡುವೆ ಇತ್ತೀಚೆಗೆ ಹೊಂದಾಣಿಕೆಯಲ್ಲಿ ಸಮಸ್ಯೆಗಳು ಎದುರಾಗಿದ್ದವು. ಈ ಒಂದು ಕೌಟುಂಬಿಕ ಕಲಹದಿಂದ ನೊಂದು ಪ್ರಶಾಂತ್ ನೇಣು ತೆಗೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.