ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ದಶಕಗಳ ಕಾಲ ಆಳ್ವಿಕೆ ನಡೆಸಿದ್ದ ತೃಣಮೂಲ ಕಾಂಗ್ರೆಸ್ (TMC) ಪಕ್ಷವನ್ನು ಮಣಿಸಿ ಬಿಜೆಪಿ ಅಧಿಕಾರಕ್ಕೆ ಬಂದಿರುವುದು ಕೇವಲ ಒಂದು ರಾಜ್ಯದ ಗೆಲುವಲ್ಲ, ಅದು ಇಡೀ ರಾಷ್ಟ್ರಕ್ಕೆ ಸಿಕ್ಕ “ಅಚಿಂತ್ಯ ನೆಮ್ಮದಿ” (Unimaginable sense of relief) ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ. ಗುಜರಾತ್‌ನ ಜಾಮ್‌ನಗರದಲ್ಲಿ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಚುನಾವಣಾ ಫಲಿತಾಂಶವು ದೇಶದ ಭಾವನಾತ್ಮಕ ಒಗ್ಗಟ್ಟನ್ನು ಸಾಬೀತುಪಡಿಸಿದೆ ಎಂದು ಹೇಳಿದ್ದಾರೆ.
“ನಾನು ಅನೇಕ ಚುನಾವಣೆಗಳನ್ನು ನೋಡಿದ್ದೇನೆ, ಸೋಲು-ಗೆಲುವು ಸಹಜ. ಆದರೆ ಬಂಗಾಳದ ಚುನಾವಣೆಯು ಇಡೀ ದೇಶಕ್ಕೆ ಸಂಬಂಧಿಸಿದ್ದು ಎಂದು ಮೊದಲ ಬಾರಿಗೆ ನನಗನ್ನಿಸಿತು. ಬಂಗಾಳದಲ್ಲಿ ಬದಲಾವಣೆ ಬಂದಾಗ ಸಾವಿರಾರು ಮೈಲಿ ದೂರವಿರುವ ಗುಜರಾತ್‌ನ ವ್ಯಕ್ತಿಯೂ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾನೆ ಎಂದರೆ ಅಲ್ಲಿನ ಜನರ ನೋವು ಎಷ್ಟಿರಬಹುದು ಎಂದು ಊಹಿಸಿ,” ಎಂದು ಮೋದಿ ಹೇಳಿದರು.
ಬಂಗಾಳದ ಈ ಚುನಾವಣಾ ಫಲಿತಾಂಶವು ಕೇವಲ ಭಾರತದಲ್ಲಿ ಮಾತ್ರವಲ್ಲದೆ ಜಾಗತಿಕ ಮಟ್ಟದಲ್ಲೂ ಚರ್ಚೆಯಾಗುತ್ತಿದೆ. ಪ್ರಜಾಪ್ರಭುತ್ವದ ಶಕ್ತಿಯನ್ನು ಇಡೀ ವಿಶ್ವವೇ ಗಮನಿಸುತ್ತಿದೆ ಎಂದು ಅವರು ಹೆಮ್ಮೆಯಿಂದ ತಿಳಿಸಿದರು.
“ಇಂದು ಗಂಗೋತ್ರಿಯಿಂದ ಗಂಗಾಸಾಗರದವರೆಗೆ ‘ಕಮಲ’ ಅರಳಿದೆ. ಗಂಗಾನದಿಯ ದಂಡೆಯಲ್ಲಿರುವ ಎಲ್ಲಾ ರಾಜ್ಯಗಳಲ್ಲಿ ಈಗ ಬಿಜೆಪಿ ನೇತೃತ್ವದ ಸರ್ಕಾರವಿದೆ,” ಎಂದು ಅವರು ಘೋಷಿಸಿದರು.ಬಂಗಾಳದಲ್ಲಿ ದಶಕಗಳಿಂದ ನೆಲೆಸಿದ್ದ ಭಯ, ಭೀತಿ ಮತ್ತು ರಾಜಕೀಯ ಹಿಂಸಾಚಾರಕ್ಕೆ ಈ ಫಲಿತಾಂಶ ಅಂತ್ಯ ಹಾಡಿದೆ. ಇದು ‘ಬದ್ಲಾ’ (ಸೇಡು) ಗಾಗಿ ಬಂದ ತೀರ್ಪಲ್ಲ, ಇದು ‘ಬದ್ಲಾವ್’ (ಬದಲಾವಣೆ) ಗಾಗಿ ಜನ ನೀಡಿದ ತೀರ್ಪು ಎಂದು ಅವರು ವ್ಯಾಖ್ಯಾನಿಸಿದರು.
294 ಸದಸ್ಯ ಬಲದ ಬಂಗಾಳ ವಿಧಾನಸಭೆಯಲ್ಲಿ ಬಿಜೆಪಿ 207 ಸ್ಥಾನಗಳನ್ನು ಗೆಲ್ಲುವ ಮೂಲಕ ಸ್ಪಷ್ಟ ಬಹುಮತ ಸಾಧಿಸಿದೆ.
TMC ಗೆ ಹಿನ್ನಡೆ: ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಕೇವಲ 80 ಸ್ಥಾನಗಳಿಗೆ ಕುಸಿದಿದೆ.








