ನವದೆಹಲಿ : ಅಮೆರಿಕ-ಇರಾನ್ ಯುದ್ಧದಿಂದಾಗಿ ಮಧ್ಯಪ್ರಾಚ್ಯದಲ್ಲಿ ಸೃಷ್ಟಿಯಾಗಿರುವ ಬಿಕ್ಕಟ್ಟಿನ ಪರಿಣಾಮವಾಗಿ ದಿನಬಳಕೆ ವಸ್ತುಗಳ ಬೆಲೆ ಹೆಚ್ಚಾಗಿದ್ದರ ಬೆನ್ನಲ್ಲೇ ಅವುಗಳ ದರ ಮತ್ತೊಮ್ಮೆ ಏರಿಕೆಯಾಗುವ ಸಾಧ್ಯತೆಗಳಿವೆ. ದೈನಂದಿನ ಬಳಕೆಯ ವಸ್ತುಗಳನ್ನು ತಯಾರಿಸುವ ಫಾಸ್ಟ್ ಮೂವಿಂಗ್ ಕನ್ಯೂಮರ್ ಗೂಡ್ಸ್ (ಎಫ್‌ಎಂಸಿಜಿ) ಕಂಪನಿಗಳು ಈ ನಿಟ್ಟಿನಲ್ಲಿ ಆಲೋಚಿಸಿದ್ದು ಶೀಘ್ರವೇ ಬೆಲೆ ಏರಿಕೆ ಮಾಡುವ ಬಗ್ಗೆ ನಿರ್ಧಾರ ಕೈಗೊಳ್ಳಲಿವೆ.
ಇತ್ತೀಚೆಗಷ್ಟೇ ದೈನಂದಿನ ಬಳಕೆ ವಸ್ತುಗಳ ಬೆಲೆ ಶೇ. 3ರಿಂದ 5ರಷ್ಟು ಹೆಚ್ಚಳವಾಗಿತ್ತು. ಈಗ ಮತ್ತೆ ಅದೇ ಪ್ರಮಾಣದಲ್ಲಿ ಸೋಪು, ಡಿಟರ್ಜೆಂಟ್, ಬಿಸ್ಕೆಟ್, ಪ್ಯಾಕ್ ಮಾಡಲಾದ ಆಹಾರಗಳು, ಪೇಯಗಳು ಮುಂತಾದ ವಸ್ತುಗಳ ಬೆಲೆ ಏರಲಿದ್ದು, ಜನಸಾಮಾನ್ಯರ ಕಿಸೆಗೆ ಮತ್ತಷ್ಟು ಕತ್ತರಿ ಬೀಳಲಿದೆ.
ಬೆಲೆ ಹೆಚ್ಚಳಕ್ಕೆ ಕಾರಣವೇನು?
ಇರಾನ್-ಅಮೆರಿಕ ಯುದ್ಧದಿಂದಾಗಿ ಕಚ್ಚಾತೈಲ ಬೆಲೆಯಲ್ಲಿ ಹೆಚ್ಚಳವಾಗಿದ್ದು, ಸರಕು ಸಾಗಣೆ ಶುಲ್ಕದಲ್ಲಿ ಏರಿಕೆಯಾಗಿದೆ. ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದ ಜಾಗತಿಕ ಪೂರೈಕೆ ವ್ಯವಸ್ಥೆಯಲ್ಲಿ ಭಾರಿ ಪ್ರಮಾಣದಲ್ಲಿ ಅಡೆತಡೆಯುಂಟಾಗಿದ್ದು, ಅಮೆರಿಕದ ಡಾಲರ್ ವಿರುದ್ಧ ಭಾರತೀಯ ಕರೆನ್ಸಿ ಮೌಲ್ಯ ಕುಸಿತವಾಗಿದೆ. ಹೀಗಾಗಿ ನಷ್ಟ ತುಂಬಿಕೊಳ್ಳಲು ಹಲವು ಕಂಪನಿಗಳು ಬೆಲೆ ಏರಿಕೆ ಮಾಡಲು ಚಿಂತನೆ ನಡೆಸಿವೆ ಎನ್ನಲಾಗಿದೆ.
ಇದಲ್ಲದೆ, ಪೀಠೋಪಕರಣಗಳ ಪಾಲಿಶಿಂಗ್ ಸಾಮಗ್ರಿಗಳ ಬೆಲೆಯಲ್ಲಿ ಶೇ. 25ರಷ್ಟು, ಸೋಫಾ-ಹಾಸಿಗೆ ಮತ್ತಿತರ ವಸ್ತುಗಳಲ್ಲಿ ಬಳಸುವ ಫೋಮ್ ಬೆಲೆಯಲ್ಲಿ ಶೇ. 45ರಷ್ಟು ಹೆಚ್ಚಾಗಿದೆ. ಇದೆಲ್ಲದರ ಪರಿಣಾಮ, ಸೋಫಾ, ಪೀಠೋಪಕರಣಗಳು, ಮನೆಗಳ ಇಂಟೀರಿಯರ್ಸ್ ಬೆಲೆಯಲ್ಲಿ ಶೇ. 15-25ರಷ್ಟು ಏರಿಕೆಯಾಗುವ ಸಾಧ್ಯತೆಗಳಿವೆ. ಇದಲ್ಲದೆ, ಭಾರತೀಯ ಪ್ರೈವುಡ್ ಉದ್ಯಮವು ಮಧ್ಯಪ್ರಾಚ್ಯದಿಂದ ಬರುವ ಮೆಥನಾಲ್, ರೆನ್ಸಿನ್ಸ್, ಫಾರ್ಮಾಲ್ಡಿಹೈಡ್ ಮಾದರಿಯ ಅಂಟುದ್ರವಗಳ ಮೇಲೆ ಅವಲಂಬಿತವಾಗಿದ್ದು ಅವುಗಳ ಸಾಗಾಣಿಕೆ ಹಾಗೂ ಮೂಲಬೆಲೆಯಲ್ಲೂ ಏರಿಕೆಯಾಗಿದೆ. ಇದೆಲ್ಲದ ಪರಿಣಾಮ, ಗಣನೀಯವಾಗಿ ಹೆಚ್ಚಾಗುವ ಸಾಧ್ಯತೆಗಳಿವೆ.








