ನ್ಯೂಯಾರ್ಕ್: ವಿಶ್ವಸಂಸ್ಥೆಯ ಸಭೆಯೊಂದರಲ್ಲಿ ರಾಜತಾಂತ್ರಿಕ ನಿಯಮಗಳನ್ನೆಲ್ಲ ಗಾಳಿಗೆ ತೂರಿ ಇಸ್ರೇಲ್ ರಾಯಭಾರಿ ಮತ್ತು ವಿಶ್ವಸಂಸ್ಥೆಯ ಹಿರಿಯ ಅಧಿಕಾರಿಗಳ ನಡುವೆ ಭೀಕರ ಮಾತಿನ ಚಕಮಕಿ ಹಾಗೂ ಜಗಳ ನಡೆದಿದೆ. ಇಸ್ರೇಲ್ ಸೇನೆಯನ್ನು ವಿಶ್ವಸಂಸ್ಥೆಯು ಕಪ್ಪುಪಟ್ಟಿಗೆ (Blacklist) ಸೇರಿಸಿರುವುದರ ವಿರುದ್ಧ ಆಕ್ರೋಶ ಹೊರಹಾಕಿದ ಇಸ್ರೇಲ್ ರಾಯಭಾರಿ ಡೇನಿಯಲ್ ಡ್ಯಾನನ್, ಯುಎನ್ ಮಹಿಳಾ ಅಧಿಕಾರಿಯೊಬ್ಬರಿಗೆ ಸಾರ್ವಜನಿಕವಾಗಿಯೇ “ಬಾಯಿ ಮುಚ್ಚು!” (Be Quiet) ಎಂದು ಕೂಗಾಡಿರುವ ಘಟನೆ ಜಾಗತಿಕ ಮಟ್ಟದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಆಯೋಜಿಸಲಾಗಿದ್ದ ‘ಸಂಘರ್ಷ ಪೀಡಿತ ಪ್ರದೇಶಗಳಲ್ಲಿ ಲೈಂಗಿಕ ದೌರ್ಜನ್ಯ ನಿರ್ಮೂಲನೆ’ ಕುರಿತ ಅಂತರರಾಷ್ಟ್ರೀಯ ದಿನದ ಸಾರ್ವಜನಿಕ ಸಭೆಯಲ್ಲಿ ಈ ಹೈಡ್ರಾಮಾ ನಡೆದಿದೆ.
ಇಸ್ರೇಲ್ ಮತ್ತು ಗಾಜಾ ಸಂಘರ್ಷಕ್ಕೆ ಸಂಬಂಧಿಸಿದಂತೆ ವಿಶ್ವಸಂಸ್ಥೆಯು ಇತ್ತೀಚೆಗೆ ಎರಡು ಪ್ರಮುಖ ವರದಿಗಳನ್ನು ಬಿಡುಗಡೆ ಮಾಡಿತ್ತು.
ವಿಶ್ವಸಂಸ್ಥೆಯ ಲೈಂಗಿಕ ದೌರ್ಜನ್ಯ ತಡೆ ವಿಭಾಗದ ವಿಶೇಷ ಪ್ರತಿನಿಧಿ ಪ್ರಮೀಳಾ ಪ್ಯಾಟನ್ ಅವರು ಸಿದ್ಧಪಡಿಸಿದ ವರದಿಯಲ್ಲಿ, ಇಸ್ರೇಲ್ ವಶದಲ್ಲಿರುವ ಪ್ಯಾಲೆಸ್ತೀನಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ ಎಂದು ಆರೋಪಿಸಿ ಇಸ್ರೇಲ್ ಅನ್ನು ಮೊದಲ ಬಾರಿಗೆ ಕಪ್ಪುಪಟ್ಟಿಗೆ ಸೇರಿಸಲಾಗಿತ್ತು.
ಮಕ್ಕಳ ಮೇಲಿನ ದೌರ್ಜನ್ಯ ತಡೆ ವಿಭಾಗದ ವಿಶೇಷ ಪ್ರತಿನಿಧಿ ವನೆಸ್ಸಾ ಫ್ರೇಜಿಯರ್ ಅವರ ವರದಿಯಲ್ಲಿ, ಪ್ಯಾಲೆಸ್ತೀನ್ ಮಕ್ಕಳ ಹಕ್ಕುಗಳನ್ನು ಉಲ್ಲಂಘಿಸುತ್ತಿರುವ ಆರೋಪದ ಮೇಲೆ ಇಸ್ರೇಲ್ ಸೇನೆಯನ್ನು ‘ಲಿಸ್ಟ್ ಆಫ್ ಶೇಮ್’ (ಅಪಖ್ಯಾತಿಯ ಪಟ್ಟಿ) ಗೆ ಸೇರಿಸಲಾಗಿತ್ತು.
ಈ ವರದಿಗಳಿಂದ ಕೆರಳಿದ ಇಸ್ರೇಲ್ ರಾಯಭಾರಿ ಡೇನಿಯಲ್ ಡ್ಯಾನನ್, ಸಭೆಯಲ್ಲಿ ನೇರವಾಗಿ ಪ್ರಮೀಳಾ ಪ್ಯಾಟನ್ ಅವರತ್ತ ತಿರುಗಿ, “ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಅವರಿಗೆ ಇಸ್ರೇಲ್ ಅನ್ನು ಗುರಿ ಮಾಡುವುದೇ ಒಂದು ಗೀಳಾಗಿಬಿಟ್ಟಿದೆ. ನೀವು ಅವರ ಒತ್ತಡಕ್ಕೆ ಮಣಿದು ಈ ವರದಿ ಸಿದ್ಧಪಡಿಸಿದ್ದೀರಿ. ತಕ್ಷಣ ನಿಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ” ಎಂದು ವಾಗ್ದಾಳಿ ನಡೆಸಿದರು.
’ಬಾಯಿ ಮುಚ್ಚು ಅಥವಾ ಹೊರಗೆ ನಡಿ!’
ಇಸ್ರೇಲ್ ರಾಯಭಾರಿಯು ವಿಶ್ವಸಂಸ್ಥೆಯ ಅಧಿಕಾರಿಗಳ ವಿರುದ್ಧ ವೈಯಕ್ತಿಕ ನಿಂದನೆಗೆ ಇಳಿಯುತ್ತಿದ್ದಂತೆ, ಮಕ್ಕಳ ವಿಭಾಗದ ಮುಖ್ಯಸ್ಥರಾದ ವನೆಸ್ಸಾ ಫ್ರೇಜಿಯರ್ ಅವರು ಮಧ್ಯಪ್ರವೇಶಿಸಿ ಆಕ್ಷೇಪ ಎತ್ತಿದರು (Point of Order). “ನಾವು ವರದಿಯನ್ನು ಕೇವಲ ಗಾಳಿಯಲ್ಲಿ ಮಾಡಿಲ್ಲ, ನಮ್ಮ ಬಳಿ ದೃಢೀಕೃತ ಸಾಕ್ಷ್ಯಗಳಿವೆ. ದಯವಿಟ್ಟು ವೈಯಕ್ತಿಕ ದಾಳಿ ನಿಲ್ಲಿಸಿ” ಎಂದು ವನೆಸ್ಸಾ ಜೋರಾಗಿ ಹೇಳಿದರು.
ಇದರಿಂದ ತೀವ್ರ ಆಕ್ರೋಶಗೊಂಡ ಡೇನಿಯಲ್ ಡ್ಯಾನನ್, ವನೆಸ್ಸಾ ಅವರತ್ತ ಬೆರಳು ಮಾಡಿ ಸಭೆಯಲ್ಲೇ ಜೋರಾಗಿ ಕಿರುಚಾಡಿದರು:
”ಇಲ್ಲ, ನೀವು ಈಗ ಬಾಯಿ ಮುಚ್ಚಿ! (No, you be quiet!) ಏಕೆಂದರೆ ಈಗ ನಾನು ಮಾತನಾಡುತ್ತಿದ್ದೇನೆ. ನಿಮಗೆ ನಾಚಿಕೆಯಾಗಬೇಕು. ನಾವು ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರ, ನೀವು ಇಲ್ಲಿ ಕೆಲಸ ಮಾಡುವ ನೌಕರರು ಅಷ್ಟೆ. ನಮ್ಮ ಮೇಲೆ ದಬ್ಬಾಳಿಕೆ ನಡೆಸಲು ಬಿಡುವುದಿಲ್ಲ. ನಿಮ್ಮ ಈ ನಾಚಿಕೆಗೇಡಿನ ವರದಿಯೊಂದಿಗೆ ನೀವೀಗ ಸುಮ್ಮನೆ ಕುಳಿತುಕೊಳ್ಳಬೇಕು!”
ಸಭೆಯ ಸಂಘಟಕರು ಪರಿಸ್ಥಿತಿಯನ್ನು ನಿಯಂತ್ರಿಸಲು ಯತ್ನಿಸಿದರೂ ಕೇಳದ ಡ್ಯಾನನ್, “ನಿಮಗೆ ನನ್ನ ಮಾತು ಕೇಳಲು ಇಷ್ಟವಿಲ್ಲದಿದ್ದರೆ ಸಭೆಯಿಂದ ಹೊರಗೆ ನಡಿಯಿರಿ (Get out)” ಎಂದು ವನೆಸ್ಸಾ ಫ್ರೇಜಿಯರ್ ಅವರಿಗೆ ಸಾರ್ವಜನಿಕವಾಗಿಯೇ ಎಚ್ಚರಿಕೆ ನೀಡಿದರು.








