ಶಿವಮೊಗ್ಗ : ಕನ್ನಡ ಚಿತ್ರರಂಗ ಮತ್ತು ಕಿರುತೆರೆ ಲೋಕಕ್ಕೆ ಮತ್ತೊಂದು ಭರಿಸಲಾಗದ ಆಘಾತ ಎದುರಾಗಿದೆ. ಇತ್ತೀಚೆಗಷ್ಟೇ ಖ್ಯಾತ ನಟ, ನಿರ್ದೇಶಕ ದಿಲೀಪ್ ರಾಜ್ ಅವರ ನಿಧನದ Shockನಿಂದ ಹೊರಬರುವ ಮುನ್ನವೇ, ಸ್ಯಾಂಡಲ್‌ವುಡ್ ಮತ್ತೊಬ್ಬ ಪ್ರತಿಭಾವಂತ ತಂತ್ರಜ್ಞನನ್ನು ಕಳೆದುಕೊಂಡಿದೆ. ಕನ್ನಡದ ಯುವ ಬರಹಗಾರ ಹಾಗೂ ಸಹ ನಿರ್ದೇಶಕರಾಗಿದ್ದ ನಂದೀಶ್ ಜಿ.ಟಿ (37) ಅವರು ಇಂದು ಹೃದಯಾಘಾತದಿಂದ ವಿಧಿವಶರಾಗಿದ್ದಾರೆ.
ಮೂಲಗಳ ಪ್ರಕಾರ, ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮಾಳೂರಿನಲ್ಲಿರುವ ತಮ್ಮ ನಿವಾಸದಲ್ಲಿದ್ದ ವೇಳೆಯೇ ನಂದೀಶ್ ಅವರಿಗೆ ತೀವ್ರ ಹೃದಯಾಘಾತ ಸಂಭವಿಸಿದೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ. ಕೇವಲ 37ನೇ ವಯಸ್ಸಿಗೆ ಅವರು ಇಹಲೋಕ ತ್ಯಜಿಸಿರುವುದು ಎಲ್ಲರನ್ನೂ ದಿಗ್ಭ್ರಮೆಗೊಳಿಸಿದೆ.
ನಂದೀಶ್ ಅವರು ಕನ್ನಡ ಸಿನಿಮಾ ಹಾಗೂ ಧಾರಾವಾಹಿ ಲೋಕದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದ್ದರು. ಕಥೆ, ಚಿತ್ರಕಥೆ ಮತ್ತು ಚುರುಕಾದ ಸಂಭಾಷಣೆ ಬರೆಯುವುದರಲ್ಲಿ ಸೈ ಎನಿಸಿಕೊಂಡಿದ್ದ ಇವರು, ಚಿತ್ರರಂಗದಲ್ಲಿ ಭರವಸೆಯ ತಂತ್ರಜ್ಞನಾಗಿ ಗುರುತಿಸಿಕೊಂಡಿದ್ದರು. ಹಲವಾರು ಜನಪ್ರಿಯ ಕನ್ನಡ ಸಿನಿಮಾಗಳಿಗೆ ಹಾಗೂ ಕಿರುತೆರೆಯ ಸೂಪರ್ ಹಿಟ್ ಧಾರಾವಾಹಿಗಳಿಗೆ ಸಹ ನಿರ್ದೇಶಕರಾಗಿ ಮತ್ತು ಬರಹಗಾರರಾಗಿ ಕೆಲಸ ಮಾಡಿದ ಹೆಗ್ಗಳಿಕೆ ಇವರದ್ದಾಗಿತ್ತು.
ಯುವ ಬರಹಗಾರನ ಅಕಾಲಿಕ ಮರಣಕ್ಕೆ ಸ್ಯಾಂಡಲ್‌ವುಡ್‌ನ ಖ್ಯಾತ ಚಲನಚಿತ್ರ ಸಾಹಿತಿ ಕವಿರಾಜ್ ಸೇರಿದಂತೆ ಚಿತ್ರರಂಗ ಹಾಗೂ ಕಿರುತೆರೆಯ ಹಲವು ಗಣ್ಯರು, ನಿರ್ದೇಶಕರು ಮತ್ತು ಸಹೋದ್ಯೋಗಿಗಳು ತೀವ್ರ ಕಂಬನಿ ಮಿಡಿದಿದ್ದಾರೆ. “ಕೇವಲ 37ನೇ ವಯಸ್ಸಿಗೆ ಇಂತಹ ಒಬ್ಬ ಪ್ರತಿಭಾವಂತ ತಂತ್ರಜ್ಞನನ್ನು ಕಳೆದುಕೊಂಡಿರುವುದು ಕನ್ನಡ ಉದ್ಯಮಕ್ಕೆ ತುಂಬಲಾರದ ದೊಡ್ಡ ನಷ್ಟ” ಎಂದು ಸಿನಿಮಾ ರಂಗದ ಪ್ರಮುಖರು ಸಂತಾಪ ಸೂಚಿಸಿದ್ದಾರೆ.
ಮೃತ ನಂದೀಶ್ ಅವರು ಪತ್ನಿ ಹಾಗೂ ಇಬ್ಬರು ಪುಟ್ಟ ಮಕ್ಕಳನ್ನು ಒಳಗೊಂಡಂತೆ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇವರ ಹಠಾತ್ ನಿಧನದಿಂದಾಗಿ ಕುಟುಂಬದಲ್ಲಿ ಮತ್ತು ಮಾಳೂರು ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿದೆ. ಮೃತರ ಅಂತ್ಯಸಂಸ್ಕಾರವು ಅವರ ಸ್ವಗ್ರಾಮವಾದ ತೀರ್ಥಹಳ್ಳಿಯ ಮಾಳೂರಿನಲ್ಲಿ ಸಕಲ ಧಾರ್ಮಿಕ ವಿಧಿವಿಧಾನಗಳೊಂದಿಗೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.








