ಬೆಂಗಳೂರು: ಈಗಾಗಲೇ ವೇತನ ತಡವಾಗುತ್ತಿದ್ದ ಕಾರಣ, ಕೆ ಎಸ್ ಆರ್ ಟಿ ಸಿ ನೌಕರರಿಗೆ ( KSRTC Employees ) ಆಗುತ್ತಿದ್ದಂತ ಸಮಸ್ಯೆಯನ್ನು ಸರಿ ಪಡಿಸಲಾಗಿತ್ತು. ಪ್ರತಿ ತಿಂಗಳು ಒಂದನೇ ತಾರೀಕಿನಂದೇ ಎಲ್ಲಾ ಸಿಬ್ಬಂದಿಗಳಿಗೂ ವೇತನ ಪಾವತಿ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿತ್ತು. ಈ ಬಳಿಕ ಕೆ ಎಸ್ ಆರ್ ಟಿ ಸಿ ನೌಕರಿಗೆ ಮತ್ತೊಂದು ಗುಡ್ ನ್ಯೂಸ್ ನೀಡಲಾಗಿದೆ. ಅದೇ ಇದೇ ಮೊದಲ ಬಾರಿಗೆ ಕೆ ಎಸ್ ಆರ್ ಟಿ ಸಿ ಸಿಬ್ಬಂದಿಗಳಿಗೆ ರೂ.50 ಲಕ್ಷ ಅಪಘಾತ ವಿಮಾ ಯೋಜನೆ ಸೌಲಭ್ಯ ಜಾರಿಗೊಳಿಸಲಾಗಿದೆ.
ಹೌದು. ಇದುವರೆಗೂ ನಿಗಮದ ಸಿಬ್ಬಂದಿಗಳು ಅಪಘಾತದಲ್ಲಿ (ಕರ್ತವ್ಯದ ಮೇಲೆ ಅಥವಾ ಕರ್ತವ್ಯದಲ್ಲಿ ಇಲ್ಲದಿರುವಾಗಲೂ) ಮೃತಪಟ್ಟರೆ ಅಥವಾ ಶಾಶ್ವತ / ಭಾಗಶಃ ಅಂಗವೈಕಲ್ಯಕ್ಕೆ ತುತ್ತಾದರೆ ಯಾವುದೇ ದೊಡ್ಡ ಮೊತ್ತದ ಪರಿಹಾರದ ಹಣ ಅವರ ಅವಲಂಬಿತರಿಗಾಗಲಿ ಅಥವಾ ಅವರಿಗಾಗಲಿ ಲಭಿಸುತ್ತಿರಲಿಲ್ಲ. ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನು ನಿಗಮ ಇರಿಸಿದೆ.
ಸಿಬ್ಬಂದಿಗಳು ಸಂಸ್ಥೆಗಾಗಿ ಹಗಲಿರುಳು ದುಡಿಯುತ್ತಾರೆ ಅವರ ಆಕಸ್ಮಿಕ ಅಗಲಿಕೆಯು ಅಥವಾ ಅಂಗವೈಕಲ್ಯತೆಯು ಅವರ ಪರಿವಾರದವರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಬಾರದೆಂಬ ಕಾರಣದಿಂದ ಅವರ ಅವಲಂಬಿತರ ಹಿತ ಕಾಪಾಡುವ ಈ ಅಪಘಾತ ವಿಮಾ ಪ್ಯಾಕೇಜ್ ಯೋಜನೆಯ ಒಡಂಬಡಿಕೆಯನ್ನು ಇಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ರವರೊಂದಿಗೆ ನಿಗಮದ ಕೇಂದ್ರ ಕಚೇರಿಯಲ್ಲಿ ಶಾಸಕರು ಹಾಗೂ ಅಧ್ಯಕ್ಷರಾದ ಎಂ. ಚಂದ್ರಪ್ಪರವರ ( M Chandrappa ) ಸಮ್ಮುಖದಲ್ಲಿ ಕೆ ಎಸ್ ಆರ್ ಟಿ ಸಿಯ ವ್ಯವಸ್ಥಾಪಕ ನಿರ್ದೇಶಕರಾದಂತ ವಿ.ಅನ್ಬುಕುಮಾರ್ ( V Anbhukumar ) ಹಾಗೂ ಎಸ್ ಬಿಐನ ಡಿಜಿಎಂ ಪಂಕಜ್ ತಪ್ಲಿಯಾಲ್ ಅವರು ಸಹಿ ಹಾಕಿದರು.
BIGG NEWS: ಮಳವಳ್ಳಿ ಬಾಲಕಿ ಕುಟುಂಬಕ್ಕೆ 5 ಲಕ್ಷ ಪರಿಹಾರ ವಿತರಿಸಿದ ಜಮೀರ್
ಈ ಎಲ್ಲಾ ಸಂದರ್ಭದಲ್ಲಿ ಅಪಘಾತ ವಿಮಾ ಯೋಜನೆ ಪರಿಹಾರ ಲಭ್ಯ
* ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ತಮ್ಮ ವೇತನ ಖಾತೆಯನ್ನು ಹೊಂದಿರುವ ನಿಗಮದ ನೌಕರರಿಗೆ ” ಪ್ರೀಮಿಯಂ ರಹಿತ” ವೈಯುಕ್ತಿಕ ಅಪಘಾತ ವಿಮೆಯನ್ನು ಒಳಗೊಂಡಿದೆ. ( ಈಗಾಗಲೇ ನಿಗಮದ ಶೇ55 ರಷ್ಷು ಸಿಬ್ಬಂದಿಗಳು ಭಾರತೀಯ ಸ್ಟೇಟ್ ಬ್ಯಾಂಕ್ ನಲ್ಲಿ ಖಾತೆಗಳನ್ನು ಹೊಂದಿರುತ್ತಾರೆ)
* ಈ ವೈಯುಕ್ತಿಕ ವಿಮಾ ಯೋಜನೆಯಿಂದ ಪಾಲಿಸಿದಾರರು ಅಫಘಾತದಲ್ಲಿ ಮೃತಪಟ್ಟಲ್ಲಿ ಅವರ ಅವಲಂಬಿತರಿಗೆ ರೂ.50 ಲಕ್ಷಗಳ ಪರಿಹಾರದ ಹಣ ಕೂಡಲೇ ದೊರೆಯಲಿದೆ.
* ಅಫಘಾತದಲ್ಲಿ ಸಿಬ್ಬಂದಿಗಳು ಶಾಶ್ವತವಾಗಿ ಪೂರ್ಣ ಅಂಗವೈಕಲ್ಯಕ್ಕೆ ತುತ್ತಾದಲ್ಲಿ ರೂ.20 ಲಕ್ಷಗಳ ಹ಼ಣ ಹಾಗೂ ಶಾಶ್ವತ ಭಾಗಶ: ಅಂಗವೈಕಲ್ಯ ಉಂಟಾದಲ್ಲಿ ರೂ.10 ಲಕ್ಷಗಳ ವಿಮಾ ಪರಿಹಾರ ದೊರೆಯಲಿದೆ.
* ಈ ವಿಮಾ ಯೋಜನೆಯಲ್ಲಿ ಮತ್ತೊಂದು ಉಪಯಕ್ತ ಕ್ರಮವೆಂದರೆ ಕರ್ತವ್ಯ ನಿರತ ಹಾಗೂ ಕರ್ತವ್ಯದಲ್ಲಿ ಇಲ್ಲದ (On duty and Off duty) ಸಮಯದಲ್ಲೂ ಆಗುವ ವೈಯಕ್ತಿಕ ಅಪಘಾತಗಳಿಗೂ ವಿಮೆ ಅನ್ವಯಿಸುತ್ತದೆ.
* ಸಿಬ್ಬಂದಿಗಳ ಅಪಘಾತದಲ್ಲಿನ ಪ್ಲಾಸ್ಟಿಕ್ ಸರ್ಜರಿ ಚಿಕಿತ್ಸೆಗಾಗಿ ಗರಿಷ್ಟ ರೂ.10 ಲಕ್ಷ, ಔಷಧಗಳ ಆಮದಿಗಾಗಿ ಗರಿಷ್ಟ ರೂ.5 ಲಕ್ಷ, ಕೋಮಾದಲ್ಲಿ ಮೃತಪಟ್ಟರೆ ಹೆಚ್ಚುವರಿ ರೂ.2 ಲಕ್ಷ (ರೂ.50 ಲಕ್ಷ + ರೂ.2 ಲಕ್ಷ), ಏರ್ ಅಂಬ್ಯೂಲೆನ್ಸ್ ಸೇವೆಗೆ ರೂ.10 ಲಕ್ಷ ವಿಮಾ ಪರಿಹಾರ ನೀಡಲಾಗುವುದು.
* ಸಿಬ್ಬಂದಿಗಳು ಅಪಘಾತದಲ್ಲಿ ಮೃತಪಟ್ಟರೆ ಮಕ್ಕಳ ಪದವಿ ಶಿಕ್ಷಣಕ್ಕೆ ಗರಿಷ್ಟ ರೂ.5 ಲಕ್ಷ ಹಾಗೂ ಹೆಣ್ಣು ಮಗಳ ವಿವಾಹಕ್ಕೆ ಗರಿಷ್ಟ ರೂ.5 ಲಕ್ಷಗಳ ವರೆಗೆ ಆರ್ಥಿಕ ಸಹಾಯವನ್ನು ಈ ವಿಮಾ ಯೋಜನೆಯು ಒಳಗೊಂಡಿರುತ್ತದೆ.
ಈ ಸಂದರ್ಭದಲ್ಲಿ ಮಾತನಾಡಿದ ನಿಗಮದ ಅಧ್ಯಕ್ಷರಾದ ಎಂ. ಚಂದ್ರಪ್ಪ ನವರು ನಿಗಮವು ಜಾರಿಗೊಳಿಸುತ್ತಿರುವ ಈ ವಿಮಾ ಯೋಜನೆಯು ಕಾರ್ಮಿಕ ಮತ್ತು ಅವರ ಕುಟುಂಬದವರ ಹಿತದೃಷ್ಟಿಯಿಂದ ಜಾರಿಗೊಳಿಸುತ್ತಿರುವ ಉತ್ತಮವಾದ ಯೋಜನೆಯಾಗಿರುವುದಾಗಿ ತಿಳಿಸಿ, ಭಾರತೀಯ ಸ್ಟೇಟ್ ಬ್ಯಾಂಕ್ ರವರ ಸಹಯೋಗಕ್ಕೆ ಅಭಿನಂದನೆ ಸಲ್ಲಿಸಿದರು ಹಾಗೂ ರಸ್ತೆ ಸಾರಿಗೆ ನಿಗಮಗಳಲ್ಲಿಯೇ ಅತ್ಯಧಿಕ ಮೊತ್ತದ ಅಪಘಾತ ( On duty and Off duty ಒಳಗೊಂಡಂತೆ ನೀಡಲಾಗುವ) ವಿಮಾ ಯೋಜನೆಯಾಗಿರುವುದಾಗಿ ಸಂತಸ ವ್ಯಕ್ರಪಡಿಸಿದರು.
ಈ ಕಾರ್ಯಕ್ರಮದಲ್ಲಿ ಕೆ ಎಸ್ ಆರ್ ಟಿಸಿಯ ನಿರ್ದೇಶಕರು ( ಸಿಬ್ಬಂದಿ ಮತ್ತು ಜಾಗೃತ) ಡಾ. ನವೀನ್ ಭಟ್ ವೈ, ಸರೋಜ್ ಕುಮಾರ್ ದಾಸ್, ಮುಖ್ಯ ವ್ಯವಸ್ಥಾಪಕರು, ಎಸ್.ಬಿ.ಐ ಹಾಗೂ ಇತರೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.