ಕೋಲಾರ: ಅಂಬೇಡ್ಕರ್ ಭವನ ನಿರ್ಮಾಣ ವಿಚಾರವಾಗಿ ಬಂಗಾರಪೇಟೆ ಶಾಸಕರೊಬರು ಸಮಾಜ ಕಾರ್ಯಕರ್ತರೊಬ್ಬರಿಗೆ ಬೆದರಿಕೆ ಹಾಕಿದ್ದಾರೆ ಎಂದು ಹೇಳಲಾಗಿದೆ. ಹೀಗಾಗಿ ಈ ಬಗ್ಗೆ ಕೆಜಿಎಫ್ ಎಸ್ಪಿ ಅವರಿಗೆ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ.
ಬಂಗಾರಪೇಟೆಕಾಂಗ್ರೆಸ್ ಶಾಸಕ ಎಸ್.ಎನ್. ನಾರಾಯಣಸ್ವಾಮಿ, ಸಮಾಜ ಸೇವಕ ಶ್ರೀಧರ್ ಎಂಬುವವರಿಗೆ ತಮ್ಮ ಸಹಚರರ ಮೂಲಕ ಪ್ರಾಣ ಬೆದರಿಕೆ ಹಾಕಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಬೆಳವಣಿಗೆಯ ಬಳಿಕ ಸಮಾಜ ಸೇವಕ ಶ್ರೀಧರ್ ಅವರು ತಮಗೆ ಹಾಗೂ ತಮ್ಮ ಕುಟುಂಬಕ್ಕೆ ರಕ್ಷಣೆ ನೀಡುವಂತೆ ಕೋರಿ, ಕೆಜಿಎಫ್ ಎಸ್ಪಿ ಧರಣಿ ದೇವಿ ಅವರಿಗೆ ದೂರು ಸಲ್ಲಿಸಿದ್ದಾರೆ.
ಬಂಗಾರಪೇಟೆ ಪಟ್ಟಣದ ಸರ್ವೇ ನಂ.137 ರ ಒಬ್ಬಟ್ಟು ಕೆರೆಯಲ್ಲಿ ಅಕ್ರಮವಾಗಿ ಅಂಬೇಡ್ಕರ್ ಭವನ ನಿರ್ಮಾಣ ಮಾಡುವುದಾಗಿ ಬಂಗಾರಪೇಟೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಘೋಷಿಸಿದ್ದರು. ಆದ್ರೆ ಕರೆಯ ಅಂಗಳದಲ್ಲಿ ಸುಮಾರು 3 ಎಕರೆ ಜಮೀನು ಒತ್ತುವರಿಯಾಗಿದ್ದು, ಇದರಲ್ಲಿ ತೋಟಗಾರಿಕೆ ಇಲಾಖೆ, ಕನ್ನಡ ಭವನ, ವಿದ್ಯಾರ್ಥಿ ನಿಲಯ ಮತ್ತು ಪ್ರಾಥಮಿಕ ಶಾಲೆಯನ್ನು ಕಟ್ಟಲಾಗಿದೆ.
ಇದರ ಜೊತೆಗೆ, ಈಗ ಶಾಸಕ ನಾರಾಯಣಸ್ವಾಮಿ ಅಂಬೇಡ್ಕರ್ ಭವನ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಈ ಬಗ್ಗೆ ಸಮಾಜ ಸೇವಕ ಶ್ರೀಧರ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಮಧ್ಯಂತರ ತಡೆಯಾಜ್ಞೆ ತರಲಾಗಿತ್ತು.