ಬೆಂಗಳೂರು: ಕೈಗೆಟುಕುವ ದರ ಹಾಗೂ ಅತ್ಯುತ್ತಮ ಗ್ರಾಹಕ ಸೇವೆಯಿಂದ ಭಾರತೀಯರ ನೆಚ್ಚಿನ ವಿಮಾನಯಾನ ಸಂಸ್ಥೆಯಾಗಿ ಬೆಳೆಯುತ್ತಿರುವ ‘ಆಕಾಶ ಏರ್’ ಇದೀಗ ತನ್ನ ಜಾಲವನ್ನು ಮತ್ತಷ್ಟು ವಿಸ್ತರಿಸಿದೆ. ನೊಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಾಣಿಜ್ಯ ವಿಮಾನ ಸೇವೆಗಳನ್ನು ಆರಂಭಿಸಿದ ಮೊದಲ ಸಂಸ್ಥೆ ಎಂಬ ಹೆಗ್ಗಳಿಕೆಗೆ ಆಕಾಶ ಏರ್ ಪಾತ್ರವಾಗಿದೆ.
ಜೂನ್ 16 ರಂದು ನಡೆದ ಉದ್ಘಾಟನಾ ಸಮಾರಂಭದಲ್ಲಿ, ಮೊದಲ ವಿಮಾನವು ಬೆಳಿಗ್ಗೆ 7.25ಕ್ಕೆ ನವೀ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟು, ಬೆಳಿಗ್ಗೆ 9.35ಕ್ಕೆ ನೊಯ್ಡಾವನ್ನು ತಲುಪಿತು. ಅಲ್ಲಿಂದ ಬೆಳಿಗ್ಗೆ 10.15ಕ್ಕೆ ಹೊರಟ ವಿಮಾನ ಮಧ್ಯಾಹ್ನ 12.30ಕ್ಕೆ ಮತ್ತೆ ನವೀ ಮುಂಬೈ ತಲುಪುವ ಮೂಲಕ ತನ್ನ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿತು.
ಬೆಂಗಳೂರಿಗರಿಗೂ ನೇರ ಸಂಪರ್ಕ
ಈ ಹೊಸ ಮಾರ್ಗದ ಆರಂಭವು ಕರ್ನಾಟಕದ ಜನರಿಗೂ, ವಿಶೇಷವಾಗಿ ಬೆಂಗಳೂರಿಗರಿಗೆ ದೊಡ್ಡ ಮಟ್ಟದಲ್ಲಿ ಅನುಕೂಲ ಮಾಡಿಕೊಡಲಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಿಂದ ನೊಯ್ಡಾಗೆ ಪ್ರತಿದಿನ ತಡೆರಹಿತ ವಿಮಾನ ಸಂಚರಿಸಲಿದೆ. ವಿಮಾನ ಸಂಖ್ಯೆ ‘QP 1575’ ಪ್ರತಿದಿನ ಸಂಜೆ 4:25ಕ್ಕೆ ಬೆಂಗಳೂರಿನಿಂದ ಹೊರಟು, 7:15ಕ್ಕೆ ನೊಯ್ಡಾ ತಲುಪಲಿದೆ. ಅದೇ ರೀತಿ ನೊಯ್ಡಾದಿಂದ ರಾತ್ರಿ 7:55ಕ್ಕೆ ಹೊರಡುವ ವಿಮಾನ ‘QP 1576’ ರಾತ್ರಿ 11:00 ಗಂಟೆಗೆ ಮರಳಿ ಬೆಂಗಳೂರು ತಲುಪಲಿದೆ.
ಈ ಮಹತ್ವದ ಮೈಲುಗಲ್ಲಿನ ಬಗ್ಗೆ ಮಾತನಾಡಿದ ಆಕಾಶ ಏರ್‌ನ ಸಹ-ಸ್ಥಾಪಕ ಮತ್ತು ಮುಖ್ಯ ವಾಣಿಜ್ಯ ಅಧಿಕಾರಿ ಆನಂದ್ ಶ್ರೀನಿವಾಸನ್, “ನೊಯ್ಡಾದಿಂದ ನಮ್ಮ ಕಾರ್ಯಾಚರಣೆ ಆರಂಭವಾಗಿರುವುದು ನಮಗೆ ಹೆಮ್ಮೆಯ ವಿಷಯ. ಇದು ರಾಷ್ಟ್ರೀಯ ರಾಜಧಾನಿ ಪ್ರದೇಶ ಮತ್ತು ಸುತ್ತಮುತ್ತಲಿನ ರಾಜ್ಯಗಳ ಪ್ರಯಾಣಿಕರಿಗೆ ಅತ್ಯುತ್ತಮ ಸಂಪರ್ಕವನ್ನು ಒದಗಿಸುತ್ತದೆ. ಗ್ರಾಹಕರಿಗೆ ವಿಶ್ವಾಸಾರ್ಹ, ಸುಗಮ ಹಾಗೂ ಆರಾಮದಾಯಕ ಪ್ರಯಾಣದ ಅನುಭವವನ್ನು ನೀಡಲು ನಾವು ಬದ್ಧರಾಗಿದ್ದೇವೆ,” ಎಂದರು.
“ನಮ್ಮ ವಿಮಾನ ನಿಲ್ದಾಣಕ್ಕೆ ಆಕಾಶ ಏರ್ ಆಗಮಿಸಿರುವುದು ಉತ್ತರ ಪ್ರದೇಶ ಮತ್ತು ಉತ್ತರ ಭಾರತದ ಆರ್ಥಿಕ ಬೆಳವಣಿಗೆಗೆ ದೊಡ್ಡ ಉತ್ತೇಜನ ನೀಡಲಿದೆ. ಪ್ರಯಾಣಿಕರಿಗೆ ಇದು ಹೊಸ ಅವಕಾಶಗಳನ್ನು ಸೃಷ್ಟಿಸಲಿದೆ” ಎಂದು ನೊಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಉಪಾಧ್ಯಕ್ಷ ಕ್ರಿಸ್ಟೋಫ್ ಶ್ನೆಲ್ಮಾನ್ ಹರ್ಷ ವ್ಯಕ್ತಪಡಿಸಿದರು.
ಅತ್ಯಾಧುನಿಕ ವಿಮಾನ ದುರಸ್ತಿ ಘಟಕ ಸ್ಥಾಪನೆ
ಕೇವಲ ವಿಮಾನಯಾನ ಸೇವೆ ಮಾತ್ರವಲ್ಲದೆ, ಆಕಾಶ ಏರ್ ಸಂಸ್ಥೆಯು ನೊಯ್ಡಾ ವಿಮಾನ ನಿಲ್ದಾಣದ ಆವರಣದಲ್ಲಿಯೇ ಅತ್ಯಾಧುನಿಕ ವಿಮಾನ ನಿರ್ವಹಣೆ ಮತ್ತು ದುರಸ್ತಿ ಘಟಕವನ್ನೂ ಸ್ಥಾಪಿಸುತ್ತಿದೆ. ಇದು ವಿಮಾನಗಳ ಸುರಕ್ಷತೆ ಮತ್ತು ಕಾರ್ಯಾಚರಣಾ ದಕ್ಷತೆಯನ್ನು ಮತ್ತಷ್ಟು ಹೆಚ್ಚಿಸಲಿದೆ.
ಆಗಸ್ಟ್ 2022ರಲ್ಲಿ ಆರಂಭವಾದ ಆಕಾಶ ಏರ್, ಕೇವಲ ಮೂರು ವರ್ಷಗಳಲ್ಲಿ 2.8 ಕೋಟಿಗೂ ಹೆಚ್ಚು ಪ್ರಯಾಣಿಕರಿಗೆ ಸೇವೆ ಒದಗಿಸಿದೆ. ಗ್ರಾಹಕರಿಗೆ ಆರಾಮದಾಯಕ ಪ್ರಯಾಣ ನೀಡಲು ವಿಮಾನದಲ್ಲಿ ಹೆಚ್ಚು ಲೆಗ್‌ರೂಮ್, ಯುಎಸ್‌ಬಿ ಚಾರ್ಜಿಂಗ್ ಪೋರ್ಟ್‌ಗಳು, ಮತ್ತು ‘ಕೆಫೆ ಆಕಾಶ’ ಮೂಲಕ ರುಚಿಕರವಾದ ಊಟವನ್ನು ಸಂಸ್ಥೆ ಒದಗಿಸುತ್ತಿದೆ. ಸದ್ಯ ಬೆಂಗಳೂರು, ಮುಂಬೈ, ದೆಹಲಿ, ಚೆನ್ನೈ ಸೇರಿದಂತೆ ದೇಶದ 27 ಮತ್ತು ಅಂತಾರಾಷ್ಟ್ರೀಯ ಮಟ್ಟದ 7 ನಗರಗಳಿಗೆ ವಿಮಾನ ಸೇವೆ ನೀಡುತ್ತಿದೆ.








