ಬೆಂಗಳೂರು: ಸ್ಯಾಂಡಲ್‌ವುಡ್ ನಟಿ ರನ್ಯಾ ರಾವ್ ಅವರಿಗೆ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ಕೊನೆಗೂ ಬಿಗ್ ರಿಲೀಫ್ ಸಿಕ್ಕಿದೆ. ಕಳೆದ ಒಂದು ವರ್ಷದಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ನಟಿಗೆ ಆರ್ಥಿಕ ಅಪರಾಧಗಳ ತಡೆ ನ್ಯಾಯಾಲಯವು ಬುಧವಾರ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ.
102 ಕೋಟಿ ರೂ. ಚಿನ್ನದ ಕಳ್ಳಸಾಗಣೆ ಆರೋಪ
ಕಳೆದ 2025ರ ಮಾರ್ಚ್ 3ರಂದು ಸುಮಾರು 102 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಚಿನ್ನವನ್ನು ಕಳ್ಳಸಾಗಣೆ ಮಾಡಿದ ಗಂಭೀರ ಆರೋಪದ ಮೇಲೆ ಕಂದಾಯ ಗುಪ್ತಚರ ನಿರ್ದೇಶನಾಲಯ (DRI) ಅಧಿಕಾರಿಗಳು ರನ್ಯಾ ರಾವ್ ಅವರನ್ನು ಬಂಧಿಸಿದ್ದರು. ವಿದೇಶದಿಂದ ಅಕ್ರಮವಾಗಿ ಚಿನ್ನ ತರುತ್ತಿದ್ದ ಜಾಲದೊಂದಿಗೆ ನಟಿಗೆ ಸಂಪರ್ಕವಿದೆ ಎಂಬ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿತ್ತು.
ಜಾಮೀನು ವಿಳಂಬಕ್ಕೆ ಕಾರಣವೇನು?
ಬಂಧನದ ಬಳಿಕ ರನ್ಯಾ ರಾವ್ ಪರಪ್ಪನ ಅಗ್ರಹಾರ ಜೈಲು ಸೇರಿದ್ದರು. ಈ ನಡುವೆ ಅವರು ಹೈಕೋರ್ಟ್ ಏಕಸದಸ್ಯ ಪೀಠಕ್ಕೆ ಜಾಮೀನು ಅರ್ಜಿ ಸಲ್ಲಿಸಿದ್ದರಾದರೂ, ಅರ್ಜಿಯು ವಜಾಗೊಂಡಿತ್ತು. ಮುಖ್ಯವಾಗಿ, ಕೇಂದ್ರೀಯ ಆರ್ಥಿಕ ಗುಪ್ತಚರ ಬ್ಯೂರೋ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಕಾಫಿಪೋಸಾ (COFEPOSA) ಕಾಯ್ದೆಯ ಸೆಕ್ಷನ್ 3(1) ಅಡಿ ಬಂಧನದ ಆದೇಶ ಹೊರಡಿಸಿತ್ತು. ಈ ಕಠಿಣ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದರಿಂದ ಕಳೆದ ಒಂದು ವರ್ಷದಿಂದ ಅವರಿಗೆ ಜಾಮೀನು ಪಡೆಯಲು ಸಾಧ್ಯವಾಗಿರಲಿಲ್ಲ.
ಇಂದು ಬಿಡುಗಡೆ ಸಾಧ್ಯತೆ
ಜೈಲಿನಲ್ಲಿ ಒಂದು ವರ್ಷದ ಸುದೀರ್ಘ ವಾಸದ ಬಳಿಕ, ಇಂದು ಆರ್ಥಿಕ ಅಪರಾಧಗಳ ತಡೆ ನ್ಯಾಯಾಲಯವು ಜಾಮೀನು ನೀಡಿದೆ. ನ್ಯಾಯಾಲಯದ ಆದೇಶದ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ, ಇಂದು ಸಂಜೆಯೊಳಗೆ ರನ್ಯಾ ರಾವ್ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆಯಿದೆ.
ನಟಿಯ ಬಿಡುಗಡೆಯ ಸುದ್ದಿ ಅವರ ಕುಟುಂಬಸ್ಥರು ಹಾಗೂ ಆಪ್ತರಲ್ಲಿ ನಿಟ್ಟುಸಿರು ಬಿಡುವಂತೆ ಮಾಡಿದೆ.
ಕರ್ನಾಟಕ SSLC ಪರೀಕ್ಷೆ-1ರ ಫಲಿತಾಂಶ ಯಾವಾಗ? ರಿಸಲ್ಟ್ ಚೆಕ್ ಮಾಡೋದು ಹೇಗೆ? ಇಲ್ಲಿದೆ ಮಾಹಿತಿ | SSLC exam result
BREAKING: ಕೊಡಗಿನಲ್ಲಿ ವಿದೇಶಿ ಪ್ರವಾಸಿ ಮಹಿಳೆ ಮೇಲೆ ಅತ್ಯಾಚಾರ: ಹೋಂ ಸ್ಟೇ ಮಾಲೀಕ ಸೇರಿ ಇಬ್ಬರು ಅರೆಸ್ಟ್








