ಬೆಂಗಳೂರು: ಪ್ರೀತಿಯ ಹೆಸರಲ್ಲಿ ನಡೆಯುವ ಅವಾಂತರಗಳು ರಾಜ್ಯದಲ್ಲಿ ಮಿತಿಮೀರುತ್ತಿದ್ದು, ರಾಜಧಾನಿಯ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೈ ನಡುಗಿಸುವಂತಹ ಘಟನೆಯೊಂದು ಬೆಳಕಿಗೆ ಬಂದಿದೆ. “ವಿದೇಶಿ ಶೈಲಿಯಲ್ಲಿ ಪ್ರಪೋಸ್ ಮಾಡ್ತೀನಿ” ಎಂದು ನಂಬಿಸಿ ಯುವತಿಯೊಬ್ಬಳು ತನ್ನ ಪ್ರಿಯಕರನ ಕೈ-ಕಾಲು ಕಟ್ಟಿ, ಪೆಟ್ರೋಲ್ ಸುರಿದು ಹತ್ಯೆ ಮಾಡಿದ ಭೀಕರ ಆರೋಪ ಕೇಳಿಬಂದಿದೆ.
ಘಟನೆಯ ವಿವರ: ಮೃತ ಕಿರಣ್ ಮತ್ತು ಆರೋಪಿ ಯುವತಿ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಪರಸ್ಪರ ಪ್ರೀತಿಸುತ್ತಿದ್ದರು. ಮಂಗಳವಾರ ಯುವತಿಯ ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಿರಣ್ ಅಲ್ಲಿಗೆ ಬಂದಿದ್ದನು. ಈ ವೇಳೆ ಯುವತಿಯು “ನಿನಗೊಂದು ಸರ್ಪ್ರೈಸ್ ಪ್ರಪೋಸ್ ಮಾಡ್ತೀನಿ” ಎಂದು ನಂಬಿಸಿ ಕಿರಣ್‌ನ ಕಣ್ಣಿಗೆ ಬಟ್ಟೆ ಕಟ್ಟಿ, ಕೈ-ಕಾಲುಗಳನ್ನು ಹಗ್ಗದಿಂದ ಬಿಗಿದಿದ್ದಾಳೆ. ಕಿರಣ್ ಅಸಹಾಯಕನಾಗುತ್ತಿದ್ದಂತೆ ಆತನ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾಳೆ ಎನ್ನಲಾಗಿದೆ. ಬೆಂಕಿಯ ಜ್ವಾಲೆಯಿಂದ ತಪ್ಪಿಸಿಕೊಳ್ಳಲಾಗದೆ ಕಿರಣ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಸಿಸಿಟಿವಿಯಿಂದ ಬಯಲಾದ ಸುಳ್ಳು: ಆರಂಭದಲ್ಲಿ “ಕಿರಣ್ ತಾನಾಗಿಯೇ ಬೆಂಕಿ ಹಚ್ಚಿಕೊಂಡ” ಎಂದು ಪೊಲೀಸರಿಗೆ ಸುಳ್ಳು ಹೇಳಿದ್ದ ಯುವತಿಯ ಬಣ್ಣ ಸಿಸಿಟಿವಿ ದೃಶ್ಯಾವಳಿಗಳಿಂದ ಬಯಲಾಗಿದೆ. ಕಿರಣ್ ಬರುವಾಗ ಯಾವುದೇ ಪೆಟ್ರೋಲ್ ತಂದಿರಲಿಲ್ಲ, ಹೀಗಾಗಿ ಯುವತಿಯೇ ಇದನ್ನು ಮೊದಲೇ ಸಂಚು ರೂಪಿಸಿ ತಂದಿಟ್ಟಿದ್ದಳು ಎಂಬ ಅನುಮಾನ ದಟ್ಟವಾಗಿದೆ. ಈ ಭೀಕರ ಕೃತ್ಯವನ್ನು ಯುವತಿ ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದಾಳೆ ಎಂಬ ಸ್ಫೋಟಕ ಮಾಹಿತಿಯೂ ಲಭ್ಯವಾಗಿದೆ.
ಸದ್ಯ ಬ್ಯಾಡರಹಳ್ಳಿ ಪೊಲೀಸರು ಯುವತಿಯನ್ನು ವಶಕ್ಕೆ ಪಡೆದಿದ್ದು, ಈ ಕ್ರೌರ್ಯಕ್ಕೆ ನಿಖರ ಕಾರಣವೇನು ಎಂಬ ಬಗ್ಗೆ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
BREAKING: ‘ಡಿಸಿ ಬರುವವರೆಗೆ ಇಳಿಯಲ್ಲ’ ಎಂದು 9ನೇ ಅಂತಸ್ತಿನ ಕಟ್ಟಡ ಏರಿ ಯುವಕನ ಆತ್ಮಹತ್ಯೆ ಬೆದರಿಕೆ








