ಬೆಂಗಳೂರು: ತಮಗೆ ಖಾತೆ ಹಂಚಿಕೆಯಾದ ಕೇವಲ ಒಂದೇ ಗಂಟೆಯಲ್ಲಿ ನೂತನ ಆರೋಗ್ಯ ಸಚಿವ ಯು.ಟಿ.ಖಾದರ್ ಅವರು ಸಾರ್ವಜನಿಕರ ಸೇವೆಯಲ್ಲಿ ಸಕ್ರಿಯರಾಗಿದ್ದಾರೆ. ತಡರಾತ್ರಿ ಜಯನಗರದ ಸಾರ್ವಜನಿಕ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ ಸಚಿವರು, ಇಂಚಿಂಚೂ ಪರಿಶೀಲನೆ ನಡೆಸುವ ಮೂಲಕ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಬಿಸಿ ಮುಟ್ಟಿಸಿದ್ದಾರೆ.
ಆಸ್ಪತ್ರೆಯ ಐಸಿಯು (ICU), ರೋಗಿಗಳಿಗೆ ನೀಡಲಾಗುತ್ತಿರುವ ಚಿಕಿತ್ಸಾ ವಿಧಾನ ಹಾಗೂ ಸ್ವಚ್ಛತೆಯನ್ನು ಖುದ್ದಾಗಿ ವೀಕ್ಷಿಸಿದ ಸಚಿವರು, ಅಲ್ಲಿನ ವ್ಯವಸ್ಥೆಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಆಸ್ಪತ್ರೆಯ ನೆಲದ ಮೇಲೆ ಗರ್ಭಿಣಿಯೊಬ್ಬರು ಕುಳಿತಿರುವುದನ್ನು ಕಂಡು ತೀವ್ರ ಆಕ್ರೋಶಗೊಂಡ ಸಚಿವರು, ತಕ್ಷಣವೇ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಿದರು.ತಡರಾತ್ರಿಯ ಕರ್ತವ್ಯದ ಅವಧಿಯಲ್ಲಿ ಹಾಜರಾತಿ ಪುಸ್ತಕ ಪರಿಶೀಲಿಸಿದಾಗ ಹಲವು ಸಿಬ್ಬಂದಿ ಗೈರಾಗಿರುವುದು ಕಂಡುಬಂದಿತು. ಈ ಹಿನ್ನೆಲೆಯಲ್ಲಿ ಬೇಜವಾಬ್ದಾರಿ ತೋರಿದ ಸಿಬ್ಬಂದಿಗೆ ಸಚಿವರು ಕಠಿಣ ಎಚ್ಚರಿಕೆ (ವಾರ್ನಿಂಗ್) ನೀಡಿದ್ದಾರೆ.








