ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರನ್ನು ಕಸ ಮುಕ್ತ ಹಾಗೂ ಸ್ವಚ್ಛ ನಗರವನ್ನಾಗಿ ಮಾಡಲು ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ಈಗ ಬಿಗಿ ಕ್ರಮಗಳಿಗೆ ಮುಂದಾಗಿದ್ದಾರೆ. ರಾಜಧಾನಿಯ ಸೌಂದರ್ಯಕ್ಕೆ ಧಕ್ಕೆ ತರುತ್ತಿರುವ ಕಸ ಹಾಗೂ ಕಟ್ಟಡ ಅವಶೇಷಗಳ (ಡೆಬ್ರಿಸ್) ಸಮಸ್ಯೆಯನ್ನು ಶಾಶ್ವತವಾಗಿ ನಿವಾರಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ.
ಇತ್ತೀಚೆಗೆ ಜಿಬಿಎ (GBA) ಕಚೇರಿಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಪಾಲ್ಗೊಂಡಿದ್ದ ಸಚಿವರು, ನಗರದ ಸ್ವಚ್ಛತಾ ಕಾರ್ಯಗಳ ಕುರಿತು ಗಂಭೀರ ಪರಾಮರ್ಶೆ ನಡೆಸಿದರು. ಈ ವೇಳೆ ಅಧಿಕಾರಿಗಳ ನಿರಾಸಕ್ತಿಗೆ ತರಾಟೆಗೆ ತೆಗೆದುಕೊಂಡ ಅವರು, ರಸ್ತೆ ಬದಿಗಳಲ್ಲಿ ಕಸ ಬೀಳದಂತೆ ನೋಡಿಕೊಳ್ಳುವುದು ಮತ್ತು ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿಡುವುದು ನಿಮ್ಮ ಮೊದಲ ಆದ್ಯತೆಯಾಗಬೇಕು ಎಂದು ಖಡಕ್ ಸೂಚನೆ ನೀಡಿದರು.
ನಗರದ ಪ್ರಮುಖ ರಸ್ತೆಗಳು, ಫುಟ್‌ಪಾತ್‌ಗಳು ಹಾಗೂ ಖಾಲಿ ಸೈಟುಗಳಲ್ಲಿ ಬಿದ್ದಿರುವ ಕಸ ಹಾಗೂ ಕಟ್ಟಡ ನಿರ್ಮಾಣದ ತ್ಯಾಜ್ಯಗಳನ್ನು ತಕ್ಷಣವೇ ತೆರವುಗೊಳಿಸಬೇಕು ಎಂದು ಸಚಿವರು ಆದೇಶಿಸಿದ್ದಾರೆ. ರಸ್ತೆ ಬದಿಗಳಲ್ಲಿ ರಾಶಿ ಬಿದ್ದಿರುವ ಕಸ ನಗರದ ಅಂದಗೆಡಿಸುತ್ತಿರುವುದಲ್ಲದೆ, ಸಾರ್ವಜನಿಕರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿದೆ. ಆದ್ದರಿಂದ ವಿಳಂಬ ಮಾಡದೆ ಜೆಸಿಬಿ ಮತ್ತು ಲಾರಿಗಳ ಮೂಲಕ ಇವುಗಳನ್ನು ನಿಗದಿತ ಸ್ಥಳಗಳಿಗೆ ಸಾಗಿಸಬೇಕು ಎಂದು ಅವರು ಅಧಿಕಾರಿಗಳಿಗೆ ಗಡುವು ನೀಡಿದ್ದಾರೆ.
ಇನ್ಮುಂದೆ ಯಾರು ಬೇಕಾದರೂ ಎಲ್ಲೆಂದರಲ್ಲಿ ಕಸ ಸುರಿದು ಹೋಗುವಂತಿಲ್ಲ. ಸಾರ್ವಜನಿಕ ಸ್ಥಳಗಳು, ರಸ್ತೆ ಬದಿ ಅಥವಾ ರಾಜಕಾಲುವೆಗಳ ಬಳಿ ಕಸ ಹಾಗೂ ತ್ಯಾಜ್ಯವನ್ನು ಎಸೆಯುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಎಚ್ಚರಿಸಿದ್ದಾರೆ. ನಿಯಮ ಉಲ್ಲಂಘಿಸುವವರಿಗೆ ಭಾರಿ ಮೊತ್ತದ ದಂಡ ವಿಧಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಬ್ಲ್ಯಾಕ್ ಸ್ಪಾಟ್‌ಗಳ (ಕಸದ ರಾಶಿ ಬೀಳುವ ಜಾಗ) ಮೇಲೆ ನಿರಂತರ ನಿಗಾ ಇಡಲು ಸಭೆಯಲ್ಲಿ ಸೂಚಿಸಲಾಗಿದೆ.
ಈ ಬಾರಿ ಸಚಿವರು ಕೇವಲ ದಂಡ ವಿಧಿಸುವುದಕ್ಕೆ ಮಾತ್ರ ಸೀಮಿತವಾಗದೆ, ಒಂದು ಹೊಸ ಮತ್ತು ವಿಭಿನ್ನ ನಿಯಮವನ್ನು ಜಾರಿಗೆ ತರಲು ಸೂಚಿಸಿದ್ದಾರೆ. ಯಾರಾದರೂ ಸಾರ್ವಜನಿಕ ಸ್ಥಳದಲ್ಲಿ ಕಸ ಅಥವಾ ಕಟ್ಟಡದ ಅವಶೇಷಗಳನ್ನು ತಂದು ಸುರಿದರೆ, ಕೇವಲ ದಂಡ ಕಟ್ಟಿಸಿಕೊಳ್ಳುವುದಲ್ಲದೆ, ಅವರ ಕೈಯಿಂದಲೇ ಆ ಕಸವನ್ನು ಸಂಪೂರ್ಣವಾಗಿ ತೆರವುಗೊಳಿಸಲಾಗುವುದು. ಈ ಮೂಲಕ ತಪ್ಪು ಮಾಡುವವರಿಗೆ ತಕ್ಕ ಪಾಠ ಕಲಿಸಲು ಕೃಷ್ಣ ಭೈರೇಗೌಡ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ.
“ಸ್ವಚ್ಛ ಬೆಂಗಳೂರು ನಮ್ಮೆಲ್ಲರ ಜವಾಬ್ದಾರಿ” ಸ್ವಚ್ಛತೆ ಎಂಬುದು ಕೇವಲ ಸರ್ಕಾರದ ಕೆಲಸವಲ್ಲ, ಇದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಸಾರ್ವಜನಿಕರು ಸಹ ನಗರವನ್ನು ಸ್ವಚ್ಛವಾಗಿಡಲು ಕೈಜೋಡಿಸಬೇಕು. ಅಧಿಕಾರಿಗಳು ತಳಮಟ್ಟದಲ್ಲಿ ಕೆಲಸ ಮಾಡಿ, ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಸಚಿವರು ಸಭೆಯ ಸಮಾರೋಪದಲ್ಲಿ ತಿಳಿಸಿದರು.








