ಬೆಂಗಳೂರು: ರಾಜ್ಯ ಸರ್ಕಾರದ ಕಂದಾಯ ಇಲಾಖೆಯ ಅಟಲ್ಜೀ ಜನಸ್ನೇಹಿ ನಿರ್ದೇಶನಾಲಯದ ಅಡಿಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಕನಿಷ್ಠ ವೇತನ ಹಾಗೂ ಇತರ ಸೌಲಭ್ಯಗಳನ್ನು ನಿಯಮಾನುಸಾರ ಒದಗಿಸುವಂತೆ ಸರ್ಕಾರವು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಮಹತ್ವದ ಕಡ್ಡಾಯ ನಿರ್ದೇಶನ ನೀಡಿದೆ.
ಅಟಲ್ಜೀ ಜನಸ್ನೇಹಿ ನಿರ್ದೇಶನಾಲಯದ ನಿರ್ದೇಶಕರಾದ ಮಠದ್ ಶಿವಮೂರ್ತಿ ದಿವಾಕರ ಅವರು ಜೂನ್ 16, 2026 ರಂದು ಈ ಕುರಿತು ಅಧಿಕೃತ ಆದೇಶ ಹೊರಡಿಸಿದ್ದು, ಹೊರಗುತ್ತಿಗೆ ನೌಕರರ ಹಿತರಕ್ಷಣೆಗಾಗಿ ಪ್ರಮುಖ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದ್ದಾರೆ.
ಕಾರ್ಮಿಕ ಇಲಾಖೆಯ ಅಧಿಸೂಚನೆ ಸಂಖ್ಯೆ KAE 106 LWA 2021 (ದಿನಾಂಕ: 28.07.2022) ಪ್ರಕಾರ, ದಿನಾಂಕ 01-04-2026 ರಿಂದ 31-03-2027 ರ ಅವಧಿಗೆ ನಿಗದಿಪಡಿಸಲಾದ ಕನಿಷ್ಠ ವೇತನ ದರಗಳಂತೆಯೇ ಹೊರಗುತ್ತಿಗೆ ಸಿಬ್ಬಂದಿಗಳಿಗೆ ವೇತನ ಪಾವತಿಸಲು ನಿಯಮಾನುಸಾರ ಕ್ರಮ ಕೈಗೊಳ್ಳಬೇಕು.
ದಾಖಲೆಗಳ ಪರಿಶೀಲನೆ: ಹೊರಗುತ್ತಿಗೆ ಪೂರೈಸುವ ಸಂಸ್ಥೆಗಳು (Agencies) ನೌಕರರಿಗೆ ನೇಮಕಾತಿ ಆದೇಶ ಪತ್ರ, ಗುರುತಿನ ಚೀಟಿ ಹಾಗೂ ವೇತನ ಪ್ರಮಾಣ ಪತ್ರವನ್ನು ನೀಡಿರುವುದನ್ನು ಖಚಿತಪಡಿಸಿಕೊಂಡ ನಂತರವೇ ವೇತನದ ಅನುದಾನವನ್ನು ಬಿಡುಗಡೆ ಮಾಡಬೇಕು. ಪ್ರತಿ ತಿಂಗಳು 5ರೊಳಗೆ ವೇತನ: ನೌಕರರ ಆರ್ಥಿಕ ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು, ಹೊರಗುತ್ತಿಗೆ ಏಜೆನ್ಸಿಗಳು ಪ್ರತಿ ತಿಂಗಳ 5ನೇ ತಾರೀಖಿನ ಒಳಗಾಗಿ ಸಿಬ್ಬಂದಿಗಳಿಗೆ ವೇತನ ಪಾವತಿಸುವಂತೆ ಸೂಕ್ತ ಕ್ರಮ ವಹಿಸಬೇಕು.
ಇ.ಎಸ್.ಐ ಮತ್ತು ಪಿ.ಎಫ್ ಕಡ್ಡಾಯ: ಹೊರಗುತ್ತಿಗೆ ಸಂಸ್ಥೆಯು ಪ್ರತಿ ತಿಂಗಳು ನೌಕರರ ಇ.ಎಸ್.ಐ (ESI) ಮತ್ತು ಪಿ.ಎಫ್ (PF) ಹಣವನ್ನು ಸಮರ್ಪಕವಾಗಿ ಪಾವತಿಸುತ್ತಿದೆಯೇ ಎಂಬುದನ್ನು ಕಡ್ಡಾಯವಾಗಿ ಖಚಿತಪಡಿಸಿಕೊಂಡು, ಆ ಬಳಿಕವೇ ಮುಂದಿನ ವೇತನದ ಅನುದಾನ ಬಿಡುಗಡೆ ಮಾಡಲು ಸೂಚಿಸಲಾಗಿದೆ.
ಕಂದಾಯ ಇಲಾಖೆಯ ಈ ನಿರ್ಣಾಯಕ ಆದೇಶದಿಂದಾಗಿ ಸಕಾಲಕ್ಕೆ ವೇತನ ಸಿಗದೆ ಹಾಗೂ ಪಿಎಫ್-ಇಎಸ್ಐ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದ ಸಾವಿರಾರು ಹೊರಗುತ್ತಿಗೆ ನೌಕರರಿಗೆ ದೊಡ್ಡ ನಿರಾಳತೆ ಸಿಕ್ಕಂತಾಗಿದೆ. ನಿಯಮ ಉಲ್ಲಂಘಿಸುವ ಏಜೆನ್ಸಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಈ ಆದೇಶವು ಜಿಲ್ಲಾಡಳಿತಗಳಿಗೆ ಸ್ಪಷ್ಟ ದಾರಿ ಮಾಡಿಕೊಟ್ಟಿದೆ.








