ರೈತರಿಗೆ ಕೇಂದ್ರ ಸರ್ಕಾರವು ಸೂಪರ್ ನ್ಯೂಸ್ ನೀಡಿದೆ. ರೈತರಿಗೆ ನೀಡಲಾಗುವ ಬಹುನಿರೀಕ್ಷಿತ ಪಿಎಂ ಕಿಸಾನ್ (PM-Kisan) ಯೋಜನೆಯ ಹಣವನ್ನು ಜೂನ್ 20 ರಂದು ಬಿಡುಗಡೆ ಮಾಡಲಾಗುತ್ತಿದೆ. 2026-27ರ ಹಣಕಾಸು ವರ್ಷದ ಮೊದಲ ಕಂತಿನ ಹಣವನ್ನು ಶನಿವಾರದಂದು ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುತ್ತದೆ.
ಈ ಹಿಂದೆ 22ನೇ ಕಂತಿನ ಹಣವನ್ನು ಅಸ್ಸಾಂನಿಂದ ಪ್ರಧಾನಿ ನರೇಂದ್ರ ಮೋದಿ ಅವರು ಬಿಡುಗಡೆ ಮಾಡಿದ್ದರು. ಈಗ 23ನೇ ಕಂತಿನ ಹಣವನ್ನು ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ತಾರಕೇಶ್ವರ್ನಿಂದ ರಿಲೀಸ್ ಮಾಡಲಿದ್ದಾರೆ. ಈ ಯೋಜನೆಯಡಿ ದೇಶದ ಸುಮಾರು 9.44 ಕೋಟಿ ರೈತರ ಖಾತೆಗಳಿಗೆ ಒಟ್ಟು 18,880 ಕೋಟಿ ರೂಪಾಯಿ ಜಮೆಯಾಗಲಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಒಂದು ಪ್ರಮುಖ ಪ್ರಕಟಣೆ ಹೊರಡಿಸಿದ್ದು, ಪಿಎಂ ಕಿಸಾನ್ ಹಣವನ್ನು ಪಡೆಯಲು ಫಲಾನುಭವಿಗಳು ಇ-ಕೆವೈಸಿ (e-KYC) ಮಾಡಿಸುವುದು ಕಡ್ಡಾಯ ಎಂದು ತಿಳಿಸಿದೆ.
ಒಟಿಪಿ (OTP) ಕಡ್ಡಾಯ
ಪಿಎಂ ಕಿಸಾನ್ ಪೋರ್ಟಲ್ ಮೂಲಕ ಒಟಿಪಿ ಆಧಾರಿತ ಇ-ಕೆವೈಸಿ ಮಾಡಿಕೊಳ್ಳಬಹುದು ಎಂದು ಕೇಂದ್ರ ತಿಳಿಸಿದೆ. ಬಯೋಮೆಟ್ರಿಕ್ ಆಧಾರಿತ ಕೆವೈಸಿಗಾಗಿ ರೈತರು ಹತ್ತಿರದ ಸಾಮಾನ್ಯ ಸೇವಾ ಕೇಂದ್ರಗಳನ್ನು (CSC) ಸಂಪರ್ಕಿಸಬಹುದು. ಪಿಎಂ ಕಿಸಾನ್ ಮಾರ್ಗಸೂಚಿಗಳ ಪ್ರಕಾರ ಕೆಲವು ಅನುಮಾನಾಸ್ಪದ ಪ್ರಕರಣಗಳನ್ನು ಇಲಾಖೆ ಗುರುತಿಸಿದ್ದು, ಅಂತಹವರನ್ನು ಫಲಾನುಭವಿಗಳ ಪಟ್ಟಿಯಿಂದ ತೆಗೆದುಹಾಕಲಾಗಿದೆ. ಫೆಬ್ರವರಿ 1, 2019 ರ ನಂತರ ಭೂಮಿಯ ಮಾಲೀಕತ್ವ ಪಡೆದ ರೈತರು ಮತ್ತು ಕುಟುಂಬದಲ್ಲಿ ಒಂದಕ್ಕಿಂತ ಹೆಚ್ಚು ಜನರು ಈ ಯೋಜನೆಯ ಲಾಭ ಪಡೆಯುತ್ತಿದ್ದರೆ, ಭೌತಿಕ ಪರಿಶೀಲನೆ ಪೂರ್ಣಗೊಳ್ಳುವವರೆಗೆ ಅವರ ಹಣವನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ. ರೈತರು ಹೆಚ್ಚಿನ ವಿವರಗಳಿಗಾಗಿ ಪಿಎಂ ಕಿಸಾನ್ ವೆಬ್ಸೈಟ್ ಅಥವಾ ಮೊಬೈಲ್ ಆಪ್ನಲ್ಲಿರುವ ‘ನೋ ಯುವರ್ ಸ್ಟೇಟಸ್’ (Know Your Status) ಅಥವಾ ಕಿಸಾನ್ ಇ-ಮಿತ್ರ ಚಾಟ್ಬಾಟ್ ಮೂಲಕ ತಮ್ಮ ಅರ್ಹತೆಯನ್ನು ಪರಿಶೀಲಿಸಿಕೊಳ್ಳಬಹುದು.
ನಿಮಗೆ ಹಣ ಬರುತ್ತಾ..? ಇಲ್ವಾ..? ಹೀಗೆ ಚೆಕ್ ಮಾಡಿ:
ಪಿಎಂ ಕಿಸಾನ್ ಅಧಿಕೃತ ವೆಬ್ಸೈಟ್ https://pmkisan.gov.in/ ಓಪನ್ ಮಾಡಿ.
ಹೋಮ್ ಪೇಜ್ನಲ್ಲಿ ಕೆಳಗಡೆ ಇರುವ ‘ಫಲಾನುಭವಿಗಳ ಪಟ್ಟಿ’ (Beneficiary List) ಆಪ್ಷನ್ ಆಯ್ಕೆ ಮಾಡಿ.
ನಿಮ್ಮ ರಾಜ್ಯ, ಜಿಲ್ಲೆ, ಉಪಜಿಲ್ಲೆ, ಬ್ಲಾಕ್ ಮತ್ತು ಗ್ರಾಮದ ವಿವರಗಳನ್ನು ನಮೂದಿಸಿ.
ನಂತರ ‘ಗೆಟ್ ರಿಪೋರ್ಟ್’ (Get Report) ಮೇಲೆ ಕ್ಲಿಕ್ ಮಾಡಿ.
ಈಗ ನಿಮ್ಮ ಗ್ರಾಮ ಪಂಚಾಯತಿಗೆ ಸಂಬಂಧಿಸಿದ ಫಲಾನುಭವಿಗಳ ಪಟ್ಟಿ ಕಾಣಸಿಗುತ್ತದೆ.
ಆ ಪಟ್ಟಿಯಲ್ಲಿ ನಿಮ್ಮ ಹೆಸರಿದ್ದು, ಕೆವೈಸಿ ಪೂರ್ಣಗೊಂಡಿದ್ದರೆ ನಿಮಗೆ ಖಂಡಿತವಾಗಿ ಹಣ ಸಿಗುತ್ತದೆ.
ಗಮನಿಸಿ: ನಾಳೆ ಪ್ರಧಾನಿ ಮೋದಿ ಅವರು ಹಣ ಬಿಡುಗಡೆ ಮಾಡುತ್ತಿರುವುದರಿಂದ, ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಅಥವಾ ಇಲ್ಲವೇ ಎಂಬುದನ್ನು ಒಮ್ಮೆ ಪರಿಶೀಲಿಸಿಕೊಳ್ಳಿ. ಒಂದು ವೇಳೆ ಹೆಸರಿಲ್ಲದಿದ್ದರೆ ಸ್ಥಳೀಯ ಅಧಿಕಾರಿಗಳನ್ನು ಸಂಪರ್ಕಿಸಿ ವಿವರಗಳನ್ನು ಪಡೆಯಿರಿ ಅಥವಾ ಪಿಎಂ ಕಿಸಾನ್ ವೆಬ್ಸೈಟ್ ಮೂಲಕ ಕುಂದುಕೊರತೆ ಸೆಲ್ (Grievance Cell) ಗೆ ದೂರು ಸಲ್ಲಿಸಬಹುದು.








