ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ‘ಗೃಹಲಕ್ಷ್ಮಿ’ ಯೋಜನೆಗೆ ಮರು ಅರ್ಜಿ ಸಲ್ಲಿಸುವಂತೆ ಸರ್ಕಾರ ಸೂಚನೆ ಬೆನ್ನಲ್ಲೇ, ರಾಜ್ಯಾದ್ಯಂತ ಫಲಾನುಭವಿಗಳಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ. ಚಿತ್ರದುರ್ಗ, ಹುಬ್ಬಳ್ಳಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಹಿಳೆಯರು ಸರ್ಕಾರದ ಈ ನಿರ್ಧಾರದ ವಿರುದ್ಧ ಬೀದಿಗಿಳಿದು ಅಸಮಾಧಾನ ಹೊರಹಾಕುತ್ತಿದ್ದಾರೆ.
ಗೊಂದಲ ಮೂಡಿಸಿದ ಸರ್ಕಾರದ ಹೊಸ ಆದೇಶ
ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ನೀಡಿದ್ದ ಪ್ರಮುಖ ಭರವಸೆಗಳಲ್ಲಿ ಗೃಹಲಕ್ಷ್ಮಿ ಯೋಜನೆಯೂ ಒಂದಾಗಿತ್ತು. ಆದರೆ, ಈಗ ತಾಂತ್ರಿಕ ಕಾರಣಗಳು ಹಾಗೂ ನಿಯಮಗಳ ಬದಲಾವಣೆಯ ನೆಪವೊಡ್ಡಿ ಫಲಾನುಭವಿಗಳಿಗೆ ಮತ್ತೆ ಮರು ಅರ್ಜಿ ಸಲ್ಲಿಸಲು ಸೂಚಿಸಿರುವುದು ಸಾರ್ವಜನಿಕರಲ್ಲಿ ತೀವ್ರ ಗೊಂದಲ ಮೂಡಿಸಿದೆ. ಈಗಾಗಲೇ ಲಕ್ಷಾಂತರ ಮಹಿಳೆಯರು ಯೋಜನೆಯಡಿ ನೋಂದಾಯಿಸಿಕೊಂಡು ಸೌಲಭ್ಯ ಪಡೆಯುತ್ತಿರುವಾಗ, ಈ ಹಂತದಲ್ಲಿ ಮರು ಅರ್ಜಿಯ ಅಗತ್ಯವೇನಿತ್ತು ಎಂದು ಮಹಿಳೆಯರು ಪ್ರಶ್ನಿಸುತ್ತಿದ್ದಾರೆ.
ತಿಂಗಳ ಹಣ ಬಾಕಿ: ಸಮರ್ಪಕವಾಗಿ ಜಾರಿಯಾಗದ ಯೋಜನೆ
“ಸರ್ಕಾರ ಅಧಿಕಾರಕ್ಕೆ ಬರುವಾಗ ಕೊಟ್ಟ ಅಶ್ವಾಸನೆಯನ್ನು ಸಮರ್ಪಕವಾಗಿ ಈಡೇರಿಸುತ್ತಿಲ್ಲ” ಎಂದು ಫಲಾನುಭವಿಗಳು ನೇರವಾಗಿಯೇ ಕಿಡಿಕಾರಿದ್ದಾರೆ. ಯೋಜನೆ ಆರಂಭವಾದಾಗಿನಿಂದಲೂ ಹಣ ಪಾವತಿಯಲ್ಲಿ ಸುವ್ಯವಸ್ಥೆ ಇಲ್ಲದಂತಾಗಿದೆ. ಒಂದು ತಿಂಗಳು ಗೃಹಲಕ್ಷ್ಮಿ ಯೋಜನೆಯ 2,000 ರೂಪಾಯಿ ಹಣ ಖಾತೆಗೆ ಬಂದರೆ, ಮುಂದಿನ ಎರಡು ತಿಂಗಳ ಹಣ ಬಾಕಿ ಉಳಿಸಿಕೊಳ್ಳಲಾಗುತ್ತಿದೆ. ಈ ರೀತಿಯ ಅನಗತ್ಯ ವಿಳಂಬ ಮತ್ತು ಖಾತೆಗೆ ಹಣ ಜಮೆಯಾಗದ ಗೊಂದಲಗಳ ನಡುವೆ, ಈಗ ಮತ್ತೆ ಮರು ಅರ್ಜಿ ಕರೆಯುತ್ತಿರುವುದು ಜನಸಾಮಾನ್ಯರ ಆಕ್ರೋಶಕ್ಕೆ ತುಪ್ಪ ಸುರಿದಂತಾಗಿದೆ.
ಕ್ಯೂನಲ್ಲಿ ನಿಲ್ಲುವ ಸಾಹಸ: ವೃದ್ಧೆಯರು, ಕೂಲಿಕಾರ್ಮಿಕರ ಅಳಲು
ಮರು ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಗ್ರಾಮೀಣ ಭಾಗದ ಮತ್ತು ಬಡ ಮಹಿಳೆಯರಿಗೆ ದೊಡ್ಡ ಶಾಪವಾಗಿ ಪರಿಣಮಿಸಿದೆ. ವಯಸ್ಸಾದ ವೃದ್ಧೆಯರು, ದಿನವಿಡೀ ದುಡಿದು ಹೊಟ್ಟೆ ಹೊರಕೊಳ್ಳುವ ಕೂಲಿಕಾರ್ಮಿಕ ಮಹಿಳೆಯರು ತಮ್ಮ ಕೆಲಸ-ಕಾರ್ಯಗಳನ್ನು ಬಿಟ್ಟು ಸೈಬರ್ ಕೇಂದ್ರಗಳು ಹಾಗೂ ಸರ್ಕಾರಿ ಕಚೇರಿಗಳ ಮುಂದೆ ಗಂಟೆಗಟ್ಟಲೆ ಸರದಿ ಸಾಲಿನಲ್ಲಿ (ಕ್ಯೂ) ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಬಿಸಿಲಿನಲ್ಲಿ ನಿಂತು ಅರ್ಜಿ ಸಲ್ಲಿಸುವುದು ತಮಗೆ ದೊಡ್ಡ ಸಾಹಸದ ಕೆಲಸವಾಗಿದ್ದು, ಸರ್ಕಾರಕ್ಕೆ ಕನಿಷ್ಠ ಮಾನವೀಯತೆಯೂ ಇಲ್ಲವೇ ಎಂದು ಮಹಿಳೆಯರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
“ನಡೆಸಲು ಸಾಧ್ಯವಾಗದಿದ್ದರೆ ಸಂಪೂರ್ಣ ಸ್ಥಗಿತಗೊಳಿಸಿ”
ಸರ್ಕಾರದ ಈ ನಾಮಕಾವಸ್ಥೆ ನಿರ್ವಹಣೆಗೆ ಬೇಸತ್ತಿರುವ ಮಹಿಳಾ ಫಲಾನುಭವಿಗಳು ತೀಕ್ಷ್ಣವಾದ ಎಚ್ಚರಿಕೆಯನ್ನು ನೀಡಿದ್ದಾರೆ. “ಗೃಹಲಕ್ಷ್ಮಿ ಯೋಜನೆಯನ್ನು ಮೊದಲಿನಂತೆ ಯಥಾಸ್ಥಿತಿಯಲ್ಲಿ ಮುಂದುವರೆಸಿಕೊಂಡು ಹೋಗಬೇಕು. ಒಂದು ವೇಳೆ ಆರ್ಥಿಕ ಕೊರತೆಯಿಂದ ಸರ್ಕಾರಕ್ಕೆ ಈ ಯೋಜನೆಯನ್ನು ಯಶಸ್ವಿಯಾಗಿ ನಡೆಸಲು ಸಾಧ್ಯವಾಗದಿದ್ದರೆ, ಇದನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಿ. ಅದನ್ನು ಬಿಟ್ಟು, ಜನರನ್ನು ಅಲೆದಾಡಿಸುವ ಇಂತಹ ನಾಮಕಾವಸ್ಥೆ ನಾಟಕಗಳನ್ನು ನಿಲ್ಲಿಸಲಿ” ಎಂದು ಫಲಾನುಭವಿ ಮಹಿಳೆಯರು ಆಕ್ರೋಶದ ನುಡಿಗಳನ್ನಾಡಿದ್ದಾರೆ.








