ಬೆಂಗಳೂರು: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹಾಗೂ ಮಾಗಡಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಚ್.ಸಿ. ಬಾಲಕೃಷ್ಣ ನಡುವಿನ ರಾಜಕೀಯ ವಾಕ್ಸಮರ ಈಗ ದೇವಸ್ಥಾನದಲ್ಲಿ ಪ್ರಮಾಣ ಮಾಡುವ ಹಂತಕ್ಕೆ ಬಂದು ತಲುಪಿದೆ. ಜಮೀನು ಸ್ವಾಧೀನ ಮತ್ತು ರೈತರಿಗೆ ನೀಡುವ ಪರಿಹಾರದ ವಿಚಾರವಾಗಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಶಾಸಕ ಬಾಲಕೃಷ್ಣ ನೇರ ಸವಾಲು ಹಾಕಿದ್ದು, ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದೆ.
2018ರಲ್ಲಿ ರೈತರ ಪರವಾಗಿ ಜಮೀನು ಬಿಟ್ಟುಕೊಡಲು ತಾವು ಒಪ್ಪಿಕೊಂಡಿದ್ದಾಗಿ ಕುಮಾರಸ್ವಾಮಿ ಹೇಳುತ್ತಿರುವುದು ಸುಳ್ಳು ಎಂದು ಬಾಲಕೃಷ್ಣ ಆರೋಪಿಸಿದ್ದಾರೆ. ಒಂದು ವೇಳೆ ತಾವು ಹೇಳುತ್ತಿರುವುದು ಸತ್ಯವೇ ಆಗಿದ್ದರೆ, ಎಚ್.ಡಿ. ಕುಮಾರಸ್ವಾಮಿ ಅವರು ಮೈಸೂರಿನ ಚಾಮುಂಡೇಶ್ವರಿ ತಾಯಿಯ ಮೇಲೆ ಬಂದು ಪ್ರಮಾಣ ಮಾಡಲಿ ಎಂದು ಸವಾಲು ಎಸೆದಿದ್ದಾರೆ. ಇದಕ್ಕೆ ಪ್ರತಿಯಾಗಿ ತಾವು ಕೂಡ ಕೋಡಿಹಳ್ಳಿಯ ಪ್ರಸಿದ್ಧ ಅಜ್ಜಯ್ಯನ (ರಂಗನಾಥ ಸ್ವಾಮಿ) ಸನ್ನಿಧಿಯಲ್ಲಿ ಪ್ರಮಾಣ ಮಾಡಲು ಸಿದ್ಧವಿರುವುದಾಗಿ ಅವರು ಘೋಷಿಸಿದ್ದಾರೆ.
ಈ ವಿವಾದಕ್ಕೆ ಪುಷ್ಟಿ ನೀಡುವಂತೆ ಶಾಸಕ ಬಾಲಕೃಷ್ಣ ಅವರು ಎಚ್.ಡಿ. ಕುಮಾರಸ್ವಾಮಿ ಅವರ ವಿಡಿಯೋ ಒಂದನ್ನು ಮಾಧ್ಯಮಗಳ ಮುಂದೆ ಬಿಡುಗಡೆ ಮಾಡಿದ್ದಾರೆ. ಕುಮಾರಸ್ವಾಮಿ ಅವರು ಕೇಂದ್ರ ಸಚಿವರಾದ ಬಳಿಕ ವಿಡಿಯೋ ಕಾಲ್ನಲ್ಲಿ ಮಾತನಾಡಿದ ದೃಶ್ಯಾವಳಿ ಇದಾಗಿದ್ದು, ಅದರಲ್ಲಿ ಅವರು ಜಮೀನು ವಿಚಾರವಾಗಿ ಪ್ರಸ್ತಾಪ ಮಾಡಿರುವುದು ಬಹಿರಂಗವಾಗಿದೆ. ಈ ವಿಡಿಯೋ ಈಗ ರಾಜಕೀಯ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ.
ಬಿಡುಗಡೆಯಾಗಿರುವ ವಿಡಿಯೋದಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರು, “ನಮ್ಮ ಜನಗಳಿಗೆ ನ್ಯಾಯುತವಾಗಿ ಜಾಗ ಸಿಗಬೇಕು ಎನ್ನುವ ಉದ್ದೇಶವನ್ನು ನಾನು ಹೊಂದಿದ್ದೆ. ಇದೇ ವಿಚಾರವನ್ನು ಇಟ್ಟುಕೊಂಡು ಅಭಿವೃದ್ಧಿಪಡಿಸಿದ ಪ್ರದೇಶದಲ್ಲಿ (ಡೆವಲಪ್ಡ್ ಏರಿಯಾ) ರೈತರಿಗೆ ಶೇಕಡಾ 40 ರಷ್ಟು ಜಾಗವನ್ನು ನೀಡಬೇಕು ಎಂದು ನಾನು ಅಂದು ತೀರ್ಮಾನ ಮಾಡಿದ್ದೆ” ಎಂದು ಹೇಳಿರುವುದು ದಾಖಲಾಗಿದೆ. ಈ ಹಿಂದೆ ಸಚಿವರಾಗಿದ್ದ ಅವಧಿಯಲ್ಲಿ ಕೈಗೊಂಡಿದ್ದ ನಿರ್ಧಾರವನ್ನು ಅವರು ಈ ವಿಡಿಯೋದಲ್ಲಿ ಸಮರ್ಥಿಸಿಕೊಂಡಿದ್ದಾರೆ.
ಕೇಂದ್ರ ಮಂತ್ರಿಯಾದ ಬಳಿಕ ಕುಮಾರಸ್ವಾಮಿ ಅವರು ತಮ್ಮ ನಿಲುವನ್ನು ಬದಲಾಯಿಸಿದ್ದಾರೆ ಅಥವಾ ಈ ಹಿಂದೆ ನಡೆದಿದ್ದ ವಿಚಾರಗಳನ್ನು ಈಗ ಬೇರೆ ರೀತಿಯಲ್ಲಿ ಬಿಂಬಿಸುತ್ತಿದ್ದಾರೆ ಎಂಬುದು ಕಾಂಗ್ರೆಸ್ ಶಾಸಕರ ವಾದವಾಗಿದೆ. ರೈತರ ಹಿತರಕ್ಷಣೆಯ ಹೆಸರಿನಲ್ಲಿ ಕುಮಾರಸ್ವಾಮಿ ಅವರು ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿರುವ ಬಾಲಕೃಷ್ಣ, ಸತ್ಯಾಸತ್ಯತೆ ತಿಳಿಯಲು ಧಾರ್ಮಿಕ ಶ್ರದ್ಧಾಕೇಂದ್ರಗಳಲ್ಲಿ ಆಣೆ-ಪ್ರಮಾಣ ಮಾಡುವುದೊಂದೇ ದಾರಿ ಎಂದು ಪಟ್ಟು ಹಿಡಿದಿದ್ದಾರೆ.








