ಕೆಲವೊಮ್ಮೆ ನಾವು ಯಾವುದೋ ಒಂದು ಜಾಗಕ್ಕೆ ಹೋದ ತಕ್ಷಣ ನಮ್ಮ ಮನಸ್ಸು ಪ್ರಫುಲ್ಲಗೊಳ್ಳುತ್ತದೆ, ಇನ್ನು ಕೆಲವು ಕಡೆ ಹೋದರೆ ಕಿರಿಕಿರಿ ಅಥವಾ ಆಯಾಸವಾಗುತ್ತದೆ. ಉದಾಹರಣೆಗೆ, ಸಮುದ್ರ ತೀರದಲ್ಲಿ ನಡೆಯುವಾಗ ಸಿಗುವ ನೆಮ್ಮದಿ, ಶಾಪಿಂಗ್ ಮಾಲ್ಗಳ ಗಿಜಿಗುಡುವ ವಾತಾವರಣದಲ್ಲಿ ಸಿಗುವುದಿಲ್ಲ. ಹಳೆಯ ಶಾಲೆಗೆ ಭೇಟಿ ನೀಡಿದಾಗ ಬಾಲ್ಯದ ನೆನಪುಗಳು ಮರುಕಳಿಸುತ್ತವೆ. ಈ ಬದಲಾವಣೆಗಳು ಎಷ್ಟು ವೇಗವಾಗಿ ನಡೆಯುತ್ತವೆ ಎಂದರೆ, ಅದರ ಹಿಂದಿನ ಕಾರಣಗಳನ್ನು ನಾವು ಗಮನಿಸುವುದೇ ಇಲ್ಲ.
ಮನುಷ್ಯನ ಮನಸ್ಥಿತಿ ಮತ್ತು ನಡವಳಿಕೆಯ ಮೇಲೆ ಸುತ್ತಮುತ್ತಲಿನ ಪರಿಸರ ಹೇಗೆ ಪ್ರಭಾವ ಬೀರುತ್ತದೆ ಎಂಬುದರ ಕುರಿತು ಮನೋವಿಜ್ಞಾನ ಹಾಗೂ ನರವಿಜ್ಞಾನ (Neuroscience) ತಜ್ಞರು ಹಲವು ದಶಕಗಳಿಂದ ಸಂಶೋಧನೆ ನಡೆಸುತ್ತಿದ್ದಾರೆ. ಅವರ ಪ್ರಕಾರ, ಸ್ಥಳಗಳೊಂದಿಗೆ ನಮಗಿರುವ ಭಾವನಾತ್ಮಕ ಸಂಬಂಧಕ್ಕೆ ನಮ್ಮ ಜೈವಿಕ ರಚನೆ (Biology) ಮತ್ತು ವೈಯಕ್ತಿಕ ಅನುಭವಗಳು ಮುಖ್ಯ ಕಾರಣಗಳಾಗಿವೆ.
ಇದರ ಹಿಂದಿರುವ ಪ್ರಮುಖ 5 ಕಾರಣಗಳು ಇಲ್ಲಿವೆ:
1. ಪರಿಸರವನ್ನು ಸದಾ ಗಮನಿಸುತ್ತಿರುತ್ತದೆ ನಮ್ಮ ಮೆದುಳು
ಮಾನವನ ಮೆದುಳು ತನ್ನ ಸುತ್ತಲಿನ ವಾತಾವರಣವು ಸುರಕ್ಷಿತವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ನಿರಂತರವಾಗಿ ಪರಿಶೀಲಿಸುತ್ತಿರುತ್ತದೆ. ಇದು ನಮಗೆ ತಿಳಿಯದಂತೆ ಸುಪ್ತಾವಸ್ಥೆಯಲ್ಲೇ ನಡೆದುಹೋಗುತ್ತದೆ. ಪ್ರಕಾಶಮಾನವಾದ ನೈಸರ್ಗಿಕ ಬೆಳಕು ಸುರಕ್ಷತೆಯ ಭಾವನೆ ನೀಡಿದರೆ, ಕತ್ತಲೆಯಾದ ಅಥವಾ ಕಿರಿದಾದ ಜಾಗಗಳು ಆತಂಕವನ್ನು ಉಂಟುಮಾಡಬಹುದು. ಯಾವುದೇ ಒಂದು ಜಾಗಕ್ಕೆ ಕಾಲಿಟ್ಟ ಕೆಲವೇ ಕ್ಷಣಗಳಲ್ಲಿ ಮೆದುಳು ನಮ್ಮ ದೇಹದ ಒತ್ತಡದ ಹಾರ್ಮೋನ್ಗಳು ಮತ್ತು ಹೃದಯ ಬಡಿತವನ್ನು ಆ ಪರಿಸರಕ್ಕೆ ತಕ್ಕಂತೆ ಬದಲಾಯಿಸಲು ಪ್ರಾರಂಭಿಸುತ್ತದೆ.
2. ನೆನಪುಗಳ ‘ಟೈಮ್ ಕ್ಯಾಪ್ಸುಲ್’ಗಳು
ಸ್ಥಳಗಳು ಕೇವಲ ಭೌಗೋಳಿಕ ಜಾಗಗಳಲ್ಲ, ಅವು ನೆನಪುಗಳ ಭಂಡಾರ. ಮೆದುಳು ಕೆಲವು ನಿರ್ದಿಷ್ಟ ಸ್ಥಳಗಳನ್ನು ನಮ್ಮ ಜೀವನದ ಪ್ರಮುಖ ಘಟನೆಗಳೊಂದಿಗೆ ಜೋಡಿಸಿಟ್ಟುಕೊಂಡಿರುತ್ತದೆ. ಬಾಲ್ಯದ ಮಲಗುವ ಕೋಣೆ ನೆಮ್ಮದಿ ನೀಡಿದರೆ, ಆಸ್ಪತ್ರೆಯ ಕಾರಿಡಾರ್ ಹಳೆಯ ಆತಂಕವನ್ನು ನೆನಪಿಸಬಹುದು. ಅದಕ್ಕೇ ಒಂದೇ ಸ್ಥಳವು ಇಬ್ಬರು ಬೇರೆ ಬೇರೆ ವ್ಯಕ್ತಿಗಳಿಗೆ ವಿಭಿನ್ನ ಅನುಭವ ನೀಡುತ್ತದೆ. ಒಬ್ಬರಿಗೆ ಶಾಂತಿ ನೀಡುವ ಜಾಗ, ಮತ್ತೊಬ್ಬರಿಗೆ ಬೇಸರ ತರಿಸಬಹುದು.
3. ಮಾನಸಿಕ ಆರೋಗ್ಯದ ಮೇಲೆ ಪ್ರಕೃತಿಯ ಜಾದೂ
ಗಿಡ-ಮರಗಳು, ನದಿ, ಪರ್ವತಗಳು ಮತ್ತು ಹಸಿರಿನ ನಡುವೆ ಸಮಯ ಕಳೆಯುವುದರಿಂದ ರಕ್ತದೊತ್ತಡ ಕಡಿಮೆಯಾಗಿ, ಮಾನಸಿಕ ಒತ್ತಡ ದೂರವಾಗುತ್ತದೆ ಎಂದು ಅಧ್ಯಯನಗಳು ನಿರೂಪಿಸಿವೆ. ಮನುಷ್ಯರು ಸಾವಿರಾರು ವರ್ಷಗಳ ಕಾಲ ಪ್ರಕೃತಿಯ ಮಡಿಯಲ್ಲೇ ವಿಕಸನಗೊಂಡಿರುವುದರಿಂದ, ಮೆದುಳು ಇಂದಿಗೂ ನೈಸರ್ಗಿಕ ಪರಿಸರಕ್ಕೆ ಧನಾತ್ಮಕವಾಗಿ ಸ್ಪಂದಿಸುತ್ತದೆ. ನೀರಿನ ಶಬ್ದ, ಎಲೆಗಳ ಮರ್ಮರ ಮತ್ತು ಮುಕ್ತ ಆಕಾಶ ನಮ್ಮ ಮನಸ್ಸನ್ನು ರೀಚಾರ್ಜ್ ಮಾಡುತ್ತವೆ.
ಗಮನಾರ್ಹ ಅಂಶ: ಇತ್ತೀಚಿನ ದಿನಗಳಲ್ಲಿ ಆಧುನಿಕ ಕಚೇರಿಗಳು, ಆಸ್ಪತ್ರೆಗಳು ಮತ್ತು ಶಾಲೆಗಳನ್ನು ವಿನ್ಯಾಸಗೊಳಿಸುವಾಗ ಜನರ ಮಾನಸಿಕ ಆರೋಗ್ಯವನ್ನು ವೃದ್ಧಿಸುವಂತಹ ವಾಸ್ತುಶಿಲ್ಪ ಮತ್ತು ನೈಸರ್ಗಿಕ ಬೆಳಕಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.
4. ಬಣ್ಣ ಮತ್ತು ವಾಸ್ತುಶಿಲ್ಪದ ಪ್ರಭಾವ
ಕೋಣೆಯ ಬೆಳಕು, ಬಣ್ಣಗಳು ಮತ್ತು ಅದರ ವಿನ್ಯಾಸ ಕೂಡ ನಮ್ಮ ಮೂಡ್ ನಿರ್ಧರಿಸುತ್ತವೆ. ಮೃದುವಾದ ಬಣ್ಣಗಳು ಮತ್ತು ಕಿಟಕಿಗಳಿಂದ ಬರುವ ನೈಸರ್ಗಿಕ ಬೆಳಕು ಉತ್ಪಾದಕತೆಯನ್ನು ಹೆಚ್ಚಿಸಿದರೆ, ಕಿರಿದಾದ ಮತ್ತು ಗೊಂದಲಮಯವಾದ ವಿನ್ಯಾಸಗಳು ಮಾನಸಿಕ ಆಯಾಸಕ್ಕೆ ಕಾರಣವಾಗುತ್ತವೆ. ಎತ್ತರವಾದ ಸೀಲಿಂಗ್ (Ceiling) ಇರುವ ಜಾಗಗಳು ಮನುಷ್ಯನಲ್ಲಿ ಸೃಜನಶೀಲತೆಯನ್ನು ಪ್ರೇರೇಪಿಸುತ್ತವೆ ಎಂದು ಸಂಶೋಧನೆಗಳು ಹೇಳುತ್ತವೆ.
5. ಜನರ ನಡುವಿನ ‘ಸಾಮಾಜಿಕ ಶಕ್ತಿ’ (Social Energy)
ಒಂದು ಸ್ಥಳದ ವಾತಾವರಣವನ್ನು ಅಲ್ಲಿರುವ ಭೌತಿಕ ವಸ್ತುಗಳಿಗಿಂತ ಹೆಚ್ಚಾಗಿ ಅಲ್ಲಿರುವ ಜನರು ನಿರ್ಧರಿಸುತ್ತಾರೆ. ಪ್ರೀತಿಪಾತ್ರರಿಂದ ತುಂಬಿದ ಸಾಮಾನ್ಯ ಕೋಣೆಯೂ ನಮಗೆ ಅಪಾರ ಸಂತೋಷ ನೀಡುತ್ತದೆ. ಇದಕ್ಕೆ ವಿರುದ್ಧವಾಗಿ, ಎಷ್ಟೇ ಸುಂದರವಾದ ಜಾಗವಾಗಿದ್ದರೂ ಅಲ್ಲಿ ಹಳೆಯ ಕಹಿ ನೆನಪುಗಳು ಅಥವಾ ಒಂಟಿತನವಿದ್ದರೆ ಅದು ನಮಗೆ ಇಷ್ಟವಾಗುವುದಿಲ್ಲ.
ವೇಗವಾಗಿ ಓಡುತ್ತಿರುವ ಇಂದಿನ ಡಿಜಿಟಲ್ ಜಗತ್ತಿನಲ್ಲಿ, ನಾವು ಎಂತಹ ಪರಿಸರದಲ್ಲಿದ್ದೇವೆ ಎಂಬುದು ಬಹಳ ಮುಖ್ಯವಾಗುತ್ತದೆ. ನಮ್ಮ ಸುತ್ತಲಿನ ಸ್ಥಳಗಳು ಕೇವಲ ನಮ್ಮನ್ನು ಆವರಿಸಿಕೊಂಡಿರುವುದಿಲ್ಲ, ಬದಲಿಗೆ ಅವು ಪ್ರತಿದಿನವೂ ನಮ್ಮ ಒಳಗಿನ ಪ್ರಪಂಚವನ್ನು ರೂಪಿಸುತ್ತಿರುತ್ತವೆ. ಆದ್ದರಿಂದ, ನಮ್ಮ ಮಾನಸಿಕ ಆರೋಗ್ಯವನ್ನು ಉತ್ತಮವಾಗಿಡಲು ಸೂಕ್ತವಾದ ಮತ್ತು ಧನಾತ್ಮಕ ವಾತಾವರಣವನ್ನು ಆಯ್ಕೆ ಮಾಡಿಕೊಳ್ಳುವುದು ಅತ್ಯಗತ್ಯ.








