ನವದೆಹಲಿ: ರಸ್ತೆ ಬದಿಯಲ್ಲಿ ನಿಂತಿದ್ದ ಆಟೋರಿಕ್ಷಾದ ಮೇಲೆ ಮರ ಅಥವಾ ಅದರ ಕೊಂಬೆ ಬಿದ್ದರೆ, ಅದನ್ನು ಮೋಟಾರು ವಾಹನ ಕಾಯ್ದೆಯಡಿ ‘ಮೋಟಾರು ಅಪಘಾತ’ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಏಕೆಂದರೆ ಇಂತಹ ಘಟನೆಗಳಲ್ಲಿ ವಾಹನದ ಯಾವುದೇ ಸಕ್ರಿಯ ಪಾತ್ರ ಇರುವುದಿಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.
ನ್ಯಾಯಮೂರ್ತಿಗಳಾದ ಸಂಜಯ್ ಕರೋಲ್ ಮತ್ತು ಎನ್. ಕೋಟೀಶ್ವರ್ ಸಿಂಗ್ ಅವರಿದ್ದ ಪೀಠವು, ಈ ರೀತಿಯ ಅಪಘಾತಗಳು ಮೋಟಾರು ವಾಹನದಿಂದಲೇ ನೇರವಾಗಿ ಸಂಭವಿಸದ ಕಾರಣ, ಮೋಟಾರು ವಾಹನ ಕಾಯ್ದೆಯ (MV Act) ಸೆಕ್ಷನ್ 166 ರ ಅಡಿಯಲ್ಲಿ ಪರಿಹಾರದ ಕ್ಲೈಮ್ ಮಾಡುವುದು ಸೂಕ್ತವಲ್ಲ ಎಂದು ಹೇಳಿದೆ.
ಆದರೆ, ಮಾನವೀಯತೆ ಮತ್ತು ಸಾಂವಿಧಾನಿಕ ತತ್ವಗಳನ್ನು ಎತ್ತಿಹಿಡಿದ ನ್ಯಾಯಾಲಯವು, ತನ್ನ ವಿಶೇಷ ಅಧಿಕಾರವಾದ ವಿಧಿ 142 (Article 142) ಅನ್ನು ಬಳಸಿ, 2007ರಲ್ಲಿ ಬೆಂಗಳೂರಿನಲ್ಲಿ ನಡೆದ ಈ ವಿಲಕ್ಷಣ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಪ್ರಯಾಣಿಕ ಕೆ.ಕೆ. ಉಮೇಶ್ ಕುಮಾರ್ ಅವರಿಗೆ 25 ಲಕ್ಷ ರೂ. ಪರಿಹಾರ ನೀಡುವಂತೆ ಆದೇಶಿಸಿದೆ.
ಹಿನ್ನೆಲೆ ಏನು?
ಜೂನ್ 23, 2007 ರಂದು ಉಮೇಶ್ ಕುಮಾರ್ ಅವರು ಬೆಂಗಳೂರಿನ ಕ್ವೀನ್ಸ್ ರಸ್ತೆಯಿಂದ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಆಟೋದಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಭಾರಿ ಮಳೆ ಬಂದಿದ್ದರಿಂದ ಆಟೋ ಚಾಲಕ ರಸ್ತೆ ಬದಿಯ ಮರದ ಕೆಳಗೆ ಆಟೋ ನಿಲ್ಲಿಸಿದ್ದರು. ಆಗ ಹಳೆಯ ಮರದ ಕೊಂಬೆಯೊಂದು ಹಠಾತ್ತನೆ ಮುರಿದು ಆಟೋದ ಮೇಲೆ ಬಿದ್ದ ಪರಿಣಾಮ ಉಮೇಶ್ ತೀವ್ರವಾಗಿ ಗಾಯಗೊಂಡಿದ್ದರು.
ಈ ಹಿಂದೆ ಬೆಂಗಳೂರಿನ ಮೋಟಾರು ಅಪಘಾತ ದಾವೆಗಳ ನ್ಯಾಯಮಂಡಳಿಯು (Tribunal) ಇದನ್ನು ‘ನೈಸರ್ಗಿಕ ವಿಕೋಪ’ ಎಂದು ಕರೆದು, ಉಮೇಶ್ ಸಲ್ಲಿಸಿದ್ದ 50 ಲಕ್ಷ ರೂ. ಪರಿಹಾರದ ಅರ್ಜಿಯನ್ನು ವಜಾಗೊಳಿಸಿತ್ತು. ಆದರೆ, ಇದರ ವಿರುದ್ಧ ಮೇಲ್ಮನವಿ ಸಲ್ಲಿಕೆಯಾದಾಗ ಕರ್ನಾಟಕ ಹೈಕೋರ್ಟ್ 17.10 ಲಕ್ಷ ರೂ. ಪರಿಹಾರವನ್ನು ನೀಡಿತ್ತು. ಇದರಲ್ಲಿ ಬಿಬಿಎಂಪಿ (BBMP) ಶೇ. 25, ಆಟೋ ವಿಮಾ ಕಂಪನಿ ಶೇ. 50 ಮತ್ತು ತೋಟಗಾರಿಕಾ ಇಲಾಖೆ ಶೇ. 25 ರಷ್ಟು ಪರಿಹಾರ ಹಂಚಿಕೊಳ್ಳಬೇಕು ಎಂದು ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಬಿಬಿಎಂಪಿ ಮತ್ತು ತೋಟಗಾರಿಕಾ ಇಲಾಖೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.
ಸುಪ್ರೀಂ ಕೋರ್ಟ್ ಹೇಳಿದ್ದೇನು?
ಮಳೆಯಿಂದ ರಕ್ಷಣೆ ಪಡೆಯಲು ಮರದ ಕೆಳಗೆ ಆಟೋ ನಿಲ್ಲಿಸುವುದನ್ನಾಗಲಿ ಅಥವಾ ಮರದ ಕೊಂಬೆ ಬೀಳುವುದನ್ನಾಗಲಿ ಅಧಿಕಾರಿಗಳು ಅಥವಾ ಚಾಲಕ ಮುಂಚಿತವಾಗಿ ಊಹಿಸಲು ಸಾಧ್ಯವಿರಲಿಲ್ಲ ಎಂದು ಕೋರ್ಟ್ ಒಪ್ಪಿಕೊಂಡಿದೆ. ಹಾಗಾಗಿ ಮೋಟಾರು ವಾಹನ ಕಾಯ್ದೆಯಡಿ ಅಧಿಕಾರಿಗಳ ಮೇಲೆ ಹೊಣೆ ಹೊರಿಸುವುದು ಸರಿಯಲ್ಲ ಎಂದಿದೆ.
ನಗರಗಳಲ್ಲಿ ರಸ್ತೆ ಬದಿಯ ಮರಗಳನ್ನು ನಿರ್ವಹಿಸುವುದು ಪಾಲಿಕೆಯ ಜವಾಬ್ದಾರಿಯಾಗಿದ್ದರೂ, ಬೆಳೆಯುತ್ತಿರುವ ನಗರಗಳಲ್ಲಿ ಪ್ರತಿಯೊಂದು ಮರದ ಮೇಲೆಯೂ ನಿರಂತರ ನಿಗಾ ಇಡುವುದು ಅಪ್ರಾಯೋಗಿಕ. ಹಾಗಂತ ಮುನ್ನೆಚ್ಚರಿಕೆ ಹೆಸರಿನಲ್ಲಿ ಎಲ್ಲಾ ಮರದ ಕೊಂಬೆಗಳನ್ನು ಕತ್ತರಿಸಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
‘ನ್ಯಾಯದ ಅಂತಃಕರಣಕ್ಕೆ ಒಪ್ಪದ ವಿಷಯ’
ಆದಾಗ್ಯೂ, ಜೀವನವನ್ನೇ ಬದಲಾಯಿಸುವಂತಹ ಗಾಯಗಳಿಗೆ ಒಳಗಾದ ವ್ಯಕ್ತಿಯನ್ನು ಯಾವುದೇ ಆರ್ಥಿಕ ಸಹಾಯವಿಲ್ಲದೆ ಕೈಬಿಡುವುದು “ನ್ಯಾಯದ ಅಂತಃಕರಣಕ್ಕೆ ಒಪ್ಪುವ ವಿಷಯವಲ್ಲ” ಎಂದು ಕೋರ್ಟ್ ಕಳವಳ ವ್ಯಕ್ತಪಡಿಸಿದೆ.
ಹೈಕೋರ್ಟ್ ನೀಡಿದ್ದ ಮೊತ್ತ ಕಡಿಮೆ ಎಂದು ಅಭಿಪ್ರಾಯಪಟ್ಟ ಸುಪ್ರೀಂ ಕೋರ್ಟ್, ಪರಿಹಾರವನ್ನು 25 ಲಕ್ಷ ರೂಪಾಯಿಗಳಿಗೆ ಹೆಚ್ಚಿಸಿದೆ. ಅಷ್ಟೇ ಅಲ್ಲದೆ, ಅರ್ಜಿ ಸಲ್ಲಿಸಿದ ದಿನಾಂಕದಿಂದ ಅನ್ವಯವಾಗುವಂತೆ ಹೈಕೋರ್ಟ್ ಸೂಚಿಸಿದ ಬಡ್ಡಿಯನ್ನೂ ನೀಡಬೇಕು ಎಂದು ಆದೇಶಿಸಿದೆ. ಹೈಕೋರ್ಟ್ ನಿಗದಿಪಡಿಸಿದ್ದ ಪರಿಹಾರದ ಹಂಚಿಕೆಯ ಅನುಪಾತದಲ್ಲಿ ಯಾವುದೇ ಬದಲಾವಣೆ ಮಾಡದ ನ್ಯಾಯಾಲಯ, ನಾಲ್ಕು ವಾರಗಳ ಒಳಗಾಗಿ ಈ ಮೊತ್ತವನ್ನು ಪಾವತಿಸುವಂತೆ ಸೂಚಿಸಿದೆ.








