ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಸಚಿವ ಸಂಪುಟ ವಿಸ್ತರಣೆ ಮತ್ತು ಪುನರ್ರಚನೆಯ ಕುರಿತಾದ ಚಟುವಟಿಕೆಗಳು ಗರಿಗೆದರಿವೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ಕ್ಯಾಬಿನೆಟ್ನಲ್ಲಿ ಮಾಜಿ ಸಚಿವ ಬಿ.ಜೆಡ್. ಜಮೀರ್ ಅಹ್ಮದ್ ಖಾನ್ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂಬ ಆಗ್ರಹ ಈಗ ರಾಜ್ಯಾದ್ಯಂತ ತೀವ್ರ ಸ್ವರೂಪ ಪಡೆದುಕೊಂಡಿದೆ. ಜಮೀರ್ ಅಹ್ಮದ್ ಅವರ ಬೆಂಬಲಿಗರು ಮತ್ತು ಅಭಿಮಾನಿಗಳು ತಮ್ಮ ನಾಯಕನಿಗೆ ಸಚಿವ ಸ್ಥಾನ ನೀಡಲೇಬೇಕು ಎಂದು ಪಟ್ಟು ಹಿಡಿದು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.
ಬೀದಿಗಿಳಿದ ಜಮೀರ್ ಬೆಂಬಲಿಗರು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಜಮೀರ್ ಅಹ್ಮದ್ ಖಾನ್ ಪರವಾಗಿ ಅವರ ಅಭಿಮಾನಿಗಳು ಬೃಹತ್ ರ್ಯಾಲಿ ಹಾಗೂ ಪ್ರತಿಭಟನೆಗಳನ್ನು ಹಮ್ಮಿಕೊಂಡಿದ್ದಾರೆ. ಸರ್ಕಾರದಲ್ಲಿ ಜಮೀರ್ ಅವರಿಗೆ ಸೂಕ್ತ ಸ್ಥಾನಮಾನ ಸಿಗಲೇಬೇಕು, ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸುವುದಾಗಿ ಬೆಂಬಲಿಗರು ಎಚ್ಚರಿಸಿದ್ದಾರೆ. ಈ ರಾಜಕೀಯ ಹಗ್ಗಜಗ್ಗಾಟದ ಬೆನ್ನಲ್ಲೇ, ಸದಾ ತಮ್ಮ ನಿಖರ ಭವಿಷ್ಯವಾಣಿಗೆ ಹೆಸರಾಗಿರುವ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು ಜಮೀರ್ ಅಹ್ಮದ್ ಖಾನ್ ಕುರಿತು ನುಡಿದಿರುವ ಭವಿಷ್ಯ ಈಗ ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ.
ಕೋಡಿಮಠದ ಶ್ರೀಗಳ ಭವಿಷ್ಯ ಜಮೀರ್ಗೆ ವರ? ಹಾಸನ ಜಿಲ್ಲೆಯ ಅರಸೀಕೆರೆಯ ‘ಅಲ್ ಅಮೀನ್’ ಶಾಲೆಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಕೋಡಿಮಠದ ಶ್ರೀಗಳು, ಜಮೀರ್ ಅಹ್ಮದ್ ಅವರ ಪ್ರಸ್ತುತ ರಾಜಕೀಯ ಸ್ಥಿತಿಗತಿ ಹಾಗೂ ಅವರ ಭವಿಷ್ಯದ ಕುರಿತು ಮಹತ್ವದ ಮಾತುಗಳನ್ನು ಆಡಿದ್ದಾರೆ. ಇತ್ತೀಚೆಗೆ ಜಮೀರ್ ಅಹ್ಮದ್ ಅವರಿಗೆ ಸಂಬಂಧ ಪಟ್ಟದ್ದು ಎನ್ನಲಾದ ಆಡಿಯೋ ವಿವಾದದ ಕುರಿತು ಮಾತನಾಡಿದ ಶ್ರೀಗಳು, “ಆ ಆಡಿಯೋ ಕೇವಲ ಅಪಪ್ರಚಾರ ಮಾಡುವ ಕೆಟ್ಟ ಉದ್ದೇಶದಿಂದ ಸೃಷ್ಟಿಯಾಗಿರುವುದಾಗಿದೆ. ಹೀಗಾಗಿ ಜಮೀರ್ ಅವರು ಯಾವುದೇ ಕಾರಣಕ್ಕೂ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ” ಎಂದು ಧೈರ್ಯ ತುಂಬಿದ್ದಾರೆ.
“ಜಮೀರ್ ಇಲ್ಲದೆ ಸರ್ಕಾರವೇ ಇಲ್ಲ” ಮುಂದುವರಿದು ಮಾತನಾಡಿದ ಕೋಡಿಮಠದ ಶ್ರೀಗಳು, ಜಮೀರ್ ಅಹ್ಮದ್ ಖಾನ್ ಅವರ ರಾಜಕೀಯ ಶಕ್ತಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. “ಜಮೀರ್ ಅಹ್ಮದ್ ಖಾನ್ ಅವರು ಇಲ್ಲದೆ ಸರ್ಕಾರ ರಚನೆಯಾಗಲು ಸಾಧ್ಯವಿಲ್ಲ. ಜಮೀರ್ ಇದ್ದರೆ ಮಾತ್ರ ಅದು ಪೂರ್ಣ ಪ್ರಮಾಣದ ಸರ್ಕಾರ ಎನಿಸಿಕೊಳ್ಳುತ್ತದೆ. ಅವರು ಶೀಘ್ರದಲ್ಲೇ ತಮ್ಮ ಸಚಿವ ಸ್ಥಾನವನ್ನು ಮರಳಿ ಪಡೆಯಲಿದ್ದಾರೆ” ಎಂದು ಭವಿಷ್ಯ ನುಡಿಯುವ ಮೂಲಕ ಜಮೀರ್ ಬೆಂಬಲಿಗರಲ್ಲಿ ಹೊಸ ಭರವಸೆ ಮೂಡಿಸಿದ್ದಾರೆ.
ಶಾಂತಿ ಕಾಪಾಡಲು ಶ್ರೀಗಳ ಕರೆ ಇದೇ ವೇಳೆ ರಾಜ್ಯಾದ್ಯಂತ ಆಕ್ರೋಶ ಭರಿತರಾಗಿ ಪ್ರತಿಭಟನೆ ನಡೆಸುತ್ತಿರುವ ಜಮೀರ್ ಅಹ್ಮದ್ ಅವರ ಅಭಿಮಾನಿಗಳಿಗೆ ಶ್ರೀಗಳು ಪ್ರಮುಖ ಮನವಿಯೊಂದನ್ನು ಮಾಡಿದ್ದಾರೆ. “ಜಮೀರ್ ಅವರ ಸಚಿವ ಸ್ಥಾನದ ವಿಚಾರವಾಗಿ ಬೆಂಬಲಿಗರು ಅತಿಯಾದ ಆಕ್ರೋಶಕ್ಕೆ ಒಳಗಾಗಬಾರದು. ಸಾರ್ವಜನಿಕ ಶಾಂತಿಗೆ ಭಂಗ ತರದೆ ಎಲ್ಲರೂ ಶಾಂತಿಯಿಂದ ಇರಬೇಕು” ಎಂದು ಶ್ರೀಗಳು ಕರೆ ನೀಡಿದ್ದಾರೆ. ಶ್ರೀಗಳ ಈ ಭವಿಷ್ಯದ ನುಡಿಗಳು ಸಿಎಂ ಡಿ.ಕೆ. ಶಿವಕುಮಾರ್ ಕ್ಯಾಬಿನೆಟ್ನಲ್ಲಿ ಜಮೀರ್ ಸೇರ್ಪಡೆಗೆ ಹಾದಿ ಸುಗಮ ಮಾಡಿಕೊಡುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.








