ಕಲಬುರ್ಗಿ: ಅತ್ಯಾಚಾರದಂತಹ ಘೋರ ಅಪರಾಧದ ಪ್ರಕರಣದಲ್ಲೂ ಮಾನವೀಯತೆ ಮರೆತು ಲಂಚಕ್ಕೆ ಕೈಯೊಡ್ಡಿದ ಮಹಿಳಾ ಪೊಲೀಸ್ ಪೇದೆಯೊಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿರುವ ನಾಚಿಕೆಗೇಡಿನ ಘಟನೆ ಕಲಬುರ್ಗಿಯಲ್ಲಿ ನಡೆದಿದೆ. ನಗರದ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯ ರೈಟರ್ ಆಗಿ ಕೆಲಸ ಮಾಡುತ್ತಿದ್ದ ಜ್ಯೋತಿ ಎಂಬುವವರೇ ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಮಹಿಳಾ ಕಾನ್ಸ್ಟೇಬಲ್ ಆಗಿದ್ದಾರೆ.
ಪ್ರಕರಣದ ಹಿನ್ನೆಲೆ: ಕೆಲ ದಿನಗಳ ಹಿಂದೆ ಚಿಂದಿ ಆಯುವ ಬಡ ಮಹಿಳೆಯೊಬ್ಬರ ಅಪ್ರಾಪ್ತ ಮಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿತ್ತು. ಈ ಕುರಿತು ನ್ಯಾಯ ಕೇಳಿ ನೊಂದ ಸಂತ್ರಸ್ತೆ ಮತ್ತು ಆಕೆಯ ತಾಯಿ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದರು. ಬಡತನದಲ್ಲೂ ನೊಂದು ಬೆಂದು ಹೋಗಿದ್ದ ಆ ಕುಟುಂಬಕ್ಕೆ ಸಾಂತ್ವನ ಹೇಳಿ ನ್ಯಾಯ ಕೊಡಿಸಬೇಕಾಗಿದ್ದ ಪೊಲೀಸರು, ಅಲ್ಲಿಯೇ ತಮ್ಮ ವಿಕೃತ ಬುದ್ಧಿ ಪ್ರದರ್ಶಿಸಿದ್ದಾರೆ.
ಕೇಸ್ ನಿಮ್ಮ ಪರ ಮಾಡಲು 10 ಸಾವಿರಕ್ಕೆ ಡಿಮ್ಯಾಂಡ್!
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ (ದೋಷಾರೋಪ ಪಟ್ಟಿ) ಸಲ್ಲಿಸುವ ಪ್ರಕ್ರಿಯೆ ನಡೆಯುತ್ತಿತ್ತು. ಈ ವೇಳೆ ತನಿಖೆ ಮತ್ತು ಚಾರ್ಜ್ ಶೀಟ್ ನಿಮ್ಮ ಪರವಾಗಿ ಪ್ರಬಲವಾಗಿರಬೇಕು ಎಂದರೆ ಹಣ ನೀಡಬೇಕು ಎಂದು ರೈಟರ್ ಜ್ಯೋತಿ ಬೇಡಿಕೆಯಿಟ್ಟಿದ್ದಾರೆ. ಸಂತ್ರಸ್ತೆಯ ತಾಯಿಯ ಬಡತನವನ್ನೂ ನೋಡದೆ, “ಕೇಸ್ ನಿಮ್ಮ ಪರ ಆಗಬೇಕಾದರೆ 10 ಸಾವಿರ ರೂಪಾಯಿ ಲಂಚ ಕೊಡಬೇಕು” ಎಂದು ಪಟ್ಟು ಹಿಡಿದಿದ್ದಾರೆ.
ಲೋಕಾಯುಕ್ತ ಪೊಲೀಸರ ದಿಢೀರ್ ದಾಳಿ:
ಕೂಲಿ ಮಾಡಿಕೊಂಡು ಜೀವನ ನಡೆಸುವ ಆ ಬಡ ತಾಯಿಗೆ 10 ಸಾವಿರ ರೂಪಾಯಿ ಕೊಡುವುದು ಅಸಾಧ್ಯದ ಮಾತಾಗಿತ್ತು. ಹೀಗಾಗಿ ಅವರು ಈ ಬಗ್ಗೆ ಲೋಕಾಯುಕ್ತ ಪೊಲೀಸರ ಮೊರೆ ಹೋಗಿ ದೂರು ನೀಡಿದ್ದರು. ಸಂತ್ರಸ್ತೆಯ ತಾಯಿಯ ದೂರಿನನ್ವಯ ಲೋಕಾಯುಕ್ತ ಅಧಿಕಾರಿಗಳು ಇಟ್ಟಿದ್ದ ತಂತ್ರ ಯಶಸ್ವಿಯಾಗಿದೆ. ಇಂದು ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲೇ ಜ್ಯೋತಿ ಅವರು ಸಂತ್ರಸ್ತೆಯ ತಾಯಿಯಿಂದ 10 ಸಾವಿರ ರೂಪಾಯಿ ಲಂಚದ ಹಣವನ್ನು ಸ್ವೀಕರಿಸುತ್ತಿದ್ದಾಗ, ಲೋಕಾಯುಕ್ತ ಪೊಲೀಸರು ದಿಢೀರ್ ದಾಳಿ ನಡೆಸಿ ಆಕೆಯನ್ನು ಹಣದ ಸಮೇತ ವಶಕ್ಕೆ ಪಡೆದಿದ್ದಾರೆ.
ಎಎಸ್ಐ ಕೂಡ ಭಾಗಿ? ಸಿನಿಮಾ ಶೈಲಿಯಲ್ಲಿ ಪರಾರಿಯಾಗಿದ್ದ ಅಧಿಕಾರಿಯ ಬಂಧನ!
ಇದೇ ಪ್ರಕರಣದಲ್ಲಿ ಸ್ಟೇಷನ್ ಬಜಾರ್ ಠಾಣೆಯ ಸಹಾಯಕ ಸಬ್ ಇನ್ಸ್ಪೆಕ್ಟರ್ (ASI) ಶಿವಶರಣಪ್ಪ ಅವರ ಪಾತ್ರವೂ ಇರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಲೋಕಾಯುಕ್ತ ಪೊಲೀಸರು ದಾಳಿ ನಡೆಸುತ್ತಿದ್ದಂತೆ ಆತಂಕಗೊಂಡ ಎಎಸ್ಐ ಶಿವಶರಣಪ್ಪ ಠಾಣೆಯಿಂದ ಸಿನಿಮಾ ಶೈಲಿಯಲ್ಲಿ ಪರಾರಿಯಾಗಿದ್ದರು. ಆದರೆ ಸತತ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಪೊಲೀಸರು, ಎಸ್ಕೇಪ್ ಆಗಿದ್ದ ಎಎಸ್ಐ ಶಿವಶರಣಪ್ಪ ಅವರನ್ನು ಸಹ ಬೆನ್ನಟ್ಟಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.








