ಲಾಹೋರ್: 2020ರ ಸೆಪ್ಟೆಂಬರ್ನಲ್ಲಿ ಲಾಹೋರ್-ಸಿಯಾಲ್ಕೋಟ್ ಮೋಟಾರ್ವೇಯಲ್ಲಿ ನಡೆದ ಈ ಭೀಕರ ಘಟನೆಯು ಇಡೀ ಪಾಕಿಸ್ತಾನದಲ್ಲಿ ತೀವ್ರ ಆಕ್ರೋಶ ಮತ್ತು ಪ್ರತಿಭಟನೆಗೆ ಕಾರಣವಾಗಿತ್ತು. ಈಗ ಲಾಹೋರ್ ಹೈಕೋರ್ಟ್ ಈ ಪ್ರಕರಣದ ದೋಷಿಗಳಾದ ಆಬಿದ್ ಅಲಿ (ಅಲಿಯಾಸ್ ಮಾಲ್ಹಿ) ಮತ್ತು ಶಫಕತ್ ಅಲಿ (ಅಲಿಯಾಸ್ ಬಗ್ಗಾ) ಅವರ ಮೇಲ್ಮನವಿಯನ್ನು ವಜಾಗೊಳಿಸುವ ಮೂಲಕ ಕೆಳ ನ್ಯಾಯಾಲಯದ ಮರಣದಂಡನೆ ಶಿಕ್ಷೆಯನ್ನು ಖಚಿತಪಡಿಸಿದೆ .
32 ವರ್ಷದ ಫ್ರೆಂಚ್ ಮೂಲದ ಮಹಿಳೆಯು ತನ್ನ ಮೂವರು ಮಕ್ಕಳೊಂದಿಗೆ ಪ್ರಯಾಣಿಸುತ್ತಿದ್ದಾಗ, ಕಾರಿನ ಇಂಧನ ಖಾಲಿಯಾದ ಕಾರಣ ಮೋಟಾರ್ವೇನಲ್ಲಿ ಸಿಲುಕಿಕೊಂಡಿದ್ದರು . ಸಹಾಯಕ್ಕಾಗಿ ಕಾಯುತ್ತಿದ್ದಾಗ, ಇಬ್ಬರು ಶಸ್ತ್ರಸಜ್ಜಿತ ದುಷ್ಕರ್ಮಿಗಳು ಕಾರಿನ ಕಿಟಕಿ ಒಡೆದು ಒಳನುಗ್ಗಿ, ಮಹಿಳೆ ಮತ್ತು ಮಕ್ಕಳನ್ನು ದೋಚಿದರು. ನಂತರ ಮಹಿಳೆಯನ್ನು ಎಳೆದುಕೊಂಡು ಹೋಗಿ, ಆಕೆಯ ಮಕ್ಕಳ ಎದುರೇ ಬಂದೂಕಿನ ಬೆದರಿಕೆಯೊಡ್ಡಿ ಅತ್ಯಾಚಾರವೆಸಗಿದರು .
2021ರ ಮಾರ್ಚ್ನಲ್ಲಿ ಲಾಹೋರ್ನ ಭಯೋತ್ಪಾದನಾ ವಿರೋಧಿ ನ್ಯಾಯಾಲಯವು ಈ ಇಬ್ಬರೂ ಆರೋಪಿಗಳಿಗೆ ಮರಣದಂಡನೆ ಮತ್ತು ಜೀವಾವಧಿ ಶಿಕ್ಷೆಯನ್ನು ವಿಧಿಸಿತ್ತು . ಇದನ್ನು ಪ್ರಶ್ನಿಸಿ ಆರೋಪಿಗಳು ಹೈಕೋರ್ಟ್ ಮೊರೆ ಹೋಗಿದ್ದರು . ನ್ಯಾಯಮೂರ್ತಿ ಸೈಯದ್ ಶಹಬಾಜ್ ಅಲಿ ರಿಜ್ವಿ ಮತ್ತು ನ್ಯಾಯಮೂರ್ತಿ ತಾರಿಖ್ ಮೆಹಮೂದ್ ಬಜ್ವಾ ಅವರಿದ್ದ ಪೀಠವು ಈ ಅರ್ಜಿಯನ್ನು ವಜಾಗೊಳಿಸಿದೆ .
ಸಂತ್ರಸ್ತೆಯನ್ನೇ ದೂಷಿಸಿದ ಪೊಲೀಸ್: ಆ ಸಮಯದಲ್ಲಿ ಲಾಹೋರ್ ಪೊಲೀಸ್ ಮುಖ್ಯಸ್ಥರೊಬ್ಬರು, “ಮಹಿಳೆಯರು ತಡರಾತ್ರಿ ಪುರುಷರ ರಕ್ಷಣೆಯಿಲ್ಲದೆ ಏಕಾಂಗಿಯಾಗಿ ಪ್ರಯಾಣಿಸಬಾರದು” ಎಂದು ಹೇಳಿಕೆ ನೀಡಿದ್ದು ಭಾರಿ ವಿವಾದಕ್ಕೆ ಕಾರಣವಾಗಿತ್ತು. ಸಂತ್ರಸ್ತೆಯನ್ನೇ ದೂಷಿಸುವ ಇಂತಹ ಹೇಳಿಕೆಗಳ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು ನಡೆದಿದ್ದವು.
ಈ ತೀರ್ಪಿನ ಬಗ್ಗೆ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪ್ರತಿಕ್ರಿಯಿಸಿರುವ ಉದ್ಯಮಿ ಎಲಾನ್ ಮಸ್ಕ್, “ಬ್ರಾವೋ ಪಾಕಿಸ್ತಾನ! ಪಾಶ್ಚಿಮಾತ್ಯ ದೇಶಗಳಲ್ಲಿ ನಾವೂ ಇದನ್ನೇ ಮಾಡಬೇಕು” ಎಂದು ಹೇಳುವ ಮೂಲಕ ಈ ಕಠಿಣ ಕ್ರಮವನ್ನು ಸ್ವಾಗತಿಸಿದ್ದಾರೆ.








