ಬೆಂಗಳೂರು: “ಜನರಿಂದ, ಜನರಿಗಾಗಿ, ಜನರಿಗೋಸ್ಕರ” ಎಂಬ ಪ್ರಜಾಪ್ರಭುತ್ವದ ಆಶಯದೊಂದಿಗೆ ಆಡಳಿತದ ಸಾರಥ್ಯ ವಹಿಸಿಕೊಂಡಿರುವ ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಲೋಕಭವನದಲ್ಲಿ ಪ್ರಮಾಣವಚನ ಸ್ವೀಕರಿಸಿದ ನಂತರ ನಾಡಿನ ಜನತೆಯನ್ನುದ್ದೇಶಿಸಿ ಅತ್ಯಂತ ಆಪ್ತ ಹಾಗೂ ಭಾವುಕ ನುಡಿಗಳನ್ನಾಡಿದ್ದಾರೆ.
ತಮ್ಮ ರಾಜಕೀಯ ಏಳುಬೀಳುಗಳಲ್ಲಿ ಜೊತೆಯಾಗಿ ನಿಂತ ಕೋಟ್ಯಂತರ ಕನ್ನಡಿಗರಿಗೆ ಮತ್ತು ಕಾರ್ಯಕರ್ತರಿಗೆ ಅವರು ತಲೆಬಾಗಿ ಧನ್ಯವಾದ ಅರ್ಪಿಸಿದ್ದಾರೆ.
ನನ್ನನ್ನು ಹೆಗಲ ಮೇಲೆ ಹೊತ್ತು ಮುನ್ನಡೆಸಿದ ಜನತೆಗೆ ಧನ್ಯವಾದ
ತಮ್ಮ ರಾಜಕೀಯ ಪಯಣದ ಹಾದಿಯನ್ನು ಸ್ಮರಿಸಿರುವ ಡಿ.ಕೆ. ಶಿವಕುಮಾರ್, “ನನ್ನ ಬದುಕಿನ ಪ್ರತಿಯೊಂದು ಏಳುಬೀಳುಗಳಲ್ಲೂ ಧೈರ್ಯ ತುಂಬಿ, ನನ್ನನ್ನು ಹೆಗಲ ಮೇಲೆ ಹೊತ್ತು ಮುನ್ನಡೆಸಿದ ನನ್ನ ಪ್ರೀತಿಯ ಕರ್ನಾಟಕದ ಕೋಟ್ಯಂತರ ಜನತೆ ಹಾಗೂ ಕಾರ್ಯಕರ್ತ ಬಂಧುಗಳ ಆಶೀರ್ವಾದದಿಂದ ಲೋಕಭವನದಲ್ಲಿ ಇಂದು ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದೆ. ಈ ಕ್ಷಣದಲ್ಲಿ ನಾನು ನಿಮ್ಮೆಲ್ಲರ ಪ್ರೀತಿ ಹಾಗೂ ವಿಶ್ವಾಸಕ್ಕೆ ತಲೆಬಾಗುತ್ತೇನೆ” ಎಂದು ವಿನೀತರಾಗಿದ್ದಾರೆ.
ಜನರಿಂದ, ಜನರಿಗಾಗಿ, ಜನರಿಗೋಸ್ಕರ
ನನ್ನ ಬದುಕಿನ ಪ್ರತಿಯೊಂದು ಏಳುಬೀಳುಗಳಲ್ಲೂ ಧೈರ್ಯ ತುಂಬಿ, ನನ್ನನ್ನು ಹೆಗಲ ಮೇಲೆ ಹೊತ್ತು ಮುನ್ನಡೆಸಿದ ನನ್ನ ಪ್ರೀತಿಯ ಕರ್ನಾಟಕದ ಕೋಟ್ಯಂತರ ಜನತೆ ಹಾಗೂ ಕಾರ್ಯಕರ್ತ ಬಂಧುಗಳ ಆಶೀರ್ವಾದದಿಂದ ಲೋಕಭವನದಲ್ಲಿ ಇಂದು ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದೆ. ಈ ಕ್ಷಣದಲ್ಲಿ ನಾನು ನಿಮ್ಮೆಲ್ಲರ… pic.twitter.com/6nWerA33Ys
— DK Shivakumar (@DKShivakumar) June 3, 2026
ಇದು ಕನ್ನಡಿಗರ ಕನಸುಗಳನ್ನು ನನಸು ಮಾಡುವ ಪವಿತ್ರ ಕರ್ತವ್ಯ
ಮುಖ್ಯಮಂತ್ರಿ ಹುದ್ದೆಯನ್ನು ಕೇವಲ ಅಧಿಕಾರವಾಗಿ ನೋಡದೆ, ಅದೊಂದು ಪವಿತ್ರ ಜವಾಬ್ದಾರಿ ಎಂದು ಕರೆದಿರುವ ಅವರು, “ಇಂದು ನನ್ನ ಹೆಗಲ ಮೇಲಿರುವುದು ಕೇವಲ ಮುಖ್ಯಮಂತ್ರಿಯ ಜವಾಬ್ದಾರಿಯಲ್ಲ, ಬದಲಿಗೆ ಕೋಟ್ಯಂತರ ಕನ್ನಡಿಗರ ಕನಸುಗಳನ್ನು ನನಸು ಮಾಡುವ ಪವಿತ್ರ ಕರ್ತವ್ಯ. ಈ ಅವಕಾಶವನ್ನು ನನಗೆ ಕರುಣಿಸಿದ ಹಿರಿಯರಿಗೆ, ಮಾರ್ಗದರ್ಶಕರಿಗೆ ಹಾಗೂ ನನ್ನ ಶಕ್ತಿಯಾಗಿ ನಿಂತ ಪ್ರತಿಯೊಬ್ಬರಿಗೂ ನನ್ನ ಹೃದಯಪೂರ್ವಕ ಕೃತಜ್ಞತೆಗಳು” ಎಂದು ಪಕ್ಷದ ಹಿರಿಯರಿಗೆ ಹಾಗೂ ಬೆಂಬಲಿಗರಿಗೆ ಧನ್ಯವಾದ ಸಲ್ಲಿಸಿದ್ದಾರೆ.
ತಂತ್ರಜ್ಞಾನ ಯುಗದಲ್ಲಿ ಕರ್ನಾಟಕವನ್ನು ಶಿಖರಕ್ಕೆ ಕೊಂಡೊಯ್ಯುವ ಸಂಕಲ್ಪ
ಅಭಿವೃದ್ಧಿಯ ದೂರದೃಷ್ಟಿಯ ಬಗ್ಗೆ ಮಾತನಾಡಿದ ಮುಖ್ಯಮಂತ್ರಿಗಳು, “ವೇಗವಾಗಿ ಬದಲಾಗುತ್ತಿರುವ ಇಂದಿನ ತಂತ್ರಜ್ಞಾನದ ಯುಗದಲ್ಲಿ, ಹೊಸ ಆಲೋಚನೆಗಳೊಂದಿಗೆ ನಮ್ಮ ಹೆಮ್ಮೆಯ ಕರ್ನಾಟಕವನ್ನು ಅಭಿವೃದ್ಧಿಯ ಅತ್ಯುನ್ನತ ಶಿಖರಕ್ಕೆ ಕೊಂಡೊಯ್ಯಬೇಕಿದೆ. ಈ ಸರ್ವತೋಮುಖ ಪ್ರಗತಿಯ ದಾರಿಯಲ್ಲಿ ರೈತರು, ಶ್ರಮಿಕರು, ಮಹಿಳೆಯರು, ವಿದ್ಯಾರ್ಥಿಗಳು, ಯುವಜನರು ಹಾಗೂ ಪ್ರತಿಯೊಬ್ಬ ನಾಗರಿಕರ ಸಹಭಾಗಿತ್ವ ನಮಗೆ ಮುಖ್ಯ” ಎಂದು ಸಮಾಜದ ಎಲ್ಲಾ ವರ್ಗಗಳ ಒಟ್ಟಾರೆ ವಿಕಾಸಕ್ಕೆ ಒತ್ತು ನೀಡಿದ್ದಾರೆ.
ಸಮೃದ್ಧ ಕರ್ನಾಟಕ ಕಟ್ಟಲು ಎಲ್ಲರ ಸಹಕಾರಕ್ಕೆ ಕರೆ
ಒಗ್ಗಟ್ಟಿನ ಮಂತ್ರ ಜಪಿಸಿರುವ ಸಿಎಂ ಡಿಕೆಶಿ, “ಯಾವುದೇ ಒಬ್ಬ ವ್ಯಕ್ತಿಯಿಂದ ಬದಲಾವಣೆ ಸಾಧ್ಯವಿಲ್ಲ, ಆದರೆ ನಾವೆಲ್ಲರೂ ಕೈಜೋಡಿಸಿದರೆ ಅಸಾಧ್ಯವಾದುದು ಯಾವುದೂ ಇಲ್ಲ. ಬನ್ನಿ, ನಮ್ಮ ಭವಿಷ್ಯದ ಪೀಳಿಗೆ ಹೆಮ್ಮೆ ಪಡುವಂತಹ ಸುಂದರ, ಸಮೃದ್ಧ ಮತ್ತು ಪ್ರಗತಿಪರ ಕರ್ನಾಟಕವನ್ನು ಕಟ್ಟೋಣ. ಜೈ ಹಿಂದ್, ಜೈ ಕರ್ನಾಟಕ!” ಎಂದು ಕರೆಯಿಡುವ ಮೂಲಕ ತಮ್ಮ ಸಂದೇಶವನ್ನು ಮುಕ್ತಾಯಗೊಳಿಸಿದ್ದಾರೆ.
BREAKING: ಸಿಎಂ ಡಿ.ಕೆ.ಶಿವಕುಮಾರ್ ಆರ್ಥಿಕ ಸಲಹೆಗಾರರಾಗಿ ನಿವೃತ್ತ ಐಎಎಸ್ ಅಧಿಕಾರಿ ಎಲ್.ಕೆ.ಅತೀಕ್ ನೇಮಕ!
ಇದು ಹೊಸ ಸರ್ಕಾರವಲ್ಲ, ಹಳೆಯ ಭ್ರಷ್ಟ ಸರ್ಕಾರದ ಹೊಸ ಮಾರುವೇಷ: ಸಿಎಂ ಡಿಕೆಶಿ ಸಂಪುಟದ ವಿರುದ್ಧ ಆರ್.ಅಶೋಕ್ ಕಿಡಿ







