ಇತ್ತೀಚಿನ ವರ್ಷಗಳಲ್ಲಿ ಸಿಗರೇಟ್‌ಗಳಿಗೆ “ಆರೋಗ್ಯಕರ” ಪರ್ಯಾಯಗಳೆಂದು ಹೇಳಿಕೊಳ್ಳುವ ಉತ್ಪನ್ನಗಳ ಜನಪ್ರಿಯತೆ ಹೆಚ್ಚುತ್ತಿದೆ. ಇವುಗಳಲ್ಲಿ ತಂಬಾಕು ರಹಿತ “ಹರ್ಬಲ್” (ಮೂಲಿಕೆ) ಸಿಗರೇಟ್‌ಗಳು ಪ್ರಮುಖವಾಗಿದ್ದು, ಇವು ಖಿನ್ನತೆ, ಆತಂಕ ಮತ್ತು ಒತ್ತಡವನ್ನು ಕಡಿಮೆ ಮಾಡುತ್ತವೆ ಎಂದು “ಸುರಕ್ಷಿತ” ಮತ್ತು “ನೈಸರ್ಗಿಕ” ಪರ್ಯಾಯಗಳೆಂದು ಮಾರುಕಟ್ಟೆ ಮಾಡಲಾಗುತ್ತಿದೆ.
ಮೇಲ್ನೋಟಕ್ಕೆ, ಸಾಮಾನ್ಯ ಸಿಗರೇಟ್‌ನ ಅತಿದೊಡ್ಡ ಹಾನಿಕಾರಕ ಅಂಶವಾದ ತಂಬಾಕಿನ ನಿಕೋಟಿನ್ ಇದರಲ್ಲಿ ಇಲ್ಲದಿರುವುದು ಸುರಕ್ಷಿತವೆಂದು ತೋರಬಹುದು. ಆದರೆ, ಇತ್ತೀಚಿನ ಅಧ್ಯಯನವು ತಂಬಾಕು ರಹಿತ ಎಂದರೆ ಅಪಾಯ ಮುಕ್ತವಲ್ಲ ಎಂದು ಸ್ಪಷ್ಟಪಡಿಸಿದೆ. ಈ ಹರ್ಬಲ್ ಸಿಗರೇಟ್‌ಗಳು ತಂಬಾಕು ಸಿಗರೇಟ್‌ಗಳಷ್ಟೇ ಅಥವಾ ಅದಕ್ಕಿಂತ ಹೆಚ್ಚಿನ ಹಾನಿಯನ್ನುಂಟುಮಾಡುತ್ತವೆ ಎಂದು ಈ ಅಧ್ಯಯನ ತಿಳಿಸಿದೆ.
ಹರ್ಬಲ್ ಸಿಗರೇಟ್ ಎಂದರೇನು?
ಸಾಮಾನ್ಯ ಸಿಗರೇಟ್‌ಗಳಂತೆ ಇವುಗಳಲ್ಲಿ ತಂಬಾಕನ್ನು ಬಳಸುವುದಿಲ್ಲ. ಬದಲಾಗಿ ಲವಂಗ, ತುಳಸಿ, ಪುದೀನ ಮತ್ತು ದಾಲ್ಚಿನ್ನಿಯಂತಹ ಮೂಲಿಕೆಗಳು ಮತ್ತು ಒಣಗಿದ ಹೂವುಗಳನ್ನು ಬಳಸಲಾಗುತ್ತದೆ. ಇವುಗಳನ್ನು ಸುತ್ತಲು ಕಾಗದದ ಬದಲಿಗೆ ಬೀಡಿಯಂತೆ ‘ತೆಂಡು’ (ebony) ಎಲೆಗಳನ್ನು ಬಳಸುತ್ತಾರೆ.
ಮೇ 17ರಂದು Journal of Hazardous Materials ನಲ್ಲಿ ಪ್ರಕಟವಾದ ಅಧ್ಯಯನವು, ಹರ್ಬಲ್ ಸಿಗರೇಟ್‌ಗಳ ಹೊಗೆಯು ಸಾಮಾನ್ಯ ಸಿಗರೇಟ್‌ನ ಹೊಗೆಗೆ ಸಮನಾಗಿರುತ್ತದೆ ಅಥವಾ ಎಲ್ಲ ಮಾನದಂಡಗಳಲ್ಲೂ ಅದಕ್ಕಿಂತ ಮಿಗಿಲಾಗಿರುತ್ತದೆ ಎಂದು ಕಂಡುಕೊಂಡಿದೆ.
ಗಾಂಧಿನಗರದ ಐಐಟಿ ಮತ್ತು ಇತರ ಸಂಸ್ಥೆಗಳ ಸಂಶೋಧಕರು, ಭಾರತದಲ್ಲಿ ಹೆಚ್ಚು ಮಾರಾಟವಾಗುವ ಎರಡು ತಂಬಾಕು ಬ್ರ್ಯಾಂಡ್‌ಗಳು ಮತ್ತು ತುಳಸಿ, ಲವಂಗ, ದಾಲ್ಚಿನ್ನಿ, ಪುದೀನ, ಗ್ರೀನ್ ಟೀ, ವಾಟರ್ ಲಿಲ್ಲಿ ಮತ್ತು ಚಾಮೊಮೈಲ್ ಒಳಗೊಂಡ ನಾಲ್ಕು ಹರ್ಬಲ್ ವೆರೈಟಿಗಳನ್ನು ಪರೀಕ್ಷಿಸಿದರು. “ನಿಕೋಟಿನ್ ಇಲ್ಲದ ಉತ್ಪನ್ನಗಳು ಕಡಿಮೆ ಹಾನಿಕಾರಕ ಎಂದು ಗ್ರಾಹಕರು ಭಾವಿಸುವುದು ಒಂದು ದೊಡ್ಡ ತಪ್ಪು” ಎಂದು ಸಂಶೋಧಕರು ಎಚ್ಚರಿಸಿದ್ದಾರೆ.
ಮಾನವನ ಶ್ವಾಸಕೋಶದ ಉಸಿರಾಟವನ್ನು ಹೋಲುವ ಎರಡು ಚೇಂಬರ್‌ಗಳ ಸಾಧನದಲ್ಲಿ ಇವುಗಳನ್ನು ಸುಟ್ಟು ಹೊಗೆಯನ್ನು ಸಂಗ್ರಹಿಸಲಾಯಿತು. ಇದರ ವಿಷತ್ವವನ್ನು ಅಳೆಯಲು ‘ಆಕ್ಸಿಡೇಟಿವ್ ಪೊಟೆನ್ಷಿಯಲ್’ (Oxidative Potential) ಅನ್ನು ಬಳಸಲಾಯಿತು. ಇದು ದೇಹದಲ್ಲಿ ಉರಿಯೂತ ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಗೆ ಕಾರಣವಾಗುವ ಪ್ರತಿಕ್ರಿಯಾತ್ಮಕ ಆಮ್ಲಜನಕದ ಕಣಗಳನ್ನು ಉತ್ಪಾದಿಸುವ ಸಾಮರ್ಥ್ಯವಾಗಿದೆ.
ಹರ್ಬಲ್ ಸಿಗರೇಟ್‌ನ ಸೂಕ್ಷ್ಮ ಕಣಗಳು ತಂಬಾಕು ಸಿಗರೇಟ್‌ಗಿಂತ ಗಮನಾರ್ಹವಾಗಿ ಹೆಚ್ಚಿನ ಆಕ್ಸಿಡೇಟಿವ್ ಸಾಮರ್ಥ್ಯವನ್ನು ಹೊಂದಿವೆ. ಎಲೆಗಳಲ್ಲಿ ಸುತ್ತಿದ ಹರ್ಬಲ್ ಸಿಗರೇಟ್‌ಗಳು ಅತೀ ಹೆಚ್ಚು ಅಪಾಯಕಾರಿ ಎಂದು ಕಂಡುಬಂದಿದೆ. ಆಶ್ಚರ್ಯಕರ ವಿಷಯವೆಂದರೆ, “100% ನೈಸರ್ಗಿಕ ಮತ್ತು ರಾಸಾಯನಿಕ ಮುಕ್ತ” ಎಂದು ಮಾರಾಟವಾಗುವ ತುಳಸಿ ಸಿಗರೇಟ್ ಒಂದರಲ್ಲಿ ಅತೀ ಹೆಚ್ಚು ಸೀಸದ (lead) ಸಾಂದ್ರತೆ ಪತ್ತೆಯಾಗಿದೆ.
AIIMS ನಲ್ಲಿದ್ದ ಡಾ. ಹರ್ಷಲ್ ರಮೇಶ್ ಸಾಲ್ವೆ ಅವರ ಪ್ರಕಾರ, ಹರ್ಬಲ್ ಸಿಗರೇಟ್‌ಗಳು ಯುವಜನತೆಯನ್ನು ಗುರಿಯಾಗಿಸಿಕೊಂಡಿವೆ. ತಂಬಾಕು ಸಿಗರೇಟ್‌ನಲ್ಲಿ ನಿಕೋಟಿನ್ ಇದ್ದರೆ, ಈ ಹರ್ಬಲ್ ಮತ್ತು ಇ-ಸಿಗರೇಟ್‌ಗಳಲ್ಲಿ ಬಿಡುಗಡೆಯಾಗುವ ಇಂಗಾಲದ ಕಣಗಳು ಅಷ್ಟೇ ಹಾನಿಕಾರಕ.
ಇವು ತಂಬಾಕು ವ್ಯಸನದಿಂದ ಹೊರಬರಲು ಒಂದು “ಮಧ್ಯಮ ಹಂತ” ಅಥವಾ ಪರಿವರ್ತನೆಯ ದಾರಿ ಎಂದು ಕಂಪನಿಗಳು ಸುಳ್ಳು ಭರವಸೆ ನೀಡುತ್ತಿವೆ. ಸೆಲೆಬ್ರಿಟಿಗಳ ಪ್ರಭಾವ, ಆನ್‌ಲೈನ್‌ನಲ್ಲಿ ಸುಲಭ ಲಭ್ಯತೆ ಮತ್ತು “ಕೂಲ್” ಎಂಬ ಫ್ಯಾಕ್ಟರ್‌ನಿಂದಾಗಿ ಯುವಕರು ಇವುಗಳತ್ತ ಆಕರ್ಷಿತರಾಗುತ್ತಿದ್ದಾರೆ.
ದೀರ್ಘಾವಧಿಯ ಆರೋಗ್ಯ ಪರಿಣಾಮಗಳ ಕುರಿತು ವೈಜ್ಞಾನಿಕ ಸಾಕ್ಷ್ಯಗಳು ಸೀಮಿತವಾಗಿರುವುದರಿಂದ, ಈ ಉತ್ಪನ್ನಗಳು ಕಾನೂನಿನ ಕಣ್ಣು ತಪ್ಪಿಸುತ್ತಿವೆ. ಭಾರತದ ‘ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ ಕಾಯ್ದೆ, 2003’ರ ಅಡಿಯಲ್ಲಿ ಇವು ಬರುವುದಿಲ್ಲ.
”ಇವುಗಳನ್ನು ಆನ್‌ಲೈನ್‌ನಲ್ಲಿ ಯಾವುದೇ ಎಚ್ಚರಿಕೆ ಫಲಕಗಳಿಲ್ಲದೆ ಮಾರಾಟ ಮಾಡಲಾಗುತ್ತಿದೆ, ಇದು ಕಾನೂನಿನ ಚೌಕಟ್ಟನ್ನೇ ಬೈಪಾಸ್ ಮಾಡುತ್ತದೆ” ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಬಾಕ್ಸ್ ಮೇಲೆ ಏನು ಬರೆದಿದೆ ಎಂಬುದಕ್ಕಿಂತ, ಸುಡುವ ಪ್ರಕ್ರಿಯೆ, ಸೂಕ್ಷ್ಮ ಕಣಗಳು ಮತ್ತು ಲೋಹಗಳ ಅಂಶವೇ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಯುವ ಗ್ರಾಹಕರನ್ನು ಸೆಳೆಯುತ್ತಿರುವ ಈ ಉತ್ಪನ್ನಗಳ ಮಾರುಕಟ್ಟೆಯನ್ನು ನಿಯಂತ್ರಿಸಲು ತಕ್ಷಣದ ನೀತಿಗಳ ಅಗತ್ಯವಿದೆ ಎಂದು ಈ ಅಧ್ಯಯನವು ಒತ್ತಿಹೇಳಿದೆ.








