ಬೆಂಗಳೂರು: ಅಂಗಡಿಗೆ ಹೋಗಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವಾಗ ಬ್ಯಾಂಕ್ ಅಕೌಂಟ್‌ನಲ್ಲಿ ದುಡ್ಡಿಲ್ಲ ಎಂದು ಇನ್ಮುಂದೆ ಟೆನ್ಷನ್ ಮಾಡಿಕೊಳ್ಳುವ ಅಗತ್ಯವಿಲ್ಲ! ಭಾರತದ ಪ್ರಮುಖ ಡಿಜಿಟಲ್ ಪಾವತಿ ಸಂಸ್ಥೆಯಾದ ‘ಭಾರತ್‌ಪೇ’ (BharatPe), ಖ್ಯಾತ ‘ಯೆಸ್ ಬ್ಯಾಂಕ್’ (Yes Bank) ಸಹಯೋಗದೊಂದಿಗೆ ಗ್ರಾಹಕರಿಗಾಗಿ ‘ಭಾರತ್‌ಪೇ ಫ್ಲೆಕ್ಸ್’ (BharatPe Flex) ಎಂಬ ವಿನೂತನ ಸೇವೆಯನ್ನು ಮಾರುಕಟ್ಟೆಗೆ ಪರಿಚಯಿಸಿದೆ.
ಇದು ಬ್ಯಾಂಕ್ ಖಾತೆಯಲ್ಲಿ ಹಣವಿಲ್ಲದಿದ್ದರೂ ಯುಪಿಐ ಮೂಲಕ ತುರ್ತು ಪಾವತಿ ಮಾಡಲು ಗ್ರಾಹಕರಿಗೆ ನೆರವಾಗಲಿದೆ.
ಏನಿದು ‘ಭಾರತ್‌ಪೇ ಫ್ಲೆಕ್ಸ್’? ಹೇಗೆ ಕೆಲಸ ಮಾಡುತ್ತದೆ?
ಸಾಮಾನ್ಯವಾಗಿ ನಾವು ಯುಪಿಐ (UPI) ಮೂಲಕ ಹಣ ಪಾವತಿಸಿದಾಗ, ಆ ಮೊತ್ತ ನೇರವಾಗಿ ನಮ್ಮ ಬ್ಯಾಂಕ್ ಖಾತೆಯಿಂದ ಕಡಿತಗೊಳ್ಳುತ್ತದೆ. ಆದರೆ, ‘ಭಾರತ್‌ಪೇ ಫ್ಲೆಕ್ಸ್’ ಎಂಬುದು ಯುಪಿಐ ಆಧಾರಿತ ಒಂದು ‘ಕ್ರೆಡಿಟ್ ಲೈನ್’ (ಸಾಲ ಸೌಲಭ್ಯ) ಆಗಿದೆ.
ಗ್ರಾಹಕರು ಅಂಗಡಿಗಳಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಲು, ಆನ್‌ಲೈನ್ ಶಾಪಿಂಗ್, ಕರೆಂಟ್ ಬಿಲ್ ಪಾವತಿ, ಮೊಬೈಲ್ ರೀಚಾರ್ಜ್ ಹಾಗೂ ಪೆಟ್ರೋಲ್ ಹಾಕಿಸಲು ಈ ಸಾಲದ ಹಣವನ್ನು ಬಳಸಬಹುದು. ಆಕಸ್ಮಿಕವಾಗಿ ಎದುರಾಗುವ ಹಣಕಾಸಿನ ತುರ್ತು ಪರಿಸ್ಥಿತಿಗಳನ್ನು ನಿಭಾಯಿಸಲು ಇದು ಅತ್ಯಂತ ಉಪಯುಕ್ತವಾಗಿದೆ.
ಭಾರತ್ ಪೇ ಫ್ಲೆಕ್ಸ್‌ನ ಪ್ರಮುಖ ವೈಶಿಷ್ಟ್ಯಗಳು:
45 ದಿನಗಳವರೆಗೆ ಬಡ್ಡಿ ಇಲ್ಲ: ಗ್ರಾಹಕರು ಬಳಸಿದ ಹಣವನ್ನು 45 ದಿನಗಳ ಒಳಗಾಗಿ ಮರುಪಾವತಿ ಮಾಡಿದರೆ ಯಾವುದೇ ಬಡ್ಡಿ ವಿಧಿಸಲಾಗುವುದಿಲ್ಲ.
ಸುಲಭ ಇಎಂಐ (EMI) ಸೌಲಭ್ಯ: ಒಂದು ವೇಳೆ ಪೂರ್ತಿ ಹಣವನ್ನು ಒಂದೇ ಬಾರಿಗೆ ಕಟ್ಟಲು ಸಾಧ್ಯವಾಗದಿದ್ದರೆ, ಆ ಮೊತ್ತವನ್ನು ಸುಲಭವಾದ ಮಾಸಿಕ ಕಂತುಗಳಾಗಿ (EMI) ಪರಿವರ್ತಿಸಿಕೊಳ್ಳಬಹುದು.
ಕೇವಲ 3 ನಿಮಿಷಗಳಲ್ಲಿ ಅಪ್ರೂವಲ್: ಭಾರತ್‌ಪೇ ಆ್ಯಪ್ ಮೂಲಕ ಸಂಪೂರ್ಣ ಡಿಜಿಟಲ್ ಆಗಿ (ಕೆವೈಸಿ) ಖಾತೆ ತೆರೆಯಬಹುದು. ಅರ್ಹ ಗ್ರಾಹಕರಿಗೆ ಕೇವಲ 3 ನಿಮಿಷಗಳಲ್ಲಿ ಸಾಲದ ಮಿತಿ ಮಂಜೂರಾಗಲಿದೆ.
ಸ್ಮಾರ್ಟ್ ಟ್ರ್ಯಾಕಿಂಗ್ ಹಾಗೂ ರಿವಾರ್ಡ್ಸ್: ಸಾಲದ ಮೊತ್ತ ಮತ್ತು ಇಎಂಐ ವಿವರಗಳನ್ನು ಆ್ಯಪ್‌ನಲ್ಲೇ ಟ್ರ್ಯಾಕ್ ಮಾಡಬಹುದು. ಜೊತೆಗೆ ಪ್ರತಿ ಪಾವತಿಗೂ ಆಕರ್ಷಕ ರಿವಾರ್ಡ್ಸ್ ಸಿಗಲಿದೆ.
“ಈಗ ಪಾವತಿಸಿ, ನಂತರ ತೀರಿಸಿ” (Pay Now, Settle Later) ಎಂಬ ಪರಿಕಲ್ಪನೆಯೊಂದಿಗೆ ಈ ಹೊಸ ಸೇವೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಕಂಪನಿಯು ವಿಶೇಷ ಜಾಹೀರಾತು ಅಭಿಯಾನವನ್ನು ಹಮ್ಮಿಕೊಂಡಿದೆ.
ಈ ಸೌಲಭ್ಯವನ್ನು ಪಡೆಯುವುದು ಹೇಗೆ?
ಗ್ರಾಹಕರು ಈ ಕೆಳಗಿನ ಸರಳ ಹಂತಗಳ ಮೂಲಕ ‘ಭಾರತ್‌ಪೇ ಫ್ಲೆಕ್ಸ್’ ಆಕ್ಟಿವೇಟ್ ಮಾಡಿಕೊಳ್ಳಬಹುದು:
ಮೊದಲು BharatPe ಆ್ಯಪ್ ತೆರೆದು ‘BharatPe Flex’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಡಿಜಿಟಲ್ ಕೆವೈಸಿ (KYC) ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.
ಮಂಜೂರಾದ ಕ್ರೆಡಿಟ್ ಲಿಮಿಟ್ (ಸಾಲದ ಮಿತಿ) ಅನ್ನು ನಿಮ್ಮ ಯುಪಿಐಗೆ ಲಿಂಕ್ ಮಾಡಿ.
ಹೊಸ ಯುಪಿಐ ಪಿನ್ (UPI PIN) ಸೆಟ್ ಮಾಡಿ.
ಈಗ ನೀವು ಯಾವುದೇ ಯುಪಿಐ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಸುಲಭವಾಗಿ ಪಾವತಿ ಮಾಡಬಹುದು.
ಸಂಸ್ಥೆಗಳ ಮುಖ್ಯಸ್ಥರು ಏನಂತಾರೆ?
ನಳಿನ್ ನೇಗಿ (ಸಿಇಒ, ಭಾರತ್‌ಪೇ):
“ಯುಪಿಐ ವ್ಯವಸ್ಥೆಯು ಭಾರತದ ಪಾವತಿ ವಿಧಾನವನ್ನೇ ಬದಲಾಯಿಸಿದೆ. ಗ್ರಾಹಕರಿಗೆ ತಮ್ಮ ದೈನಂದಿನ ಖರ್ಚುಗಳನ್ನು ಸುಲಭವಾಗಿ ನಿಭಾಯಿಸಲು ಹೆಚ್ಚಿನ ಸ್ವಾತಂತ್ರ್ಯ ನೀಡುವ ಉದ್ದೇಶದಿಂದ ನಾವೀಗ ಯುಪಿಐ ಜೊತೆಗೆ ಸಾಲ ಸೌಲಭ್ಯವನ್ನು ಸೇರಿಸಿ ಭಾರತ್‌ಪೇ ಫ್ಲೆಕ್ಸ್ ಪರಿಚಯಿಸುತ್ತಿದ್ದೇವೆ.”
ಅನಿಲ್ ಸಿಂಗ್ (ಕ್ರೆಡಿಟ್ ಕಾರ್ಡ್ ವಿಭಾಗದ ಮುಖ್ಯಸ್ಥ, ಯೆಸ್ ಬ್ಯಾಂಕ್):
“ಡಿಜಿಟಲ್ ಪಾವತಿ ಮತ್ತು ಕ್ರೆಡಿಟ್ ವ್ಯವಸ್ಥೆಯನ್ನು ಒಗ್ಗೂಡಿಸಿ ಗ್ರಾಹಕರಿಗೆ ಅತ್ಯುತ್ತಮ ಅನುಭವ ನೀಡಲು ನಾವು ಭಾರತ್‌ಪೇ ಜೊತೆ ಕೈಜೋಡಿಸಿದ್ದೇವೆ.”
ಭಾರತ್ ಪೇ ಹಿನ್ನೆಲೆ:
2018ರಲ್ಲಿ ಆರಂಭವಾದ ‘ಭಾರತ್‌ಪೇ’, ಭಾರತದ ಮೊದಲ ‘ಝೀರೋ ಎಂಡಿಆರ್’ ಕ್ಯೂಆರ್ ಕೋಡ್ ಪರಿಚಯಿಸಿದ ಹೆಗ್ಗಳಿಕೆ ಹೊಂದಿದೆ. ಪ್ರಸ್ತುತ ದೇಶದ 450ಕ್ಕೂ ಹೆಚ್ಚು ನಗರಗಳಲ್ಲಿ 1.7 ಕೋಟಿಗೂ ಅಧಿಕ ವ್ಯಾಪಾರಿಗಳನ್ನು ಹೊಂದಿರುವ ಈ ಸಂಸ್ಥೆ, ಪ್ರತಿ ತಿಂಗಳು 45 ಕೋಟಿಗೂ ಹೆಚ್ಚು ಯುಪಿಐ ವಹಿವಾಟುಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದೆ.








